ಬಸಾಪುರ ಕೆರೆ ಕುರಿತ ಜಿಲ್ಲಾಧಿಕಾರಿಗಳ ಹೇಳಿಕೆಗೆ ವೇದಿಕೆ ಸ್ಪಷ್ಟನೆ

ಬಸಾಪುರ ಕೆರೆ ಕುರಿತ ಜಿಲ್ಲಾಧಿಕಾರಿಗಳ ಹೇಳಿಕೆಗೆ ವೇದಿಕೆ ಸ್ಪಷ್ಟನೆ Forum clarifies the statement of the District Magistrate regarding Basapura Lake

ಲೋಕದರ್ಶನ ವರದಿ

      ಕೊಪ್ಪಳ 29:  ತಾಲೂಕಿನ ಬಸಾಪುರ ಕೆರೆ ಸುಪ್ರೀಂ ಕೋರ್ಟ್‌ ಆದೇಶದಂತೆ ಬಲ್ಡೋಟ ಕಾರ್ಖಾನೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಕ್ಕೆ ಅವರು ಸ್ಪಷ್ಟನೆ ಕೊಡಬೇಕು. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಒಂದೇ ಒಂದು ಶಬ್ದದ ಉಲ್ಲೇಖ ಇಲ್ಲದಿದ್ದರೂ ಅಧಿಕಾರ ದುರುಪಯೋಗ ಮಾಡಿಕೊಂಡು ಈ ಹೇಳಿಕೆ ನೀಡಿದ್ದಲ್ಲದೆ ಕೆರೆ ಸಾರ್ವಜನಿಕರಿಗೆ ಬೇಕೆಂದು ಹೋರಾಟ ಮಾಡುವವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಈ ಹೇಳಿಕೆಯನ್ನು ಜನರು ನಂಬಬಾರದು. ವೇದಿಕೆ ಹೋರಾಟದಿಂದ ಹಿಂದೆ ಸರಿಯುವದಿಲ್ಲ ಹಾಗೂ ಗೆದ್ದೇ ಗೆಲ್ಲುತ್ತೇವೆ ಎಂದು ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದೆ. 

ಜನವರಿ 5, 2022ರಂದು ಹೈಕೋರ್ಟ್‌ ಆದೇಶ ಮಾಡಿರುವಂತೆ ಕೆರೆಯ ಸುತ್ತಲಿನ ಗ್ರಾಮಗಳ ಜನ ಜಾನುವಾರುಗಳು ನೀರು ಕುಡಿಯಲು ಮುಕ್ತವಾಗಿಡಬೇಕು ಎಂದು ಹೇಳಿದೆ. ನೀರು ಬಳಕೆಯನ್ನು ಯಾರೂ ತಡೆಯಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಈ ಆದೇಶಕ್ಕೆ ಕಂಪನಿ ಅಥವಾ ಸರ್ಕಾರ ಪ್ರಶ್ನಿಸಿ ಮೇಲ್ಮನವಿಯಲ್ಲಿ ಪ್ರಶ್ನಿಸಿಲ್ಲ.  

ಕೊಪ್ಪಳ, ಬಸಾಪುರ, ಹಾಲವರ್ತಿ ಈ ಮೂರು ಗ್ರಾಮಗಳ ರೈತರಿಗೆ ಸಂಬಂಧಿಸಿದ ಭೂಸ್ವಾಧೀನದ ಅಧಿಸೂಚನೆ ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಮತ್ತು ಬಸಾಪುರ ಕೆರೆಗೆ ಯಾವುದೇ ಸಂಬಂಧವಿಲ್ಲ.  

