ಧಾರವಾಡ 26: ಸೂರ್ಯಗ್ರಹಣದಿಂದ ಯಾವುದಾದರು ಪರಿಣಾಮ ಜೀವ ಸಂಕುಲದ ಮೇಲೆ ಬೀರುವುದಿದ್ದರೆ, ಬರೀ ಮನುಷ್ಯರ ಮೇಲೆ ಅಷ್ಟೇ ಏಕೆ ಬೀರುವುದು? ಪ್ರಾಣಿ, ಪಕ್ಷಿ, ಕೀಟಗಳ ಮೇಲೆ ಏಕೆ ಪರಿಣಾಮ ಬೀರುವುದಿಲ್ಲ. ನಿಸರ್ಗದಲ್ಲಿ ಸಹಜಕ್ರಿಯೆಯಾಗಿರುವ ಗ್ರಹಣಗಳನ್ನು ವೈದಿಕಶಾಹಿ ಪರಂಪರೆಯವರು ಮೂಢನಂಬಿಕೆಗಳನ್ನು ಸೃಷ್ಟಿ ಮಾಡುತ್ತ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದನ್ನು ಇನ್ನಾದರೂ ನಿಲ್ಲಿಸಬೇಕಿದೆ. ಚಂದ್ರನ ಮೇಲೆ ಹೋಗಿ ಬಂದಾಗಿದೆ. ಸತ್ಯ ಗೊತ್ತಿದ್ದರೂ ಗ್ರಹಣದ ಹೆಸರಿನಲ್ಲಿ ಕಂದಾಚಾರಗಳನ್ನು ಆಚರಿಸಲು ಪ್ರೇರೇಪಿಸುವ ವರ್ಗವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ ಎಂದು ವಿಚಾರವಾದಿ ಶಂಕರ ಹಲಗತ್ತಿ ಹೇಳಿದರು. ಅವರು ಭಾರತ ಜ್ಞಾನವಿಜ್ಞಾನ ಸಮಿತಿ ಹಾಗೂ ಪ್ರಗತಿಪರ ಹಲವಾರು ಸಂಘಟನೆಗಳು ಧಾರವಾಡದ ಕಡಪಾ ಮೈದಾನದಲ್ಲಿ ಸೂರ್ಯಗ್ರಹಣದ ಕಾಲಕ್ಕೆ ಅಡುಗೆ ಮಾಡಿ ಉಣ್ಣುವುದು ಮತ್ತು ಸಂವಾದ, ವಿಜ್ಞಾನದ ಹಾಡುಗಳನ್ನು ಹಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡುತ್ತಿದ್ದರು.
ಮನೆಯಲ್ಲಿಯ ನೀರು ತೆಗೆದು ನಳದ ನೀರನ್ನು ತುಂಬುವ ಜನರು ಅರ್ಥಮಾಡಿಕೊಳ್ಳಬೇಕಿದೆ, ಹೊಳೆ, ಹಳ್ಳ, ಕೆರೆ ಕಟ್ಟೆಗಳಲ್ಲಿಯ ನೀರಿಗೂ ಗ್ರಹಣ ದೋಷ ಇರುವುದಿಲ್ಲವೆ? ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಹಾಗೆಯೇ ಪ್ರಾಣಿ ಪಕ್ಷಿಗಳಿಗೇಕೆ ಈ ಭಯ ಅಥವಾ ದೋಷ ಇಲ್ಲ ಎಂಬುದನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ ಇದೊಂದು ನಿಸರ್ಗದಲ್ಲಿ ಸಹಜ ಕ್ರಿಯೆ ಎಂದು. ವಿಜ್ಞಾನ ಯುಗದಲ್ಲೂ ಜೋತಿಷಿಗಳು ಜ್ಯೋತಿಷ್ಯ ಹೇಳುವುದು, ಗ್ರಹಣದಿಂದ ಆಗುವ ದೋಷ ನಿವಾರಣೆಗಾಗಿ ಹೋಮ ಹವನ ಮಾಡುತ್ತಿರುವದು ಖೇದಕರ ಸಂಗತಿ, ಅಕ್ಷರದ ಅರಿವು ಪಡೆದವರು ಇದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು.
ಸಮುದಾಯದ ಬಿ.ಐ. ಈಳಗೇರ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಗುರು ತಿಗಡಿ, ಲಕ್ಕಮ್ಮನವರ, ಚಂದ್ರು ತಿಗಡಿ, ವಿ.ಎನ್. ಕೀತರ್ಿವತಿ, ಎಚ್.ಎಫ್ ಸಮುದ್ರಿ, ಕಲಾವಿದರಾದ ವಿಷಯಾ ಜೇವೂರ, ಸನ್ಮತಿ ಅಂಗಡಿ, ದ್ರಾಕ್ಷಾಯಿಣಿ ಹಿರೇಮಠ, ಗಂಗಾಧರ ಗಡಾದ, ಜಯಶ್ರಿ ಜಾತಿಕರ್ತ, ಶಿವರಾಜ ಕಾಂಬಳೆ, ವಕೀಲರಾದ ಚಂದ್ರಕಾಂತ ಅಂಗಡಿ, ಎಂ. ಸುದರ್ಶರಾಜ, ಎಂ.ಎಂ. ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ಮಾರ್ತಂಡಪ್ಪ ಕತ್ತಿ, ಯಶೋಧಾ ಸವತ್ತಿ, ಎಸ್.ಬಿ. ಮುರನಾಳ, ಸಿ.ಎಂ. ಅಂಗಡಿ, ಶಿವಯೋಗಿ ಪ್ಯಾಟಿಶಟ್ಟರ ಜಯಶ್ರೀ ಚಿನಗುಡಿ, ನೂರಾರು ಚಿಂತಕರು, ಶಿಕ್ಷಕರು ಹಲವಾರು ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ವಿಜ್ಞಾನದ ಹಾಡುಗಳನ್ನು ಹೇಳಿದರು. ಸ್ಥಳದಲ್ಲಿಯೇ ಉಪ್ಪಿಟ್ಟು ಸಿದ್ಧಗೊಳಿಸಿ ನೂರಕ್ಕೂ ಹೆಚ್ಚು ಜನರಿಗೆ ಗ್ರಹಣ ಪ್ರಸಾದ ಎಂದು ನೀಡಿ ತಿನಿಸಲಾಯಿತು. ಸಂವಾದ ಕಾರ್ಯಕ್ರಮ ನಡೆದು ಮುಕ್ತವಾದ ವಿಚಾರಗಳನ್ನು ಹಂಚಿಕೊಳ್ಳಲಾಯಿತು.