82ನೇ ದಿನದ ಬಲ್ಡೋಟ ಹಠಾವೋ ಧರಣಿಗೆ ಗವಿಸಿದ್ದೇಶ್ವರ ಪ.ಪೂ. ವಿದ್ಯಾರ್ಥಿಗಳ ಬೆಂಬಲ

82ನೇ ದಿನದ ಬಲ್ಡೋಟ ಹಠಾವೋ ಧರಣಿಗೆ ಗವಿಸಿದ್ದೇಶ್ವರ ಪ.ಪೂ. ವಿದ್ಯಾರ್ಥಿಗಳ ಬೆಂಬಲ Gavisiddeshwar P.C. students support the 82nd day of Baldota Hathao Dharani

         ಕೊಪ್ಪಳ: ಬಂಕಿಮಚಂದ್ರ ಚಟರ್ಜಿ ಅವರ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ ವಂದೇ ಮಾತರಂ ಗೀತೆಯ ಮಹತ್ವವನ್ನು ಖ್ಯಾತ ಸಾಹಿತಿ ಬಿ. ಪೀರ್ ಬಾಷ ಉಲ್ಲೇಖ ಮಾಡಿ ಮಾತನಾಡಿ ಇಲ್ಲಿ 'ಶುದ್ಧವಾದ ತಿಳಿಯಾದ ಜಲ, ಹಣ್ಣು ಹಂಪಲು, ಪರ್ವತದ ತಂಗಾಳಿಯಿಂದ ತಂಪಾಗಿರುವ, ಹಸಿರು ಹರಿದ್ವರ್ಣ ಇರುವ ತಾಯಿ ಭಾರತ ಮಾತೆ ನಿನಗೆ ವಂದಿಸುವೆ ಎನ್ನುತ್ತೇವೆ. 

ಇಂತ ದೇಶದ ತಿಳಿಕೊಳದ ಗಂಗೆ ಈ ಕಾರ್ಖಾನೆಗಳ ದಾಹ ತೀರಿಸಲಾಗದೆ  ವಿಷವಾಗಿದ್ದಾಳೆ. ಆ ವಿಷದ ನಂಜು ಭಾರತ ಮಾತೆಯ ಮಕ್ಕಳಾದ ನಾವು ಕುಡಿದು ನಂಜುಂಡರಾಗಲು ಸಾಧ್ಯವೇ? ಮಲಯಗಳ ಮೇಲಿಂದ ಬರುವ ತಂಗಾಳಿಯಾಗಿ ಬೀಸುವ ಗಾಳಿ ಇಲ್ಲಿಯೇ ನಮ್ಮ ವಾಯುಪುತ್ರ ಆಂಜನೇಯ ಉದಯಿಸಿದ ನಾಡು ನಮ್ಮದು. ಅಂಥ ಜೀವಾತ್ಮ ಗಾಳಿದೇವ ಉದಯಿಸಿದ ಈ ನೆಲವೀಗ ಕಾರ್ಖಾನೆಗಳ ಉಗುಳುವ ವಿಷಾನಿಲವು ಜನರ ಜೀವ ತೆಗೆಯುತ್ತಿದೆ. ಅಂದರೆ ನಾವು ಸುಮ್ಮನಿರಬೇಕೇ? ಈ ಹೋರಾಟ ಕಾರ್ಖಾನೆ ವಿರುದ್ಧವಲ್ಲ. ನಮ್ಮನ್ನು ಬದುಕಲು ಬಿಡಿ, ಜೀವ ತೆಗೆಯಬೇಡಿ ಎನ್ನುವುದಾಗಿದೆ ಎಂದರು. 

ಕ್ವಿಟ್ ಇಂಡಿಯಾ ಎನ್ನುವ ಶಬ್ಧ ಭಯಾನಕವಾದದ್ದು. ಆದರೆ ಇಲ್ಲಿ ಕ್ವಿಟ್ ಬಲ್ಡೋಟ ಎನ್ನುವುದನ್ನು ಕಂಡಾಗ ಕೊಪ್ಪಳ ಪರಿಸ್ಥಿತಿ ಬಲ್ಡೋಟ ಕಾರ್ಖಾನೆ ಮಾಡುವ ಹಾನಿಯ ಭೀತಿ ಅದಕ್ಕಿಂತ ದೊಡ್ಡದಾಗಿ ಬೆಳೆದು ನಿಂತಿದೆ. ಈ ಹೋರಾಟ ಕೇವಲ ಕೊಪ್ಪಳ ಜನರದ್ದಲ್ಲ. ಇದು ಇಡೀ ರಾಜ್ಯದ ಜನ ಮಿಡಿಯುವ, 2 ಲಕ್ಷ ಜನರ ಜೀವ ಉಳಿಸುವ ಹೋರಾಟ. ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತರು ಭಾಗವಹಿಸುವ ಸಮಯ ಬಂದಿದೆ. ಈ ಹೋರಾಟ ಗೆದ್ದೆಗೆಲ್ಲುತ್ತದೆ ಎಂದರು. 

