ಮುಂಗಾರು ಹಂಗಾಮಿಗೆ ರಸಗೊಬ್ಬರ-ಬಿತ್ತನೆ ಬೀಜದ ದಾಸ್ತಾನಿಗೆ ಸೂಚನೆ-ಸಚಿವ ಶಿವಾನಂದ ಪಾಟೀಲ

ಮುಂಗಾರು ಹಂಗಾಮಿಗೆ ರಸಗೊಬ್ಬರ-ಬಿತ್ತನೆ ಬೀಜದ ದಾಸ್ತಾನಿಗೆ ಸೂಚನೆ-ಸಚಿವ ಶಿವಾನಂದ ಪಾಟೀಲ  Instructions to stockpile fertilizers and seeds for the monsoon season - Minister Shivanand Patil

ಲೋಕದರ್ಶನ ವರದಿ 

        ಹಾವೇರಿ 11: ಮುಂಗಾರು ಹಂಗಾಮಿಗೆ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು  ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು  ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಹಾವೇರಿ  ಜಿಲ್ಲಾ ಯೋಜನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿ ರೈತರು ಸಮಸ್ಯೆ ಎದುರಿಸಬೇಕಾಯಿತು. ಹಾಗಾಗಿ ರೈತರು ಹೆಸರು, ಶೇಂಗಾ ಸೇರಿದಂತೆ ಎಣ್ಣೆಕಾಳು ಬೆಳೆಗಳ  ಬಿತ್ತನೆಗೆ  ರೈತರಿಗೆ ಈಗಿನಿಂದಲೇ ಅರಿವು ಮೂಡಿಸಬೇಕು ಎಂದು ಸೂಚಿಸಿದರು. 

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಮಾತನಾಡಿ, ಪ್ರಸಕ್ತ ಸಾಲಿಗೆ 1.41 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು,  ಪ್ರಸಕ್ತ ಮಾಹೆಗೆವರೆಗೆ 56,2019 ಮೆಟ್ರಿಕ್ ಟನ್  ರಸಗೊಬ್ಬರ ದಾಸ್ತಾನಿದ್ದು, ಮಾಹೆವಾರು ರಸಗೊಬ್ಬರ ದಾಸ್ತಾನು ಲಭ್ಯವಾಗಲಿದೆ.  ಅದೇ ರೀತಿ 1,69,124 ಕ್ವಿಂಟಲ್  ಬಿತ್ತನೆ ಬೀಜ ದಾಸ್ತಾನು ಲಭ್ಯವಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜದ ಯಾವುದೇ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು. 

         ಶೇ.70 ರಿಂದ 80 ರಷ್ಟು ಮಾವು ಬೆಳೆ ಹಾನಿ: ಮಾವು ಬೆಳೆಗಾಗರಿಗೆ ಬೆಳೆಹಾನಿ ಪರಿಹಾರ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.  ತೋಟಗಾರಿಕೆ ಇಲಾಖೆ  ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಅವರು ಮಾತನಾಡಿ, 23-34ನೇ ಸಾಲಿನ ಬೆಳೆವಿಮೆ ಮಿಸ್ ಮ್ಯಾಚ್963 ಪ್ರಕರಣಗಳ  ಕುರಿತು  ವರದಿ ಸಲ್ಲಿಸಲಾಗಿದೆ. ಪ್ರಸಕ್ತ  ಜಿಲ್ಲೆಯಲ್ಲಿ ಶೇ.70 ರಿಂದ 80 ರಷ್ಟು ಮಾವು ಬೆಳೆ ಹಾನಿಯಾಗಿದ್ದು,  ತಜ್ಞರ ತಂಡ  ಭೇಟಿ ನೀಡಿ ವರದಿ ನೀಡಿದೆ.  ಬೆಳೆ ವಿಮೆ ಹವಾಮಾನ ಆಧಾರಿತವಾಗಿದೆ. ಬೆಳೆ ವಿಮೆ ಪರಿಹಾರ ಬರುವ ಸಾಧ್ಯತೆ ಇದೆ.  ರೈತರು ವಿಶೇಷ ಪ್ಯಾಕೇಜ್‌ಗೆ ಮನವಿ ಮಾಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. 

         ವೈದ್ಯಕೀಯ ಕಾಲೇಜಿಗೆ ನೀರು ಕೊಡಿ:  ಹಾವೇರಿ ವಿಜ್ಞಾನಗಳ ಸಂಸ್ಥೆಗೆ ನೀರು ಕೊಡುವ ಕೆಲಸ ಶೀಘ್ರವಾಗಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ ಅವರು,  ಈ ಕಾಮಗಾರಿಗೆ  ಅವಶ್ಯವಿರುವ ಮಂಜೂರಾತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

