ಸ್ಪಷ್ಟ ಗುರಿ ಮತ್ತು ಒಳ್ಳೆಯ ಉದ್ದೇಶದಿಂದ ಸಂಸ್ಥೆಗಳ ಬೆಳವಣಿಗೆ ಸಾಧ್ಯ: ಡಾ. ನಿರಂಜನಕುಮಾರ

ಸ್ಪಷ್ಟ ಗುರಿ ಮತ್ತು ಒಳ್ಳೆಯ ಉದ್ದೇಶದಿಂದ ಸಂಸ್ಥೆಗಳ ಬೆಳವಣಿಗೆ ಸಾಧ್ಯ: ಡಾ. ನಿರಂಜನಕುಮಾರ Growth of organizations is possible with clear goals and good intentions: Dr. Niranjanakumar


ಧಾರವಾಡ 07: ಒಂದು ಸಂಸ್ಥೆಯ ಬೆಳವಣಿಗೆ ಅದಕ್ಕೆ ಹಾಕಿದ ಅಡಿಪಾಯ ಬಹುಮುಖ್ಯ ಪಾತ್ರವಹಿಸುತ್ತದೆ. ಹೇಗೆ ಗಟ್ಟಿಯಾದ ಅಡಿಪಾಯವಿದ್ದಾಗ ಮಾತ್ರ ಮೇಲೆ ಸುಂದರವಾದ ಕಟ್ಟಡವನ್ನು ನಿರ್ಮಿಸಲು ಸಾಧ್ಯವೋ ಹಾಗೇಯೆ ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನಗಳು ಮತ್ತು ಎಲ್ಲ ಸಿಬ್ಬಂದಿಗಳ ಪರಿಶ್ರಮದಿಂದ ಸಂಸ್ಥೆ ಬೆಳವಣಿಗೆ ಹೊಂದುತ್ತದೆ. ಒಂದು ಸ್ಪಷ್ಟ ಗುರಿ ಮತ್ತು ಒಳ್ಳೆಯ ಉದ್ದೇಶಗಳನ್ನು ಹೊಂದಿ ಸ್ಥಾಪನೆಯಾದ ಸಂಸ್ಥೆಗಳು ಯಾವಾಗಲೂ ಯಶಸ್ಸನ್ನು ಕಾಣುತ್ತವೆ. ಪೂಜ್ಯ ಹೆಗ್ಗಡೆಯವರು ಒಳ್ಳೆಯ ಉದ್ದೇಶದಿಂದ ಎಸ್‌.ಡಿ.ಎಂ ಹಾಗೂ ಜೆ.ಎಸ್‌.ಎಸ್ ಸಂಸ್ಥೆಗಳನ್ನು ಸಾಮಾಜಿಕ ಕಳಕಳಿಗಾಗಿ ಸ್ಥಾಪಿಸಿದ್ದು, ಜನರ ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಶ್ರಮಿಸುತ್ತಿವೆ ಎಂದು ಎಸ್‌.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನಕುಮಾರರವರು ಹೇಳಿದರು. ಅವರು ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನತಾ ಶಿಕ್ಷಣ ಸಮಿತಿಯ ವತಿಯಿಂದ ಡಾ. ನಿರಂಜನಕುಮಾರರವರು ಪದ್ಮವಿಭೂಷಣ ಡಾ. ಮುರಳಿ ಮನೋಹರ ಜೋಶಿ, 2025ರ ‘ಜೀವಮಾನ ಸಾಧನಾ ಪ್ರಶಸ್ತಿ’ ಯನ್ನು ಪಡೆದ ನಿಮಿತ್ತ ಆಯೋಜಿಸಲಾಗಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.  

ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪಾದೃಷ್ಠಿಯಿಂದ, ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದ ಬಲದಿಂದ ಮತ್ತು ದಿ. ಡಾ. ನ. ವಜ್ರಕುಮಾರವರು ಸಹಕಾರದಿಂದ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಧಾರವಾಡದಲ್ಲಿ ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆ ತಲೆ ಎತ್ತಿ, ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೇ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಈ ಪ್ರಶಸ್ತಿ ಬರಲು ನನ್ನ ಶ್ರಮಕ್ಕಿಂತ ಹೆಚ್ಚು ಇಲ್ಲಿ ಕಾರ್ಯನಿರ್ವಹಸಿತ್ತಿರುವ ಸಿಬ್ಬಂದಿಗಳ ಶ್ರಮ ಬಹಳಷ್ಟಿದೆ. ಶಿಕ್ಷಣ ಮತ್ತು ಉದ್ಯೋಗ ಕೇವಲ ನಮ್ಮ ಮನೆಗೆ ಮಾತ್ರ ಸೀಮಿತವಾಗಿರದೇ ಸಮಾಜದ ಉದ್ಧಾರಕ್ಕಾಗಿಯೂ ಸಹ ಉಪಯೋಗವಾಗಬೇಕು ಅಂದಾಗ ಮಾತ್ರ ಮಾನವನ ಜೀವನ ಸಾರ್ಥಕ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ತಮ್ಮದೇ ಆದ ಆಸ್ಪತ್ರೆಗಳು, ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಜೆ.ಎಸ್‌.ಎಸ್ ಸಂಸ್ಥೆಯು ಕೂಡ ಸದಾ ನಮಗೆ ಸಹಾಯ, ಸಹಕಾರ ನೀಡುತ್ತ ಬಂದಿದೆ. ಜೆ.ಎಸ್‌.ಎಸ್ ತೋರಿಸಿದ ಗೌರವಕ್ಕೆ ನಾನು ಸದಾ ಚಿರಋಣಿ ಎಂದು ಸಂತೋಷ ವ್ಯಕ್ತಪಡಿಸಿದರು. 

