ನಾಳೆಯಿಂದ ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ: ವಿವಿಧ ಕಾರ್ಯಕ್ರಮ
ಕಾಗವಾಡ 14: ತಾಲೂಕಿನ ಕುಸನಾಳ-ಮೊಳವಾಡ ಗ್ರಾಮದ ಸೀಮೆಯಲ್ಲಿರುವ ಉತ್ತರವಾಹಿನಿ ಪುಣ್ಯಕ್ಷೇತ್ರ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಡಿ. 16ರಿಂದ 22ರವರೆಗೆ ಹಬಪ ಕೃಷ್ಣಾ ಮಹಾರಾಜರ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವದ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುಭಾಷ ಶೇವಾಳೆ ಮಹಾರಾಜರು ತಿಳಿಸಿದ್ದಾರೆ. ಅವರು ಶನಿವಾರ ದಿ. 14 ರಂದು ಕಾರ್ಯಕ್ರಮದ ಪೂರ್ವಿ ತಯಾರಿ ವಿಕ್ಷಣೆ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಪಂಢರಪೂರ ಬಿಟ್ಟರೇ ಉತ್ತರವಾಹಿನಿಯಾಗಿ ಹರಿಯುವ ಕೃಷ್ಣಾ ನದಿ ದಡದಲ್ಲಿ ಕಳೆದ ಅನೇಕ ವರ್ಷಗಳ ಹಿಂದೆ, ಶ್ರೀ ವಿಠ್ಠಲ-ರುಕ್ಮೀಣಿ ಮಂದಿರವನ್ನು ಕಟ್ಟಿ, ಈ ಭಾಗದ ಭಕ್ತರ ಪಾಲಿನ ಗುರುಗಳಾಗಿ ಇಲ್ಲಿ ನಡೆದಾಡಿ, ಈ ಕ್ಷೇತ್ರವನ್ನು ಪಾವನವಾಗಿಸಿರುವ ಹಬಪ ಕೃಷ್ಣಾ ಮಹಾರಾಜರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಉದ್ಘಾಟನೆ ಸೋಮವಾರ ದಿ. 16 ರಂದು ವಿಜಯಪೂರ ಜ್ಞಾನಯೋಗಾಶ್ರಮದ ಬಸಲಿಂಗ ಶ್ರೀಗಳು, ಪಂಢರಪೂರದ ಬ್ರಹ್ಮಚೇತನ ಸದ್ಗುರು, ವಿಠ್ಠಲ ವಾಸಕರ ಮಹಾರಾಜರು, ನಂದಿಕುರಳಿಯ ವೀರಭದ್ರ ಶ್ರೀಗಳು, ಸದಲಗಾದ ಶ್ರದ್ಧಾನಂದ ಶ್ರೀಗಳು, ಬಾ.ಸೌಂದತ್ತಿಯ ಶಿವಶಂಕರ ಶ್ರೀಗಳು, ಪಂಢರಪೂರದ ಬ್ರಹ್ಮಚೇತನ ಸದ್ಗುರು, ಹಬಪ ನಾಮದೇವ ವಾಸಕರ ಮಹಾರಾಜರು ಮತ್ತು ಗುರವರ್ಯ ಹಬಪ ಬಾಬಾಸಾಹೇಬ ಬಿಸಲೆ ಮಹಾರಾಜ ಸಾನಿಧ್ಯದಲ್ಲಿ ಶಾಸಕ ರಾಜು ಕಾಗೆ, ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಇವರ ಉಪಸ್ಥಿತಿಯಲ್ಲಿ ನೆರವೇರಲಿದೆ. ಪ್ರತಿದಿನ ವಿವಿಧ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳು ಮತ್ತು 5001 ಜನರಿಂದ ಭವ್ಯ ಗ್ರಂಥರಾಜ ಜ್ಞಾನೇಶ್ವರ ಪಾರಾಯಣ ನಡೆಯಲಿದೆ. ಡಿ. 22 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, 7 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ-ಮಹಾರಾಷ್ಟ್ರದ ಅನೇಕ ಶ್ರೀಗಳು, ರಾಜಕೀಯ ಮುಖಂಡರು, ಗಣ್ಯರು ಮತ್ತು ಅನೇಕ ಭಕ್ತರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಮುಖಂಡರಾದ ಜಯಪಾಲ ಯರಂಡೋಲೆ, ಮಾತನಾಡಿ, 7 ದಿನಗಳ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಜೊತೆಗೆ ಪ್ರತಿದಿನ ಮಹಾಪ್ರಸಾದ ನೆರವೇರಲಿದೆ ಎಂದರು. ಕುಸನಾಳ-ಮೊಳವಾಡ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ನಾಂದಣಿ ಮಾತನಾಡಿ, ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಹಬ್ಬದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡುವುದಾಗಿ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಈ ಪುಣ್ಯ ಕಾರ್ಯಕ್ರಮದ ಲಾಭ ಪಡೆದುಕೊಂಡು ಪಾವನರಾಗಬೇಕೆಂದು ತಿಳಿಸಿದರು. ಕುಸನಾಳ-ಮೊಳವಾಡ-ಇಂಗಳಿ ಗ್ರಾಮದ ಮುಖಂಡರು, ಕೃಷ್ಣಾ ಮಹಾರಾಜ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.