72 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ

72 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ  Government medical college protest enters 72nd day

                      ವಿಜಯಪುರ 28: ಸಮಿತಿಯಿಂದ  ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅನಿಲ ಹೊಸಮನಿ ಯವರು ಮಾತನಾಡುತ್ತಾ, ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಲ್ಲಿ ಸರಕಾರದ ಧೋರಣೆಯನ್ನು ವಿರೋಧಿಸಿ ಡಿಸೆಂಬರ್ 1 ನೇ ತಾರೀಖಿನಂದು ಬೃಹತ್ ಮೆರವಣಿಗೆ ನಡೆಯುತ್ತಿದೆ. 72 ದಿನಗಳು ಕಳೆದರು ನಮ್ಮ ಜನಪ್ರತಿನಿಧಿಗಳು ಎನಿಸಿಕೊಂಡವರು ಮುಖ್ಯಮಂತ್ರಯವರ ಮನವೊಲಿಸಿ ಸರಕಾರಿ ವೈದ್ಯಕೀಯ ಕಾಲೇಜು ತರುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅದಕ್ಕಾಗಿ ನಾವು ವಿಜಯಪುರ ಜಿಲ್ಲೆಯ ಎಲ್ಲಾ ನಾಗರೀಕರು, ಮಹಿಳೆಯರು ವಿದ್ಯಾರ್ಥಿಗಳು,ಕಾರ್ಮಿಕರನ್ನೊಳಗೊಂಡ ಬೃಹತ್ ಮಟ್ಟದ ಹೋರಾಟವನ್ನು ಸಂಘಟಿಸಿದ್ದೇವೆ.

                      ಹೋರಾಟ ಸಮಿತಿಯ ನಾಯಕರಾದ ಬಿ.ಭಗವಾನ್ ರೆಡ್ಡಿ ಯವರು ಮಾತನಾಡುತ್ತಾ ವಿಜಯಪುರಕ್ಕೆ ಸರಕಾರ ದ್ರೋಹ ಬಗೆಯುತ್ತಿದೆ. ಸ್ವಲ್ಪ ಕೂಡ ಜಾಗವಿರದ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಆರಂಭಿಸಲು ಅವಕಾಶಕೊಟ್ಟಿದೆ.ಇದು ಯಾವುದೇ ಜಾತಿಗೆ,ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಎಲ್ಲರೂ ಒಟ್ಟಿಗೆ ಸೇರಿ  ಪಕ್ಷ ಬೇದ ಮರೆತು ಕಳೆದ 72 ದಿನಗಳಿಂದ ಸಂಸಾರ ಮನೆ ಮಕ್ಕಳನ್ನು ಬಿಟ್ಟು ಯಾವುದೇ ವೈಯಕ್ತಿಕ ಲಾಭವಿಲ್ಲದೆ ಚಳುವಳಿಯಲ್ಲಿದ್ದೇವೆ. ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾದರೆ ವಿಜಯಪುರ ಜಿಲ್ಲೆಯ ಜನರಿಗೆ ಉದ್ಯೋಗ ಕೂಡ ದೊರಕುತ್ತದೆ. ವೈದ್ಯಕೀಯ ಸೌಲಭ್ಯಗಳು ಸಾರ್ವಜನಿಕರಿಗೆ 24 ಗಂಟೆಯೂ ಲಭ್ಯವಿರುತ್ತದೆ. ಜಿಲ್ಲೆಯ ಜನತೆಯ ಜೊತೆ ಆಟವಾಡದೆ ಸರಕಾರ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು.

                     ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ, ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ ಇದಕ್ಕೆ ಸರಕಾರ ತಯಾರಾಗಲಿ ಎಂದು ಹೋರಾಟಕ್ಕೆ ಕರೆ ನೀಡಿದರು. ಹೋರಾಟ ಸಮಿತಿಯ ಹಿರಿಯ ನಾಯಕರುಗಳಾದ ಅಕ್ರಂಮಾಶಳಕರ, ಲಲಿತಾ ಬಿಜ್ಜರಗಿ,ಸುರೇಶ ಬಿಜಾಪುರ, ಸಿದ್ದಲಿಂಗ ಬಾಗೇವಾಡಿ,ಶ್ರೀನಾಥ್ ಪೂಜಾರಿ, ಜಗದೇವ ಸೂರ್ಯವಂಶಿ, ಲಕ್ಷ್ಮಣ ಹಂದ್ರಾಳ, ಬಾಬುರಾವ ಬೀರಕಬ್ಬಿ, ಸಿದ್ರಾಮ ಹಿರೇಮಠ, ಶ್ರೀಕಾಂತ್ ಕೊಂಡಗೂಳಿ ಭರತಕುಮಾರ ಹೆಚ್ ಟಿ, ಮಲ್ಲಿಕಾರ್ಜುನ ಬಟಗಿ, ಗೀತಾ ಹೆಚ್,ನೀಲಾಂಬಿಕಾ ಬಿರಾದರ ಮುಂತಾದವರು ಉಪಸ್ಥಿತರಿದ್ದರು.