ಹಾರೂಗೇರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಕ್ಕೂ ಹೆಚ್ಚಿನ ಆದ್ಯತೆ : ಸಚಿವ ದಿನೇಶ ಗುಂಡೂರಾವ್

ಹಾರೂಗೇರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಕ್ಕೂ ಹೆಚ್ಚಿನ ಆದ್ಯತೆ : ಸಚಿವ ದಿನೇಶ ಗುಂಡೂರಾವ್ Guaranteed inauguration of community health center in Harugeri, high priority given to development

ಹಾರೂಗೇರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಕ್ಕೂ ಹೆಚ್ಚಿನ ಆದ್ಯತೆ : ಸಚಿವ ದಿನೇಶ ಗುಂಡೂರಾವ್ 

ಹಾರೂಗೇರಿ 09:  ರಾಜ್ಯದಲ್ಲಿ ಬಾಣಂತಿ, ತಾಯಿ-ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸಲು ಪ್ರತಿಯೊಂದು ತಾಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ತಲಾ 2 ಸ್ತ್ರೀರೋಗ, ಮಕ್ಕಳ ಹಾಗೂ ಅರವಳಿಕೆ ತಜ್ಞರನ್ನು ನೇಮಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಅಗತ್ಯ ಓಷಧಗಳು ಸಿಗುವಂತಾಗಲು ಆರೋಗ್ಯ ಇಲಾಖೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಹೇಳಿದರು. 

  ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಹಾರೂಗೇರಿಯಲ್ಲಿ 30 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾದ ಸಮುದಾಯ ಆರೋಗ್ಯ ಕೇಂದ್ರ, ಮೊರಬ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡಚಿ ಆರೋಗ್ಯ ಕೇಂದ್ರದಲ್ಲಿ ವಸತಿ ಗೃಹ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. 

   ಪುನೀತ್ ರಾಜ್‌ಕುಮಾರ ಹೆಸರಿನಲ್ಲಿ ಪ್ರಾರಂಭವಾದ ಹೃದಯ ಚಿಕಿತ್ಸೆ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ತಾಲೂಕುಗಳಿಗೂ ವಿಸ್ತರಿಸಲಾಗುತ್ತಿದೆ. ತಾಯಿ-ಮಕ್ಕಳ ಆರೋಗ್ಯ ಮತ್ತು ಬಾಣಂತಿಯರ ಸಾವುಗಳನ್ನು ತಡೆಗಟ್ಟಲು 350 ಕೋಟಿ ರೂ ವೆಚ್ಚದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಲಕ್ಷದಲ್ಲಿ 63 ಬಾಣಂತಿಯರು ಸಾವನ್ನಪ್ಪುತ್ತಿದ್ದು, ಮುಂದಿನ 3 ವರ್ಷದಲ್ಲಿ 20 ಸೂಚ್ಯಂಕಕ್ಕೆ ಇಳಿಸಲು ಕ್ರಮಕೈಗೊಳ್ಳಲಾಗುತ್ತಿದೆ.  

   ಜನರ ಆರೋಗ್ಯವನ್ನು ಕಾಪಾಡುವ ಬಹುದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದ್ದು, ಗೃಹ ಆರೋಗ್ಯ ಕಾರ್ಯಕ್ರಮದಡಿ ಆಶಾ ಕಾರ್ಯಕರ್ತೆಯರು, ಎಎನ್‌ಎಮ್, ಸಿಎಚ್‌ಒಗಳು ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಬಿಪಿ ಸಕ್ಕರೆ ಕಾಯಿಲೆ ಕಂಡು ಬಂದಲ್ಲಿ ಅವರಿಗೆ ಜೀವನ ಪರ್ಯಂತ ಉಚಿತವಾಗಿ ಓಷಧ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಕೆಲವು ಮಾರಣಾಂತಿಕ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಲು ಗೃಹ ಆರೋಗ್ಯ ಕಾರ್ಯಕ್ರಮದಿಂದ ಅನುಕೂಲವಾಗಲಿದೆ.   

