ಉಚಿತ ಎಫ್‌ಸಿಎಮ್ ಚುಚ್ಚುಮದ್ದು ತಪ್ಪದೇ ಪಡೆಯಿರಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

Get Free FCM Injections Without Missing: Dr. Yalla Ramesh Babu

 ಉಚಿತ ಎಫ್‌ಸಿಎಮ್ ಚುಚ್ಚುಮದ್ದು ತಪ್ಪದೇ ಪಡೆಯಿರಿ:  ಡಾ.ಯಲ್ಲಾ ರಮೇಶ್ ಬಾಬು 

ಬಳ್ಳಾರಿ 27: ಗರ್ಭಿಣಿಯರಲ್ಲಿ ರಕ್ತಹೀನತೆ ಇದ್ದಲ್ಲಿ ನಿರ್ಲಕ್ಷಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಫ್‌ಸಿಎಮ್ ಚುಚ್ಚುಮದ್ದು ಹಾಕಿಸಿ ರಕ್ತಹೀನತೆ ತಡೆಗೆ ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಸಿರಗುಪ್ಪ ಪಟ್ಟಣದ ಹೊರವಲಯದ ವಲಸೆ ಜನವಿರುವ ಸಿದ್ದಪ್ಪ ನಗರಕ್ಕೆ ಗರ್ಭಿಣಿ ಮಹಿಳೆಯರ ಮನೆ ಭೇಟಿ ಮಾಡಿ ಸ್ಥಳೀಯ ಜನತೆಯೊಂದಿಗೆ ಅವರು ಮಾತನಾಡಿದರು. 

ಮನೆಯಲ್ಲಿ ಗರ್ಭಿಣಿಯಿದ್ದರೆ ಅವರು ಮನೆಯ ಮಗಳಾಗಿರಲಿ ಅಥವಾ ಸೊಸೆಯಾಗಿರಲಿ ಯಾವುದೇ ಕಾರಣಕ್ಕೂ ರಕ್ತಹೀನತೆಯಾಗದಂತೆ ಕಾಳಜಿ ವಹಿಸಬೇಕು. ಈ ದಿಶೆಯಲ್ಲಿ  ದುಬಾರಿಯಾದ ಎಫ್‌.ಸಿ.ಎಮ್ ಚುಚ್ಚುಮದ್ದನ್ನು ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. 

ನಿಮ್ಮ ವೃತ್ತಿಯೊಂದಿಗೆ ಮನೆಯಲ್ಲಿನ ಗರ್ಭಿಣಿಯ ಆರೈಕೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಊಟವಾದ ಒಂದು ಗಂಟೆಯ ನಂತರ ತಪ್ಪದೇ ನುಂಗಿಸಬೇಕು. ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆಗಳನ್ನು, ಗಾಳಿಸುದ್ದಿಗಳನ್ನು ನಂಬಬಾರದು. ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಸೇವಿಸಬೇಕು ಎಂದು ಅವರು ವಿನಂತಿಸಿದರು. 

ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಅಂದರೆ ಚೊಚ್ಚುಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ ಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೆ ನಿರ್ಲಕ್ಷಿಸಬಾರದು. ಅಲ್ಲದೆ ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು ಎಂದು ಹೇಳಿದರು. 

*ಪೌಷ್ಟಿಕ ಆಹಾರ ತಪ್ಪದೆ ನೀಡಿ:* 

ಗರ್ಭಿಣಿ ಮಹಿಳೆಯರಿಗೆ ಮೊಳಕೆ ಕಾಳು, ಹಸಿರು ತಪ್ಪಲು ಪಲ್ಯ ಮೊಟ್ಟೆ, ಮೀನು, ಸಾಂಸ್ಕೃತಿಕವಾಗಿ ಒಪ್ಪಿದರೆ ಮಾಂಸಹಾರಿ ಊಟ, ಋತುಮಾನದ ಹಣ್ಣುಗಳನ್ನು ತಪ್ಪದೇ ಕೊಡಬೇಕು. ಇದಕ್ಕೆ ಬೆಂಬಲವಾಗಿ ಈಗಾಗಲೇ ಪ್ರತಿ 9 ಹಾಗೂ 24 ತಾರೀಖುಗಳಂದು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಯೊಂದಿಗೆ ಪೌಷ್ಠಿಕತೆ ಇರುವ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. 

*ರಕ್ತ ಶೇಖರಣಾ ಘಟಕ ಆರಂಭ:* 

ಗರ್ಭಿಣಿ ಸೇರಿದಂತೆ ಇತರರಿಗೆ ರಕ್ತದ ಅವಶ್ಯಕತೆ ಇದ್ದರೆ ಒದಗಿಸಲು ಮೋಕಾ, ಕುರುಗೋಡು, ಕಂಪ್ಲಿ, ತೋರಣಗಲ್ಲು ಆರೋಗ್ಯ ಕೇಂದ್ರಗಳಲ್ಲಿ ರಕ್ತ ಶೇಖರಣಾ ಘಟಕ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ತಿಳಿಸಿದರು. 

*ಹೆರಿಗೆ ದಿನಾಂಕ 3 ದಿನ ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ:* 

ಹೆರಿಗೆಗೆ ನೀರೀಕ್ಷಿತ ದಿನಾಂಕದ 3 ದಿನ ಮೊದಲು ಗರ್ಭಿಣಿಯರು ಅದರಲ್ಲೂ ಗಂಡಾಂತರಕಾರಿ ಲಕ್ಷಣಗಳುಳ್ಳವರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಸರಳ ಹೆರಿಗೆಯ ಅವಕಾಶಗಳಿಗೆ ಬೆಂಬಲಿಸಬೇಕು ಎಂದು ಕೋರಿದರು.  

*ಮಕ್ಕಳ ಜನನದ ಮಧ್ಯ ಅಂತರಕ್ಕಾಗಿ ತಾತ್ಕಾಲಿಕ ವಿಧಾನ ಬಳಸಿ:* 

ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಠ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ್‌-ಟಿ, ನೀರೊಧ್  ಬಳಸಲು ವಿನಂತಿಸಿದರು.  

ಈ ಸಂದರ್ಭದಲ್ಲಿ ಸಿರುಗುಪ್ಪ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್ ದಮ್ಮೂರ್, ಜಿಲ್ಲಾ ಆರೋಗ್ಯ ಶಿಕ್ಷಣಾದಿಕಾರಿ ಈಶ್ವರ ಹೆಚ್ ದಾಸಪ್ಪನವರ, ಅಂಗನವಾಡಿ ಸಹಾಯಕಿಯರು, ಸ್ಥಳೀಯರಾದ ಅಶೋಕ, ಕಾಸಿಮ್, ಹುಸೇನ್, ಶಿವಶಂಕರ ಉಪಸ್ಥಿತರಿದ್ದರು.