ಬೆಳಗಾವಿಯಲ್ಲಿ ‘ಸಂಚಯ’ ಅಂಚೆ-ಚೀಟಿ ಪ್ರದರ್ಶನಕ್ಕೆ ಭರ್ಜರಿ ಸಮಾರೋಪ

ಬೆಳಗಾವಿಯಲ್ಲಿ ‘ಸಂಚಯ’ ಅಂಚೆ-ಚೀಟಿ ಪ್ರದರ್ಶನಕ್ಕೆ ಭರ್ಜರಿ ಸಮಾರೋಪ  Grand conclusion to the ‘Sanchaya’ stamp exhibition in Belagavi

ಲೋಕದರ್ಶನ ವರದಿ 

ಬೆಳಗಾವಿ  02: ಮಹಾಂತೇಶ ನಗರ ರಹವಾಸಿಗಳ ಸಂಘ, ಭಾರತ ಸರ್ಕಾರದ ಅಂಚೆ ಇಲಾಖೆ ಹಾಗೂ ಬೆಳಗಾವಿ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ "ಸಂಚಯ" ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ ಮೂರು ದಿನಗಳ ವಸ್ತು ಪ್ರದರ್ಶನದ 3 ನೇ ದಿನದ ಸಮಾರಂಭ ಬುಧವಾರ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆಯಿತು. 

ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಜಿ (ಕಾರಂಜಿಮಠ, ಬೆಳಗಾವಿ) ಅವರು, ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆ ನಾಗರಿಕರು ಮತ್ತು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಅತ್ಯಂತ ಸಹಕಾರಿಯಾಗಿದ್ದು, ಇತಿಹಾಸ, ಸಂಸ್ಕೃತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅಮೂಲ್ಯ ಮಾಹಿತಿಯ ಭಂಡಾರವಾಗಿದೆ ಎಂದು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಇಂತಹ ಪ್ರದರ್ಶನಗಳ ಸದುಪಯೋಗ ದೊರಕುವಂತೆ ಪ್ರೋತ್ಸಾಹಿಸಬೇಕು ಎಂದ ಅವರು, ಮಹಾಂತೇಶ ನಗರ ರಹವಾಸಿಗಳ ಸಂಘದ ಜನಪರ ಕಾರ್ಯಗಳನ್ನು ಹಾಗೂ ಪ್ರಸಾದ ಹಿರೇಮಠ ಗೆಳೆಯರ ಬಳಗದ ಸೇವೆಯನ್ನು ಶ್ಲಾಘಿಸಿದರು. 

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ, ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ ವಸ್ತು ಪ್ರದರ್ಶನವು ಇತಿಹಾಸವನ್ನು ಕಲಾತ್ಮಕವಾಗಿ ಪರಿಚಯಿಸುವ ಅಪರೂಪದ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟರು. 

ಉಪ ಮಹಾಪೌರ ಹನುಮಂತ ಕೊಂಗಾಲಿ ಮಾತನಾಡಿ, ಇಂತಹ ಜ್ಞಾನವರ್ಧಕ ಕಾರ್ಯಕ್ರಮಗಳ ಯಶಸ್ಸಿಗೆ ಶಿಕ್ಷಕರ ಸಹಕಾರ ಅಗತ್ಯವಾಗಿದ್ದು, ಮಹಾಂತೇಶ ನಗರ ರಹವಾಸಿಗಳ ಸಂಘದ ಈ ಪ್ರಯತ್ನ ಅಭೂತಪೂರ್ವವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಗುರುವ ಅವರು, ಪ್ರದರ್ಶನವನ್ನು ವೀಕ್ಷಿಸಲು ಜನಸಾಗರ ಹರಿದು ಬರುತ್ತಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದರು. ಸಂಘವು ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.