ಎಸ್‌. ಜಿ. ಕಾಲೇಜು ವಿದ್ಯಾರ್ಥಿ ನಂದೀಶ ಅಗಸಿಮನಿ ಮಾತಾಡಿ, ನಾನು ಹನುಮನಹಳ್ಳಿ ಗ್ರಾಮದವನು. ನಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಗೆ ಕಪ್ಪುಕಂದು ದೂಳು, ಹೊಗೆ ಮುಚ್ಚಿಕೊಂಡು  ಫಸಲು ಬರುತ್ತಿಲ್ಲ. ದೂಳಿನ ಕಾರಣದಿಂದ ನಮ್ಮ ತಂದೆ ಕೃಷಿ ನಷ್ಟದಿಂದ ಒದ್ದಾಡುತ್ತಿದ್ದಾರೆ. ಇನ್ನು ನಮ್ಮ ಗ್ರಾಮವೂ ಇದರಿಂದ ಹೊರತಾಗಿಲ್ಲ ಎಂದು ತನ್ನ ಅಳಲು ತೋಡಿಕೊಂಡನು. 

ಮತ್ತೊಬ್ಬ ವಿದ್ಯಾರ್ಥಿ ಬಸವರಾಜ ಗಾರವಾಡ ಮಾತನಾಡಿ, ಈ ಬಲ್ಡೋಟ ಕಾರ್ಖಾನೆಯ ಒಂದು ಕೊಳವೆಯಿಂದ ಬರುವ ಕಂದು ಮಿಶ್ರಿತ ಕಪ್ಪು ದೂಳು ಕಾಲೇಜಿನ ಡೆಸ್ಕ್‌ ಮೇಲೆ ಬಂದು ಬೀಳುತ್ತದೆ. ಅದನ್ನು ನಾವು ಗೊತ್ತಿಲ್ಲದಂತೆ ಉಸಿರಾಡುತ್ತೇವೆ. ಇದರಿಂದ ರೋಗಗಳು ಬಂದರೆ ಯಾರು ಹೊಣೆ? ಆರೋಗ್ಯ ಸಮಸ್ಯೆಯಾಗುವ ಈಗಿರುವ ಘಟಕವೂ ಮುಚ್ಚಬೇಕು ಎಂದನು.  

ವಿದ್ಯಾರ್ಥಿಗಳಾದ ಯಶವಂತ ಪಾಟೀಲ್, ಸಚಿನ್ ಗಡಾದ ಮಾತನಾಡಿ ನಮ್ಮ ಅಜ್ಜಾರು ಗವಿಶ್ರೀಗಳು ಈಗಾಗಲೇ ಹೋರಾಟಕ್ಕೆ ಚಾಲನೆ ನೀಡಿದ್ದು, ಅದನ್ನು ಯಶಸ್ವಿಗೊಳಿಸಲು ಹೋರಾಟ ಮುಂದುವರೆಸಬೇಕಿದೆ, ಮತ್ತೊಮ್ಮೆ ಬೃಹತ್ ಹೋರಾಟಕ್ಕೆ ಎಲ್ಲರೂ ಸೇರೋಣ ಎಂದರು. 

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಹಿರಿಯ ಸಾಹಿತಿ ಎಚ್‌.ಎಸ್‌. ಪಾಟೀಲ್, ವೇದಿಕೆ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಬಿ.ಜಿ.ಕರಿಗಾರ, ಮಹಾದೇವಪ್ಪ ಎಸ್‌. ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ, ಮಂಜುನಾಥ ಕವಲೂರು, ರತ್ನಮ್ಮ ದೊಡ್ಡಮನಿ, ವಿದ್ಯಾರ್ಥಿ ವಿನಾಯಕ ಮೇಟಿ, ಹನುಮಂತ ಪೂಜಾರ, ಮಲ್ಲಿಕಾರ್ಜುನ ಹುಲಿಕೇರಿ, ಮಲ್ಲೇಶಗೌಡ ಕುಷ್ಟಗಿ, ಈರಣ್ಣ ನೋಟಗಾರ, ಬಸವರಾಜ ನರೆಗಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಶೆಟ್ಟರ್, ಮಖ್ಬುಲ್ ರಾಯಚೂರು, ಯಮನೂರ​‍್ಪ ಹಾಲಳ್ಳಿ ಬಸಾಪುರ ಪಾಲ್ಗೊಂಡರು.