ಭಕ್ತಸಾಗರದ ಮಧ್ಯ ಜರುಗಿದ ಗುಂಡೇಶ್ವರ ರಥೋತ್ಸವ

ಲೋಕದರ್ಶನ ವರದಿ

ಶಿರಹಟ್ಟಿ 29: ಜಗದ್ಗುರು ಫಕ್ಕೀರೇಶ್ವರ ರಥೋತ್ಸವವಾದ ಶುದ್ಧ ದಶಮಿಯ ದಿನವಾದ ಬುಧವಾರ ದಿವಸ ಸಾಯಂಕಾಲ ಶ್ರೀ ಗುಂಡೇಶ್ವರ ರಥೋತ್ಸವವು ಅಪಾರ ಭಕ್ತರ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಇದಕ್ಕೂ ಮೊದಲು ಶ್ರೀ ಗುಂಡೇಶ್ವರ ದೇವಸ್ಥಾನದಲ್ಲಿ 1ಕ್ವಿಂಟಾಲ್ ತೊಗರಿ ಬೇಳೆ ಹಾಗೂ 1 ಕ್ವಿಂಟಾಲ್ ಅಕ್ಕಿಯ ವಿಶೇಷ ಪೂಜೆಯೊಂದಿಗೆ ಅಲಂಕೃತಗೊಂಡ ಗುಂಡೇಶ್ವರನಿಗೆ ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಿ ನಂತರ ಉತ್ಸವ ಮೂತರ್ಿಯನ್ನು ಪಲ್ಲಕ್ಕಿಯಲ್ಲಿ ಸ್ಥಾಪಿಸಿದ ನಂತರ ದೇವಸ್ಥಾನದ ಸುತ್ತ 5 ಬಾರಿ ಪ್ರದಕ್ಷಣೆಯನ್ನು ಹಾಕುವ ಮೂಲಕ ಕೆರೆಯ ದಂಡೆ ಮೇಲಿಂದ ಊರಿನ ರಥ ಬೀದಿಯಲ್ಲಿ ಪಾಲಕಿ ಸಾಗಿ ಊರಿನ ಹೃದಯ ಭಾಗವಾದ ಕೋಟೆಯ ಮುಂಬಾಗದಲ್ಲಿನ ರಂಗು ರಂಗಿನ ಧ್ವಜಗಳಿಂದ ಅಲಂಕೃತಗೊಂಡ ರಥವನ್ನು ಸುತ್ತು ಹಾಕಿ ನಂತರ ರಥದ ಚಕ್ರಕ್ಕೆ ಊರಿನ ಹಿರೇಮಠದ ಗುರುಗಳು ಪೂಜೆ ಸಲ್ಲಿಸಿ ಕಾಯಿ ಒಡೆಯುವದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.

ನಂತರ ರಥ ಸಾಗುತ್ತಿದ್ದಂತೆ ನೆರೆದ ಸಾವಿರಾರು ಭಕ್ತರೆಲ್ಲ ಹರ ಹರ ಮಹಾದೇವ, ಗುಂಡೇಶ್ವರ ಮಹಾರರಾಜ್ ಕಿ ಜೈ ಎಂಬ ಜೈಕಾರಗಳು ಮುಗಿಲು ಮುಟ್ಟುವಂತಿದ್ದವು. ಭಕ್ತರು ಕೋಟೆಯ ಮುಂಬಾಗದಿಂದ ಪಾದಗಟ್ಟೆಯವರೆಗೆ ಎಳೆದು ಭಕ್ತಿಯಿಂದ ಸಂಭ್ರಮಿಸಿದರು. 

ರಥೋತ್ಸವ ನೋಡಲು ಆಗಮಿಸಿದ್ದ ಭಕ್ತರೆಲ್ಲ ಚಲಿಸುತ್ತಿರುವ ರಥಕ್ಕೆ ಭಕ್ತಿಯಿಂದ ತಮ್ಮೆಲ್ಲರ ಮನೋ ಕಾಮನೆಗಳನ್ನು ಪೂರ್ಣಗೊಳಿಸುವಂತೆ ಮನದಲ್ಲಿ ಹರಕೆ ಮಾಡಿಕೊಳ್ಳುತ್ತಾ ಭಕ್ತಿಯಿಂದ ಉತ್ತತ್ತಿ, ನಿಂಬೆಹಣ್ಣು, ಮಾವಿನಹಣ್ಣು, ಬಾಳೆಹಣ್ಣು ಎಸೆದು ಭಕ್ತಿ ಭಾವಕ್ಕೆ ಸಾಕ್ಷಿಯಾದರು. ನಂತರ ಮತ್ತೆ ರಥವು ಕೋಟೆಯ ಮುಂಬಾಗ ತಲುಪಿದ ಮೇಲೆ ಭಕ್ತರೆಲ್ಲರೂ ಗುಂಡೇಶ್ವರನ ದೇವಸ್ಥಾನಕ್ಕೆ ಹೋಗಿ ಅವನ ದರ್ಶನಾಶೀವರ್ಾದ ಪಡೆದು ಪುನೀತರಾದರು.