         ಜನರಿಗೆ ನೀರು ಕೊಡಿ: ಬೇಸಿಗೆ ಕಾಲವಾದರಿಂದ ಜನರಿಗೆ ನೀರು ಕೊಡುವ ಕೆಲಸ ಆದ್ಯತೆ ಮೇರೆಗೆ ಮೊದಲು ಮಾಡಬೇಕು.  ವಿವಿಧ  ನೀರಾವರಿ ಯೋಜನೆಗಳಡಿ 24*7 ನೀರು ಸರಬರಾಜು ಬಂಕಾಪುರ ಹಾಗೂ ಶಿಗ್ಗಾಂವ ಪಟ್ಟಣಗಳಿಗೆ ಪೂರೈಸುವ ಕೆಲಸವನ್ನು ಕೂಡಲೇ ಮಾಡಬೇಕು.  ಹಾವೇರಿ ನಗರದಲ್ಲಿ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವ ಕುರಿತು ದೂರುಗಳಿದ್ದು,  ಸಂಬಂಧಪ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ನೀರು ಪೂರೈಕೆ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.  

         ವೈದ್ಯಕೀಯ ಸೇವೆ ವಿಸ್ತರಿಸಿ: ಹಾವೇರಿ ವಿಜ್ಞಾನಗಳ ಸಂಸ್ಥೆಗಳ ವಿದ್ಯಾರ್ಥಿಗಳು ಹಾವೇರಿ ನಗರದ ಸುತ್ತಮುತ್ತಲಿನ 20 ಕಿ.ಮೀ.ಅಂತರ ಸರ್ಕಾರಿ ಆಸ್ಪತ್ರೆಗೆ ಸೇವೆ ಲಭ್ಯವಾಗಬೇಕು. ಇದರಿಂದ ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು  ಹಾವೇರಿ ವಿಜ್ಞಾನಗಳ ಸಂಸ್ಥೆಗಳ ಡೀನ್ ಹಾಗೂ ನಿರ್ದೇಶಕರಿಗೆ ಸೂಚನೆ ನೀಡಿದರು. 

         ನರ್ಸಿಂಗ್ ಕಾಲೇಜು ಮಂಜೂರು: ಜಿಲ್ಲೆಗೆ ಹೊಸದಾಗಿ ನರ್ಸಿಂಗ್ ಕಾಲೇಜು ಮಂಜೂರಾಗಿದೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಾಣ ಮಾಡಲಾಗುವುದು.  ಅದೇ ರೀತಿ  ಎಂ.ಐ.ಆರ್‌.ಯಂತ್ರೋಪಕರಣ ಇನ್ನೊಂದು ತಿಂಗಳಿಗೆ ಬರಲಿದ್ದು, ಅದನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು ಎಂದು ಹಾವೇರಿ ವಿಜ್ಞಾನಗಳ ಸಂಸ್ಥೆಗಳ ಡೀನ್ ಹಾಗೂ ನಿರ್ದೇಶಕರು ಮಾಹಿತಿ ನೀಡಿದರು. 

           ಸಹಜ ಹೆರಿಗೆಗೆ ಆದ್ಯತೆ ನೀಡಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಆದ್ಯತೆ ನೀಡಬೇಕು.   ಗರ್ಭಿಣಿಯರ ಶಸ್ತ್ರ ಚಿಕಿಯ್ಸೆ ಬ್ಯಾಡಗಿಯಲ್ಲಿ ಲಂಚ ಪಡೆದ ದೂರು ಇದೆ ಎಂದು ನಾಮನಿರ್ದೇಶಿತರು ಆರೋಪ ಮಾಡಿದ್ದು, ಈ ಕುರಿತು ಪರೀಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಂದ ಲಂಚ ಪಡೆಯಬಾರದು. ಇಂತಹ ಪ್ರಕರಣಗಳು ನಡೆಯದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.   

         ಗುತ್ತಿಗೆದಾರರಿಗೆ ನೋಟೀಸ್‌: ಹಾವೇರಿ-ಹಾನಗಲ್‌-ಶಿರಶಿ, ರಸ್ತೆ ಸೇರಿದಂತೆ ಲೋಕೋಪಯೋಗಿ ಇಲಾಖೆ, ಕೆಶಿಪ್ ಹಾಗೂ ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರದ ರಸ್ತೆ ಕಾಮಗಾರಿಗಳು ಹಾಗೂ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ  ಕಾಮಗಾರಿಗಳಿಗೆ ವೇಗ ನೀಡಬೇಕು, ಪಾಟ್‌ಹೋಲ್ ಕೆಲಸ ಸರಿಯಾಗಿ ನಿರ್ವಹಣೆ ಮಾಡಬೇಕು.  ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. 

ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರ​‍್ಪ ಲಮಾಣಿ ಮಾತನಾಡಿ, ಗುತ್ತಲ ಬಳಿ  ಹಲವಾರು ವರ್ಷಗಳಿಂದ ವಾಸವಾಗಿರುವ ಜನರನ್ನು ಅರಣ್ಯ ಇಲಾಖೆಯವರು  ಒಕ್ಕಲು ಎಬ್ಬಿಸುತ್ತಿದ್ದು, ಎಲ್ಲಿಗೆ ಹೋಗಬೇಕು ಎಂದು ಭಾವನಾತ್ಮಕವಾಗಿ ನುಡಿದರು. ಈ ವಿಷಯವಾಗಿ  ನಮ್ಮ ಜೊತೆಗೆ ಮಾತನಾಡಿಲ್ಲ, ಈ ಕುರಿತು ಪರೀಶೀಲನೆ ನಡೆಸಬೇಕು ಹಾಗೂ ಎಸ್‌.ಐ.ಟಿ ವರದಿ ಬರುವವರೆಗೆ ಕಾಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.   

  ಶಾಸಕರಾದ ಶ್ರೀನಿವಾಸ ಮಾನೆ ಮಾತನಾಡಿ,  ಹಾವೇರಿ-ಹಾನಗಲ್ ರಸ್ತೆಯಲ್ಲಿ ತಗ್ಗು-ಗುಂಡಿಗಳಿಂದ ಹೆಚ್ಚಾಗಿ ದ್ವಿಚಕ್ರ ವಾಹನಗಳ ಅಪಘಾತಗಳು ಸಂಭವಿಸಿ ಗಂಭಿರಗಾಯಗಳಾಗಿ ಕಾಲು-ಕೈ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಸಾವುಗಳು ಸಂಭವಿಸಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದುವರೆ ವರ್ಷದಿಂದ ಈ ಸಮಸ್ಯೆಯಾಗುತ್ತಿದೆ. ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  

ಸ್ಲಂ ಬೋರ್ಡ್‌ನಿಂದ ಮಂಜೂರಾದ ಫಲಾನುಭವಿಗಳು ನಿರ್ಮಾಣ ಮಾಡಿಕೊಂಡ ಮನೆಗಳಿಗೆ ಅನುದಾನ ಮಂಜೂರಾಗಿಲ್ಲ.  ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಗುತ್ತಿಗೆದಾರನಿಗೆ ಹಣ ಮಂಜೂರು ಮಾಡುತ್ತಾರೆ. ಆದರೆ ಆ ಹಣ ಫಲಾನುಭವಿಗಳಿಗೆ  ತಲುಪುತ್ತಿಲ್ಲ. ಈ ಕುರಿತು ಸರ್ವೇ  ನಡೆಸಬೇಕು  ಹಾಗೂ ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಹಣ ಸಂದಾಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ, ಹಾವೇರಿಯಿಂದ ಹಾನಗಲ್ ವರೆಗೆ 80 ಗುಂಡಿಗಳಿದ್ದು, ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ವಿಳಂವಾಗಿದೆ ಬರುವ ಮೇ ಮಾಹೆಯೊಳಗೆ ಎಲ್ಲ ರಸ್ತೆ ತಗ್ಗು-ಗುಂಡಿಗಳನ್ನು ಮುಚ್ಚಿಸಲಾಗುವುದು ಎಂದು ಭರವಸೆ ನೀಡಿದರು.  

ಶಾಸಕ ಪ್ರಕಾಶ ಕೋಳಿವಾಡ ಅವರು ಮಾತನಾಡಿ, ಸ್ಲಂ ಬೋರ್ಡ್‌ ಮನೆಗಳು  ರಾಣೇಬೆನ್ನೂರು ನಗರದ ವಿವಿಧ ಪ್ರತಿಷ್ಠಿತ ಬಡಾವಣೆಗಳಲ್ಲಿ  ನಿರ್ಮಾಣ ಮಾಡಲಾಗಿದೆ. ಈ ಕುರಿತು ತನಿಖೆಯಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.   

ರಾಣೇಬೆನ್ನೂರ ತಾಲೂಕಿನಲ್ಲಿ ಗರ್ಭಕೋಶ ತೆಗೆದ  ಪ್ರಕರಣದ ಫಲಾನುಭವಿಗಳ ಮಾಹಿತಿ  ರಾಜ್ಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಕೂಡಲೇ  ಮಾಹಿತಿ ಸಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಮಾತನಾಡಿ,  ಕಾಲೇಜು ಕಟ್ಟಡಗಳಿಗೆ ಜಾಗ ಇಲ್ಲ ಎಂದು ವರದಿ ಸಲ್ಲಿಸುತ್ತೀರಿ. ಕೆಲವು ಕಡೆಗಳಲ್ಲಿ ಕಾಲೇಜು, ವಿದ್ಯಾರ್ಥಿನಿಲುಗಳ ಕಟ್ಟಡ ನಿರ್ಮಾಣಕ್ಕೆ ಜಾಗವಿದ್ದು  ಅದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಮಂಜೂರಾಗುತ್ತದೆ.  ಲಭವ್ಯವಿರುವ  ಜಾಗದ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಚಿವರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿವಿಧ ಅಭಿವೃದ್ಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಿದರು.  

ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ   ಯಶೋಧಾ ವಂಟಗೋಡಿ, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.