ಪದ್ಮಲತಾ ನಿರಂಜನಕುಮಾರ ಮಾತನಾಡಿ, ನಾವು ಮಾಡುವ ಕೆಲಸ ಕಾರ್ಯಗಳು ಒಳ್ಳೆಯ ಹಾಗೂ ಸರಿಯಾದ ಮಾರ್ಗದಲಿದ್ದರೇ, ಅಂತಹ ಕಾರ್ಯಗಳಿಗೆ ದೇವರ ಆಶೀರ್ವಾದವು ಕೂಡ ಇರುತ್ತದೆ. ಡಾ. ನಿರಂಜನಕುಮಾರವರ ನಿರಂತರ ಸೇವೆ ಹಾಗು ಪರಿಶ್ರಮ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಅವರಿಗೆ ಸದಾ ನಮ್ಮೇಲ್ಲರ ಬೆಂಬಲವಿದೆ ಎಂದು ಹೇಳಿದರು ಜನತಾ ಶಿಕ್ಷುಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ ಡಾ. ನಿರಂಜನಕುಮಾರವರ ಶ್ರಮದ ಪ್ರತೀಕವಾಗಿ ಇಂದು ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳು 2025ನೆಯ ಸಾಲಿನಲ್ಲಿ ಎಸ್‌.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯವು ರಾಜ್ಯ, ದಕ್ಷಿಣವಲಯ ಹಾಗೂ ಅಖಿಲಭಾರತ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.  

ದಂತ ವೈದ್ಯಕೀಯ ಮಹಾವಿದ್ಯಾಲಯ, ಫಿಜಿಯೋಥೆರಪಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ನರ್ಸಿಂಗ್ ವಿಜ್ಞಾನ ಸಂಸ್ಥೆಯು ರಾಜ್ಯಮಟ್ಟದಲ್ಲಿ, ದಕ್ಷಿಣವಲಯ ಮಟ್ಟದಲ್ಲಿ ಅಖಿಲಭಾರತ ಮಟ್ಟದಲ್ಲಿ ಕೂಡ ಒಳ್ಳೆಯ ಸ್ಥಾನದಲ್ಲಿದ್ದು ವಿವಿಧ ಪ್ರಶಸ್ತಿಗಳನ್ನು ಪಡೆಯುವುದರಲ್ಲಿ ಶ್ರೀಯತರ ಶ್ರಮ ಬಹಳಷ್ಟಿದೆ.  ಈಗಾಗಲೇ ಯುನೈಟೆಡ್ ಕಿಂಗ್‌ಡಂದ ಎಫ್‌ಆರ್‌ಸಿಎಸ್ ಪ್ರಶಸ್ತಿ ಹಾಗೂ ಶ್ರವಣಬೆಳಗೊಳದ ‘ಬಾಹುಬಲಿ ಪುರಸ್ಕಾರ’ಗಳಿಗೆ ಭಾಜನರಾಗಿರುವ ಶ್ರೀಯುತರ ಶೈಕ್ಷಣಿಕ ಕೊಡುಗೆಯನ್ನು ಮನ್ನಿಸಿ, ಪದ್ಮವಿಭೂಷಣ ಡಾ. ಮುರಳಿ ಮನೋಹರ ಜೋಶಿ, 2025ರ ‘ಜೀವಮಾನ ಸಾಧನಾ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜೆ.ಎಸ್‌.ಎಸ್‌. ನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಮಹಾವೀರ ಉಪಾದ್ಯೆ, ಡಾ. ಸೂರಜ್ ಜೈನ, ಬಾಬಣ್ಣ ಶೆಟ್ಟಿಗಾರ, ವಿ. ಜಿ ಪ್ರಭು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ದಯಾಶೀಲಾ ಪ್ರದೀಪ ಶೆಟ್ಟಿ ಹಾಗೂ ಜೆ.ಎಸ್‌.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಎಸ್‌.ಡಿ.ಎಂ ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಗಕುಮಾರ ಕಾರ್ಯಕ್ರಮ ನಿರೂಪಿಸಿದರು.