ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ

ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ Guru Vandana from the alumni of Nagathana School

ಲೋಕದರ್ಶನ ವರದಿ 

ವಿಜಯಪುರ 04: ಅಕ್ಷರ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಬೇಕು ಜೊತೆಗೆ ಹಳೆಯ ಶಾಲೆಯ ಸ್ನೇಹಿತರನ್ನು ಭೇಟಿಯಾಗಬೇಕು ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡೋದು ಅಷ್ಟು ಸುಲಭವಲ್ಲ. ಎಲ್ಲರನ್ನೂ ಒಟ್ಟಾಗಿ ಸೇರಿಸಿ, ಎಲ್ಲಾ ಶಿಕ್ಷಕರನ್ನು ಒಗ್ಗೂಡಿಸಿ ಒಂದೇ ವೇದಿಕೆ ಮೇಲೆ ಸನ್ಮಾನಿಸೋದು ಅತ್ಯಂತ ಕಷ್ಟಕರವಾದ ಕೆಲಸ. ಆದರೆ ಪ್ರಯತ್ನ ಪಟ್ಟರೆ ಅದು ಕೂಡ ಸಾಧ್ಯ ಎಂಬುವುದನ್ನು ತಾಲ್ಲೂಕಿನ ನಾಗಠಾಣ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ.  

ಸುಮಾರು ಮೂರು ತಿಂಗಳ ಶ್ರಮ, ಪ್ರತಿದಿನ ಮಿಟೀಂಗ್ ಮಾಡಿ ಹೇಗಾದರೂ ಕಾರ್ಯಕ್ರಮ ಮಾಡಲೇಬೇಕು ಪಾಠ ಕಲಿಸಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲೇಬೇಕು ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲೇಬೇಕು ಎನ್ನುವ ಹಠ ಎಲ್ಲರದ್ದಾಗಿತ್ತು. ಇಂದಿನ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರನ್ನೂ ಹುಡುಕುವ ಪ್ರಯತ್ನ ಮಾಡಿ, ಒಬ್ಬೊಬ್ಬರನ್ನೆ ವಾಟ್ಸ್‌ಪ್ ಗ್ರೂಪ್ ಮೂಲಕ ಸೇರೆ​‍್ಡ ಮಾಡೋಕೆ ಶುರುವಾಯಿತು. ಆ ವಾಟ್ಸ್‌ಪ್ ಗ್ರೂಪ್‌ನಲ್ಲಿ 150ಕ್ಕೂ ಅಧಿಕ ಹಳೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿಕೊಂಡರು. ಬಳಿಕ ಅನಿಸಿದ್ದು ಇನ್ನೇನು ಬೇಕು ಕಾರ್ಯಕ್ರಮ ಮಾಡೋಕೆ ಧೈರ್ಯ ಬಂದಾಯಿತು ಅಂದುಕೊಂಡು ಶಿಕ್ಷಕರನ್ನು ಹುಡುಕುವ ಕೆಲಸಕ್ಕೆ ಕೈಹಾಕಿ, ಶಿಕ್ಷಕರನ್ನ ಸೇರಿಸಿ ಗುರುವಂದನಾ ಜೊತೆಗೆ ಸ್ನೇಹ ಸಮ್ಮಿಲನ ಹೆಸರಿನ್ನಿಟ್ಟು ಕಾರ್ಯಕ್ರಮದ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.  

ಗುರು ಶಿಷ್ಯರ ಸಂಭ್ರಮದ ಸಮಾಗಮ : 2001 ರಿಂದ 2003ರವರೆಗೆ ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಸೇರಿಸಿ ಗುರುವಂದನಾ ಹಾಗೂ ಸ್ನೆಹ ಸಮ್ಮಿಲನ ಹೆಸರಿನಲ್ಲಿ ಒಂದೊಳ್ಳೆ ವೇದಿಕೆಯನ್ನು ನಿರ್ಮಿಸಿ ಕಾರ್ಯಕ್ರಮವನ್ನು ನಡೆಸಲಾಯಿತು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬಹುತೇಕ ಎಲ್ಲಾ ಶಿಕ್ಷಕರು ಭಾಗಿಯಾಗಿದ್ದರು. ಭಾನುವಾರದಂದು  ನಗರದಲ್ಲಿ  ಇಂತಹದೊಂದು ಅದ್ಭುತವಾದ ಕಾರ್ಯಕ್ರಮ ಜರುಗಿತು. ಹಳೆಯ ವಿದ್ಯಾರ್ಥಿಗಳು ಎಲ್ಲರನ್ನೂ ಕಂಡು ಒಂದು ಸಾರಿ ಆಶ್ಚರ್ಯವಾಗಿದ್ದಂತೂ ಸುಳ್ಳಲ್ಲ. ಒಬ್ಬೊಬ್ಬರ ಮುಖದ ಚಹರೆ ಬದಲಾಗಿದೆ. ಅಂತಹವರನ್ನ ಪತ್ತೆ ಮಾಡಿ ಅವರವರ ಹೆಸರನ್ನು ಹೇಳಿಕೊಂಡು ಪರಿಚಯ ಮಾಡಿಕೊಂಡ ಪರಿ ಇದೆಲ್ಲವೂ ಕೂಡ ಹಾರುವ ಹಕ್ಕಿಗೆ ರೆಕ್ಕೆ ಪುಕ್ಕ ಬಂದಂತಾಗಿತ್ತು.  

ಆರಂಭದಲ್ಲಿ ಅಕ್ಷರಗಳನ್ನು ಕಲಿಸುವ ಜೊತೆಗೆ ವಿದ್ಯಾರ್ಥಿಗಳ ನಡೆ-ನುಡಿಯನ್ನು ತಿದ್ದಿ ಜೀವನವನ್ನು ರೂಪಿಸಲು ಮಾರ್ಗದರ್ಶನ ಮಾಡಿದ ಅರಿವಿನ ಗುರುಗಳನ್ನು ವಿದ್ಯಾರ್ಥಿಗಳು ಪುಷ್ಪವೃಷ್ಟಿಗರೆದು ಕಾರ್ಯಕ್ರಮಕ್ಕೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಅಗಲಿದ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕುರಿತು ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು.  ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಅನುಭವವನ್ನು ಹಂಚಿಕೊಂಡರು.