ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ಕಾಲೇಜು-ವಸತಿ ನಿಲಯಗಳಲ್ಲಿ ಜಾಗೃತಿಗೆ ಸೂಚನೆ

ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ  ಕಾಲೇಜು-ವಸತಿ ನಿಲಯಗಳಲ್ಲಿ ಜಾಗೃತಿಗೆ ಸೂಚನೆ Instructions to create awareness in college and hostels about the ill effects of drugs

        ಹಾವೇರಿ 27 : ಮಾದಕವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಹಾಗೂ ಕಾನೂನು ಕ್ರಮಗಳ ಬಗ್ಗೆ, ಜಿಲ್ಲೆಯ ಎಲ್ಲ ಪದವಿ ಪೂರ್ವ, ಪದವಿ,  ಡಿಪ್ಲೋಮಾ, ವೈದ್ಯಕೀಯ ಹಾಗೂ ಇಂಜನೀಯರಿಂಗ್ ಕಾಲೇಜುಗಳಲ್ಲಿ ಮತ್ತು ಎಲ್ಲ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ  ಜಾಗೃತಿ ಮೂಡಿಸಬೇಕು   ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ  ಜರುಗಿದ  ನಾರ್ಕೊ ಸಮನ್ವಯ ಕೇಂದ್ರ (ಓಅಓಖಆ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ಯುವ ಸಮೂಹಕ್ಕೆ ಮಾದಕ ವಸ್ತುಗಳಿಂದ ಉಂಟಾಗುವ ತೊಂದರಗಳ ಬಗ್ಗೆ ಅರಿವು ಮೂಡಿಸಲು ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯಲ್ಲಿ  ಈ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಎಂದು  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಸಹ  ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿವಿಧ ಇಲಾಖೆ ಅಧಿಕಾರಿಗಳು ಸಮಯನ್ವಯದಿಂದ ಮಾಡಬೇಕು ಹಾಗೂ ಆ್ಯಂಟಿ ಡ್ರಗ್ ಕಮೀಟಿ ಬಹಳ ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. 

ಪರೀಶೀಲನೆಗೆ ಸೂಚನೆ: ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಪ್ರದೇಶಗಳಲ್ಲಿ  ಗಾಂಜಾ ಹಾಗೂ ಇತರೆ ಮಾದಕ ಪದಾರ್ಥಗಳ ಬೆಳೆ ಬೆಳೆಯುತ್ತಿರುವ ಕುರಿತು  ಕಾಲಕಾಲಕ್ಕೆ ಆಯಾ ಇಲಾಖೆಗಳು ಪರೀಶೀಲನೆ ನಡೆಸಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಬೆಳೆನಾಶಪಡಿಸಬೇಕು ಹಾಗೂ ಕಾನೂನು ಕ್ರಮಕೈಗೊಳ್ಳಬೇಕು. ಮಾದಕವಸ್ತುಗಳ ಕಳ್ಳ ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು.   ಕೆ.ಎಸ್‌.ಆರ್‌.ಟಿ.ಸಿ.  ಹಾಗೂ ಅಂಚೆ ಕಚೇರಿ   ಪಾರ್ಸ್‌ಲ್‌ಗಳ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಸಿದರು. 

ಓಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಯಾವುದೇ ಮಾತ್ರೆ ಹಾಗೂ ಓಷಧಿಗಳನ್ನು ನೀಡುವಂತಿಲ್ಲ. ಈ ಕುರಿತು ಓಷಧಿ ಅಂಗಡಿಗಳಲ್ಲಿ ಸೂಚನಾ ಫಲಕ ಅಳವಡಿಸಲು ನಿರ್ದೇಶನ ನೀಡುವಂತೆ ಜಿಲ್ಲಾ ಡ್ರಗ್ ಕಂಟ್ರೋಲ್ ಅವರಿಗೆ ಸೂಚನೆ ನೀಡಿದರು.   

ಹಾವೇರಿ ಶಹರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ ಅವರು, ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾದಕ ವ್ಯಸನಿಗಳ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಇತರೆ ಇಲಾಖೆಗಳ  ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಎಂದರು.   

89 ಕೆ.ಜಿ ಮಾದಕ ವಸ್ತು ವಶ:  ಕಳೆದ 2023ರಲ್ಲಿ 10  ಪ್ರಕರಣಗಳಲ್ಲಿ ರೂ. 7,79,600 ಮೊತ್ತದ, 41.576 ಕೆ.ಜಿ., 2024ರಲ್ಲಿ 11  ಪ್ರಕರಣಗಳಲ್ಲಿ ರೂ. 13,79,955 ಮೊತ್ತದ 36.120 ಕೆ.ಜಿ. ಹಾಗೂ ಜನವರಿ 2025ರಲ್ಲಿ 10  ಪ್ರಕರಣದಲ್ಲಿ ರೂ.11,34,929 ಮೊತ್ತದ 40.206 ಕೆ.ಜಿ ಹಾಗೂ 2026-ಫೆಬ್ರವರಿ ಮಾಹೆವರೆಗೆ ಎರಡು ಪ್ರಕರಣಗಳಲ್ಲಿರೂ.3,42,400 ಮೊತ್ತ  8.171 ಕೆ.ಜಿ ಸೇರಿ ಈವರೆಗೆ 33 ಪ್ರಕರಣಗಳಲ್ಲಿ  ರೂ.36,36,884 ಮೊತ್ತದ  89 ಕೆ.ಜಿ.ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಹಾಗೂ 86 ಜನರು ಆರೋಪಿತರಾಗಿದ್ದಾರೆ ಎಂದರು. 

ಸ್ಥಾಯಿ ಆದೇಶ-1052ರಂತೆ ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸನ್ಮಿತ್ರ  ಅನುಷ್ಠಾನಗೊಳಿಸಲಾಗಿದ್ದು,  43 ವ್ಯಸನಿಗಳನ್ನು ಗುರುತಿಸಲಾಗಿದೆ ಹಾಗೂ ಇವರುಗಳಿಗೆ ಸಮಾಲೋಚನೆ ಮೂಲಕ ಮನಃಪರಿವರ್ತನೆ ಕ್ರಮವಹಿಸಲಾಗಿದೆ.  ಹಾವೇರಿ ಜಿಲ್ಲಾ ಘಟಕದ ಮಾದಕ ವಸ್ತು ಸಂಯೋಜನಾ ಸೆಲ್‌ನ ಉಸ್ತುವಾರಿ ಅಧಿಕಾರಿಯಾಗಿ  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್‌.ವೈ.ಶಿರಕೋಳ ಅವರನ್ನು ನೇಮಕ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.  

430 ಜಾಗೃತಿ ಕಾರ್ಯಕ್ರಮ:  ಕಳೆದ 2023ರಲ್ಲಿ 85 ಹಾಗೂ 2024ರಲ್ಲಿ 93  ಹಾಗೂ 2025ರಲ್ಲಿ 252  ಸೇರಿ ಒಟ್ಟು 430 ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ.ಆರ್ ಸುಬ್ರಾನಾಯಕ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಡಾ. ಅಬ್ದುಲ್ ರಶೀದ್ ಮಿರ್ಜಾನವರ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.