ಮಿರಜ್‌ನ ಶಾಂತಿ ಸರೋಜ ನೇತ್ರಾಲಯದಿಂದ ಕುಸನಾಳದಲ್ಲಿ ಉಚಿತ ನೇತ್ರ ತಪಾಸನೆ ಶಿಬಿರ
ಕಾಗವಾಡ 14 : ಮಿರಜ್ ಪಟ್ಟಣದ ಖ್ಯಾತ ನೇತ್ರ ಚಿಕಿತ್ಸಾ ವೈದ್ಯರಾದ ಡಾ. ಶರದ ಭೋಮಾಜ ಮತ್ತು ಡಾ. ಪೂಜಾ ಭೋಮಾಜ ಇವರ ಶಾಂತಿ ಸರೋಜ ನೇತ್ರಾಲಯದ ವತಿಯಿಂದ ತಾಲೂಕಿನ ಕುಸನಾಳ ಗ್ರಾಮದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಶುಕ್ರವಾರ ದಿ. 13 ರಂದು ಹಮ್ಮಿಕೊಳ್ಳಲಾಯಿತು. ಗ್ರಾಮದ ಪಾರ್ಶ್ವನಾಥ ಎಜ್ಯೂಕೇಶನ್ ಮೈನಾರಟಿ ಟ್ರಸ್ಟ್‌ನ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಗ್ರಾಮಸ್ಥರಿಗೆ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಮತ್ತು ವಿದ್ಯಾರ್ಥಿಗಳು ನೇತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡರು. ಕಣ್ಣಿನ ಸಣ್ಣಪುಟ್ಟ ತೊಂದರೆ ಇದ್ದವರಿಗೆ ಅಲ್ಲಿಯೇ ಕಣ್ಣಿನ ನಂಬರ ಪರೀಕ್ಷೆ ಮಾಡಿ, ಸೂಕ್ತ ಮಾರ್ಗದರ್ಶನ ನೀಡಲಾಯಿತು. ಈ ಸಮಯದಲ್ಲಿ ಪಾರ್ಶ್ವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲಗೌಡಾ ಪಾಟೀಲ, ಉಪಾಧ್ಯಕ್ಷ ಶಾಂತಿಸಾಗರ ಪಾಟೀಲ, ಕಾರ್ಯದರ್ಶಿ ಸುಕುಮಾರ ಬಳೋಲ, ಲಗಮಣ್ಣಾ ಸುರೋಶಿ, ಗಣಪತಿ ಕೋರೆ, ಜಿನ್ನಪ್ಪಾ ಮಗದುಮ್ಮ, ಈರಗೌಡಾ ಪಾಟೀಲ ಆಸ್ಪತ್ರೆಯ ಡಾ. ಕೃಷ್ಣಾ ಶಹಾ, ಸಂಗೀತಾ ಪುದಾಲೆ, ವಿಶಾಲ ಶೇಳಕೆ, ವಿಶಾಲ ಪಾರಶೆಟ್ಟಿ, ರಾಹುಲ, ಶ್ರೀಶೈಲ ಕೋರೆ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.