ದೂಧಗಂಗಾ ನದಿ ಕಡೆಗೆ ಜಿಲ್ಲಾಡಳಿತ ಪೊಲೀಸ್ ಬ್ಯಾರಿಕೇಡ ಅಳವಡಿಕೆ

ಲೋಕದರ್ಶನ ವರದಿ

ಚಿಕ್ಕೋಡಿ, ಜುಲೈ  09: ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಳೇಶ್ವರ ಹಾಗೂ ಪಾಟಗಾಂವ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಅಬ್ಬರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಗಡಿ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯತೊಡಗಿವೆ. ಚಿಕ್ಕೋಡಿ ಉಪವಿಭಾಗದ ಆರು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿದೆ.

ಭಾರಿ ಮಳೆಯಿಂದ ಹರಿದು ಬರುವ ನೀರಿನಿಂದ ಮೂರು ನದಿಗಳಿಗೆ ಅಪಾರ ಪ್ರಮಾಣದ ನೀರು ಬರಲಾರಂಭಿಸಿದ್ದು, ಹೀಗಾಗಿ ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳು ಮುಳುಗಡೆಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ವೇಧಗಂಗಾ ನದಿಯ ಸಿದ್ನಾಳ-ಅಕ್ಕೋಳ, ಭೋಜವಾಡಿ-ಕುನ್ನೂರ, ಬಾರವಾಡ-ಕುನ್ನೂರ ಸೇತುವೆಗಳು ಬುಧವಾರ ರಾತ್ರಿ ಮುಳುಗಡೆಗೊಂಡಿವೆ. ಎಲ್ಲ ಸೇತುವೆಗಳ ಮೇಲೆ ಎರಡು ಅಡಿಯಷ್ಟು ನೀರು ರಭಸವಾಗಿ ಹರಿಯುತ್ತಿದೆ. 

ಮಹಾ ಮಳೆಯಿಂದ ಗಡಿ ಜನರ ಜೀವನದಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಗಂಟೆ ಗಂಟೆಗೊಮ್ಮೆ ನೀರಿನ ಹರಿವಿನಲ್ಲಿ ಹೆಚ್ಚಳವಾಗುವುದರಿಂದ ಮೂರು ನದಿಗಳು ಅಪಾಯ ಮಟ್ಟ ಮೀರಿ ಹರಿಯತೊಡಗಿದ್ದು,ಇದರಿಂದ ಜಿಲ್ಲಾಡಳಿತ ನದಿ ತೀರದ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜದಿಂದ ಕೃಷ್ಣಾ ನದಿಗೆ 46750 ಕ್ಯುಸೆಕ್ ನೀರು ಹದಿದು ರಾಜ್ಯ್ಕಕೆ ಬರುತ್ತಿದೆ. ದೂಧಗಂಗಾ ಮತ್ತು ವೇಧಗಂಗಾ ನದಿ ಮೂಲಕ 15488 ಕ್ಯುಸೆಕ್ ನೀರು ಹರಿದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೂಡುತ್ತದೆ.  ಹೀಗಾಗಿ ರಾಜ್ಯದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಒಟ್ಟು 62238 ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ ಮೂಲಕ 48 ಸಾವಿರ ಕ್ಯುಸೆಕ್ ನೀರನ್ನು ಆಲಮಟ್ಟಿಗೆ ಹರಿದು ಬಿಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮಾಹಿತಿ ನೀಡಿದರು.

ಮಳೆ ವಿವರ: ಕೋಯ್ನಾ-75 ಮಿಮೀ, ನವಜಾ-87 ಮಿಮೀ, ಮಹಾಬಲೇಶ್ವರ-104ಮಿಮೀ, ವಾರಣಾ-22 ಮಿಮೀ, ಸಾಂಗ್ಲೀ-03 ಮಿಮೀ, ಕೊಲ್ಲಾಪೂರ-10 ಮಿಮೀ, ಕಾಳಮ್ಮವಾಡಿ-41 ಮಿಮೀ, ರಾಧಾನಗರದಿ-72 ಮಿಮೀ, ಪಾಟಗಾಂವ-220 ಮಿಮೀ ಮಳೆಯಾಗಿದೆ. 

ಚಿಕ್ಕೋಡಿ ತಾಲೂಕು: ಚಿಕ್ಕೋಡಿ-3.3 ಮಿಮೀ, ಅಂಕಲಿ-5.2 ಮಿಮೀ, ನಾಗರಮುನ್ನೋಳ್ಳಿ-7,4 ಸದಲಗಾ-14.4 ಮಿಮೀ, ಜೋಡಟ್ಟಿ-11.2 ಮಳೆ ಸುರಿದಿದೆ.