ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಜಗತ್ತು ಪರಿಚಯಿಸುವ ಐಟಿ ಕ್ವಿಜ್‌ಗಳು

ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಜಗತ್ತು ಪರಿಚಯಿಸುವ ಐಟಿ ಕ್ವಿಜ್‌ಗಳು  IT quizzes introduce rural students to the digital world

ಧಾರವಾಡ 10: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ  ಕ್ವಿಜ್‌ಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಆಸಕ್ತಿಯನ್ನು ಮೂಡಿಸುತ್ತಿವೆ. ಇತ್ತೀಚೆಗೆ ಡಿಜಿಟಲ್ ಜ್ಞಾನ ಕ್ವಿಜ್ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಭಾರೀ ಪ್ರತಿಕ್ರಿಯೆ ದೊರಕಿದೆ. ಐಟಿ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಅರಿವು ಪಡೆಯಬಹುದು. ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಉದ್ಯೋಗಾವಕಾಶಗಳನ್ನು ಹುಡುಕಬಹುದಾಗಿದೆ. ಇದರೊಂದಿಗೆ ಗ್ರಾಮೀಣ ಯುವಕರು ಸ್ವಯಂ ಉದ್ಯೋಗಕ್ಕೆ ತಯಾರಾಗಬಹುದು. ಜಾಗತಿಕ ಬದಲಾವಣೆಯ ಅರಿವಿಗೆ ಡಿಜಿಟಲ್ ಜ್ಞಾನ ಅತ್ಯಗತ್ಯವಾಗಿದೆ ಎಂದು ಡಿಡಿಪಿಐ ಎಸ್‌ಎಸ್ ಕೆಳದಿಮಠ ಹೇಳಿದರು. 

 ಇಲ್ಲಿಯ ರಾಯಾಪುರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಟಿಸಿಎಸ್ ಪ್ರಾದೇಶಿಕ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುಗವನ್ನು ಡಿಜಿಟಲ್ ಯುಗವೆಂದು ಕರೆಯಲಾಗುತ್ತದೆ. ಮಾಹಿತಿ ತಂತ್ರಜ್ಞಾನವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹತ್ತರ ಪಾತ್ರವಹಿಸಿದೆ. ನಗರ ಪ್ರದೇಶಗಳಷ್ಟೇ ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿಯೂ ಮಾಹಿತಿ ತಂತ್ರಜ್ಞಾನ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು. 

   ಡಿವೈಪಿಸಿ ಎಸ್‌ಎಂ ಹುಡೇದಮನಿ ಮಾತನಾಡಿ, “ಈ ಕ್ವಿಜ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕುರಿತ ಅರಿವು ಮಾತ್ರವಲ್ಲ, ಆತ್ಮವಿಶ್ವಾಸವೂ ಬೆಳೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ಸಹಾಯವಾಗುತ್ತವೆ.” ಎಂದರು.   ಗ್ರಾಮೀಣ ಐಟಿ ರಸಪ್ರಶ್ನೆ ನೋಡಲ್ ಅಧಿಕಾರಿ ಹಾಗೂ ವಿಜ್ಞಾನ ವಿಷಯ ಪರೀವೀಕ್ಷಕಿ ಡಾ.ಗಿರಿಜಾ ಲಮಾಣಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳಲ್ಲಿ ಟಿಸಿಎಸ್ ಗ್ರಾಮೀಣ ಮಾಹಿತಿ ಮತ್ತು ತಂತ್ರಜ್ಞಾನ ರಸಪ್ರಶ್ನೆಯ ಶಾಲಾ ಹಂತ, ಜಿಲ್ಲಾ ಹಂತಗಳಲ್ಲಿ  ವಿಜೇತರಾಗಿ ವಿಭಾಗ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ನಿಯಮಗಳನ್ನು ತಿಳಿಸಿ ಶುಭ ಕೋರಿದರು. 

  ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ನಫೀಸಾಬಾನು ದಾವಲಸಾಬನವರ, ಪಿಯು ವಿಭಾಗದ ಪ್ರತಿನಿಧಿ ಶ್ರೀಧರ ಹೆಗಡೆ ಭದ್ರನ್, ಟಾಟಾ ಕನ್ಸಲ್ಟೆನ್ಸಿ ಪ್ರಧಾನ ವ್ಯವಸ್ಥಾಪಕಿ ಶೋಭಾ ಮೂರ್ತಿ, ರಸಪ್ರಶ್ನೆ ನಿರೂಪಕಿ ರಶ್ಮಿ ಫುರ್ಟಾಡೊ, ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್ ಪಾಟೀಲ ಕುಲಕರ್ಣಿ ಇದ್ದರು. ವಿಜ್ಞಾನ ಸಂವಹನಕಾರ ಸಂಜೀವಕುಮಾರ ಭೂಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

  ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಮೂಲಭೂತ ಜ್ಞಾನ, ಇಂಟರ್ನೆಟ್ ಬಳಕೆ, ಸಾಫ್ಟವೇರ್‌ಗಳು, ಸೈಬರ್ ಸುರಕ್ಷತೆ ಮುಂತಾದ ವಿಷಯಗಳಲ್ಲಿ ತಮ್ಮ ಅರಿವು ತೋರಿಸಿದರು. ಸಮಾರಂಭದ ಅಂತ್ಯದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು. ಶಿಕ್ಷಕರು ಮತ್ತು ಪಾಲಕರು ಈ ಕ್ವಿಜ್‌ಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಜಗತ್ತಿನತ್ತ ನೂಕುವ    ಸಕಾರಾತ್ಮಕ ಹೆಜ್ಜೆಯೆಂದು" ಅಭಿಪ್ರಾಯಪಟ್ಟರು.