ಉತ್ತಮ ಕ್ರೀಡೆಗಳಿಂದ ನಿರ್ಣಾಯಕ ಗುಣಲಕ್ಷಣಗಳು ಅಭಿವೃದ್ಧಿ: ದೇಶಪಾಂಡೆ

ಉತ್ತಮ ಕ್ರೀಡೆಗಳಿಂದ ನಿರ್ಣಾಯಕ ಗುಣಲಕ್ಷಣಗಳು ಅಭಿವೃದ್ಧಿ: ದೇಶಪಾಂಡೆ Good sports develop crucial qualities: Deshpande


ಮುಧೋಳ 06: ಕ್ರೀಡೆಗಳು ವಿದ್ಯಾರ್ಥಿಗಳಿಗೆ ದೈಹಿಕ ಸದೃಡ ಆರೋಗ್ಯವನ್ನು ಹೆಚ್ಚಿಸುವ ಮೂಲಕ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ, ಇದರಿಂದ ಸಾಮಾಜಿಕ ಮತ್ತು ಸಾಮೂಹಿಕ ಸಂವಹನದಂತಹ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ, ಉತ್ತಮ ಕ್ರೀಡೆಗಳಿಂದ ಶಿಸ್ತು ಮತ್ತು ಆತ್ಮ ವಿಶ್ವಾಸದಂತಹ ನಿರ್ಣಾಯಕ ಗುಣಲಕ್ಷಣಗಳು ಅಭಿವೃದ್ಧಿಹೊಂದಿ ಕ್ರೀಡಾಪಟುಗಳ ಗಮನ, ಸ್ಮರಣೆ ಮತ್ತು ಸಮಯ ನಿರ್ವಹಣೆಯನ್ನು ಸುಧಾರಿಸುತ್ತದೆ ಹಾಗೂ ಶೈಕ್ಷಣಿಕ ಯಶಸ್ಸನ್ನು ಬೆಂಬಲಿಸುವ ಮೂಲಕ ಪ್ರಯೋಜನವನ್ನು ನೀಡುತ್ತವೆ, ಈ ಚಟುವಟಿಕೆಗಳು ನಾಯಕತ್ವಕ್ಕೆ ಅವಕಾಶ ಗಳನ್ನು ಒದಗಿಸುತ್ತವೆ, ಭಾವನೆಗಳನ್ನು ನಿರ್ವಹಿಸುವಲ್ಲಿ ಮತ್ತು ಸೋಲನ್ನು ನಿಭಾಯಿಸುವಲ್ಲಿ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ ಮತ್ತು ದೀರ್ಘಕಾಲೀನ ಆರೋಗ್ಯ ಮತ್ತು ವೃತ್ತಿ ಪ್ರಗತಿಗೆ ಕೊಡುಗೆ ನೀಡಬಹುದೆಂದು ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿ ಆನಂದ ದೇಶಪಾಂಡೆ ಅವರು ಹೇಳಿದರು. 

  ಬಾಗಲಕೋಟ ಬಿವ್ಹಿವ್ಹಿ ಸಂಘದ ನಗರದ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಇಂಡೋರ್ ಸ್ಟೇಡಿಯಂ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಬಾಗಲಕೋಟ ವಿಶ್ವ ವಿದ್ಯಾಲಯ, ಜಮಖಂಡಿ ಇದರ ವ್ಯಾಪ್ತಿಯ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕಮ್ ಸೆಲೆಕ್ಷನ್ ಹಾಗೂ ಪುರುಷರ ಬಾಕ್ಸಿಂಗ್ ಸೆಲೆಕ್ಷನ್ ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಕ್ರೀಡಾಪಟುಗಳು ತಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು, ಕ್ರೀಡಾಪಟುಗಳಿಗೆ ಭವಿಷ್ಯತ್ತಿನಲ್ಲಿ ಉತ್ತಮ ಅವಕಾಶಗಳು ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾದ್ಯವಿದೆ ಎಂದು ಹೇಳಿ ಬಾಗಲಕೋಟ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒಳ್ಳೆಯ ಕ್ರೀಡಾಪಟುಗಳಿದ್ದು ಅವರು ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆಂದು ಹೇಳಿದರು.  

ಕಾಲೇಜಿನ ಪ್ರಾಚಾರ್ಯ ಡಾ.ಎಮ್‌.ಆರ್‌.ಜರಕುಂಟಿ ಅಧ್ಯಕ್ಷತೆವಹಿಸಿ ಮಾತನಾಡಿ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಕ್ರೀಡೆಗೂ ಪ್ರಾಮುಖ್ಯತೆ ಕೊಡಬೇಕು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯವಿದೆ, ಕ್ರೀಡೆಗಳಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಿ ಬೆಳೆಯಬೇಕು, ಕ್ರೀಡೆಗಳಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅದನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು, ಗುರಿ ಮತ್ತು ಕಠಿಣ ಪರಿಶ್ರಮ ಇದ್ದಲ್ಲಿ ಯಶಸ್ಸು ಖಂಡಿತಾ ಸಾಧ್ಯ ಎಂಬುದನ್ನು ಮನಗಾಣಬೇಕು ಎಂದರು. ಬಾಗಲಕೋಟ ವಿಶ್ವವಿದ್ಯಾಲಯದ ಕ್ರೀಡಾ ಸಂಯೋಜಕ ಡಾ.ಕುಂತಿನಾಥ ಶಿರಹಟ್ಟಿ ಅತಿಥಿ ಸ್ಥಾನವಹಿಸಿ ಸಾಂದರ್ಬಿಕವಾಗಿ ಮಾತನಾಡಿದರು, ಐಕ್ಯೂಎಸಿ ಸಂಯೋಜಕ ಅಜ್ಜಪ್ಪ ಕಡೂರ ವೇದಿಕೆ ಮೇಲಿದ್ದರು. ಕ್ರೀಡಾ ಸಂಯೋಜಕ ವೀರಣ್ಣ ಕಿತ್ತೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ದೈಹಿಕ ನಿರ್ದೇಶಕ ಅನೀಲಕುಮಾರ ಮುನ್ನೊಳ್ಳಿ ಅತಿಥಿಗಳನ್ನು ಪರಿಚಯಿಸಿದರು, ಉಪನ್ಯಾಸಕಿ ರಾಧಾ ಮಾಲಿಪಾಟೀಲ ನಿರೂಪಿಸಿದರು, ಉಪನ್ಯಾಸಕ ಪಿ.ಡಿ.ಕುಂಬಾರ ವಂದಿಸಿದರು, ವಿದ್ಯಾರ್ಥಿನಿ ಭಕ್ತಿ ಕಾಖಂಡಕಿ ಪ್ರಾರ್ಥನೆ ಹೇಳಿದರು.