   ಆಶಾ ಕಾರ್ಯಕರ್ತೆಯರಿಗೆ ಒಂದೂವರೆ ಸಾವಿರ ಗೌರವಧನ ಹೆಚ್ಚಳ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ತೀರ್ಮಾಣಿಸಲಾಗಿದೆ. ಕುಡಚಿ ಮತಕ್ಷೇತ್ರದಲ್ಲಿ ಮೂರು ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅದರಲ್ಲಿ ಒಂದು ಆಸ್ಪತ್ರೆಗೆ ತಾಲೂಕು ಮಟ್ಟದ ಎಲ್ಲ ಸೇವೆಗಳು ಸಿಗುವ ಹಾಗೆ ಮಾಡಿಕೊಡುತ್ತೇನೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.  

  ಹಿಂದಿನ ಸರ್ಕಾರ ಚುನಾವಣೆಗೂ ಮೊದಲು ಒಂದು ತಿಂಗಳಿರುವಾಗ ಘೋಷಣೆ ಮಾಡಿ, ಸಾವಿರಾರು ಕೆಲಸಗಳನ್ನು ಟೆಂಡರ್ ಕರೆದು ಓಡಿಬಿಟ್ಟರು. ಆದರೆ ಕಾಂಗ್ರೆಸ್ ಸರ್ಕಾರ ಆ ಎಲ್ಲ ಕೆಲಸಗಳನ್ನು ಮುಗಿಸಿ, ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಮಾನ್ಯ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿನೂ ಕೊಡುತ್ತಿದೆ. ಜೊತೆಗೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನೂ ಮಾಡುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿಗೆ ಕುಟುಕಿದರು. 

   ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ ಖಣದಾಳ, ಸವಸುದ್ದಿ, ಪರಮಾನಂದವಾಡಿ, ಅಳಗವಾಡಿ, ಹಂದಿಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಕುಡಚಿಯಲ್ಲಿ ಸ್ತ್ರೀರೋಗತಜ್ಞ, ಚಿಕ್ಕಮಕ್ಕಳ ಮಕ್ಕಳ ತಜ್ಞರನ್ನು ನೇಮಕ ಮಾಡಬೇಕೆಂದು ಸಚಿವರಿಗೆ ವಿನಂತಿಸಿದರು. 

   ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆಯ್‌.ಪಿ.ಗಡಾದ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಎಸ್‌.ಗಡೇದ, ತಾಲೂಕು ವೈದ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸುಮೀತ ಪಾಟೀಲ, ಡಾ.ಸತೀಶ ಕಲ್ಲಟ್ಟಿ, ಮಾಜಿ ಶಾಸಕ ಬಿ.ಸಿ.ಸರಿಕರ, ತಹಸೀಲ್ದಾರ ಸುರೇಶ ಮುಂಜೆ, ಪುರಸಭೆ ಮುಖ್ಯಾಧಿಕಾರಿ ವಸಂತ ಲಾಳಿ. ಡಾ.ಸಿ.ಬಿ.ಕುಲಿಗೋಡ, ಧನಪಾಲ ಶಿರಹಟ್ಟಿ, ಎನ್‌.ಎಸ್‌.ಚೌಗಲಾ, ಸಿದ್ದಪ್ಪ ನಾಗನೂರ, ಸಂಜಯ ಬಾನೆ, ಶಂಕರ ನರಗಟ್ಟಿ, ಭೀಮು ಬದ್ನಿಕಾಯಿ, ಸಿದ್ದಪ್ಪ ಹಾಡಕಾರ, ಬಸನಗೌಡ ಆಸಂಗಿ, ಮಹೇಶ ಐಹೊಳೆ, ಪ್ರದೀಪ ಹಾಲ್ಗುಣಿ, ಅಹಮ್ಮದ ಸುಂದರವಾಲೆ, ಬೆಂಗಳೂರಿನ ಮುಖ್ಯ ಇಂಜೀನಿಯರ ಮುಕ್ಕಣ್ಣ ನಾಯ್ಕ, ಧಾರವಾಡದ ಇಂಜೀನೀಯರ ಕೆ.ಮಹಾಂತೇಶ ಮೊದಲಾದ ಗಣ್ಯರು ಉಪಸ್ಥಿತರಿದ್ದರು. 

  ಭೀಮರಾವ ಘಂಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.