1034 ಎಕರೆ ಭೂಮಿ ಕೆಐಡಿಬಿಯಿಂದ ಮಾಡಿದ ಭೂ ಸ್ವಾಧೀನ ಖಾಸಗಿ ರೈತರಿಗೆ ಸಂಬಂಧಪಟ್ಟಿದೆ. ಆದರೆ ಇದರ ವ್ಯಾಪ್ತಿಗೆ ಕೆರೆ ಬರುತ್ತದೆ ಅನ್ನುವುದು ಸರಿಯಲ್ಲ. ಬಸಾಪುರ ಗ್ರಾಮ ಸ.ನಂ. 143ರಲ್ಲಿಯ 44.35 ಎಕರೆ ಕೆರೆ ಭೂಸ್ವಾಧೀನ ವ್ಯಾಪ್ತಿಯ ಒಳಗೆ ಬರುವುದಿಲ್ಲ ಎಂದು ಗೊತ್ತಿದ್ದರೂ ಕಂಪನಿ ಹಿತವನ್ನಷ್ಟೇ ಕಾಯುವ ಉದ್ದೇಶದಿಂದ, ಬೇಸಿಗೆಯಲ್ಲಿ ಜಾನುವಾರುಗಳು ನೀರು ಕುಡಿಯಲು ಕೆರೆ ಮುಕ್ತಗೊಳಿಸಿ ಕೊಡದೆ ದಾಹ ಹೆಚ್ಚಾಗುವಂತೆ ಮಾಡಿದ್ದಾರೆ.  

ಕೊಪ್ಪಳ, ಬಸಾಪುರ, ಹಾಲವರ್ತಿ ಭೂಸ್ವಾಧಿನಕ್ಕೆ ಒಳಗಾದ ರೈತರಿಗೆ ಸುಪ್ರೀಂಕೋರ್ಟಿನಲ್ಲಿ ಆದ ಹಿನ್ನಡೆಗೆ ನಮ್ಮ ವೇದಿಕೆಯಿಂದ ವಿಷಾದವಿದೆ.  

ಜಿಲ್ಲಾಧಿಕಾರಿಗಳು ನಡೆಸಿದ ವಿಡಿಯೋ ಕಾನ್ಫರೆನ್ಸ್‌ ಪರೀಶೀಲನೆ ಎನ್ನುವುದು ಸರ್ಕಾರದೊಂದಿಗೋ ಅಥವಾ ಕಂಪನಿಯ ಮಾಲೀಕರೊಂದಿಗೋ ಎಂದು  ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು. ಈ ಕಾನ್ಫರೆನ್ಸ್‌ ನಲ್ಲಿ ಪರೀಶೀಲಿಸಿದಾಗ ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಬಸಾಪುರ ಕೆರೆ ಕಾರ್ಖಾನೆಗೆ ಮೀಸಲಾಗಿದೆ ಎಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ಜಿಲ್ಲಾಧಿಕಾರಿಗಳ ಈ ನಿಲುವನ್ನು ನಮ್ಮ ಹೋರಾಟ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.  

ಹೈಕೋರ್ಟ್‌ ಆದೇಶವನ್ನು ಜಾರಿಗೆ ತರಬೇಕಾದ ಜಿಲ್ಲಾಧಿಕಾರಿ ಕಂಪನಿ ಜೊತೆಗೆ ಮಿಲಾಪಿಯಾಗಿ ಸಂಬಂಧವಿಲ್ಲದ ಸಂಬಂಧವನ್ನು ಕಲ್ಪಿಸಿ ಇಲ್ಲಿನ ಜನರಿಗೆ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದು ಖಂಡನೀಯ.  

2006ರಲ್ಲಿ ರೈತರ ಜಮೀನು ಸ್ವಾಧೀನ ಮಾಡಿದ್ದರೆ, 2007ರಲ್ಲಿ ಬಸಾಪುರ ಕೆರೆಯನ್ನು 30 ವರ್ಷಗಳ ಅವಧಿಗೆ  ಕೆರೆಯನ್ನು ಕೆರೆಯಾಗಿ ಉಳಿಸಿಕೊಂಡು, ಅಭಿವೃದ್ಧಿಪಡಿಸಿ, ನೀರು ಸಂಗ್ರಹಿಸುವ ಷರತ್ತಿನೊಂದಿಗೆ 33 ಲಕ್ಷಕ್ಕೆ ಮಂಜೂರಿ ಮಾಡಲಾಗಿದೆ. ಅಂದರೆ 2037 ಳವರೆಗೆ ಅದು ಯತಾವತ್ಥಾಗಿ ಇರಬೇಕಾಗಿತ್ತು, ಆದರೆ 15 ವರ್ಷದಿಂದ ಅದರ ದಿಕ್ಕನ್ನೇ ತಪ್ಪಿಸಿದ್ದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವ ಬದಲು ಕಾರ್ಖಾನೆ ಪರವಾಗಿ ಇರುವುದು ದುರಂತ. 

ಆದರೆ ಈ ಕಾರ್ಖಾನೆಯವರು ಸದರಿ ಷರತ್ತು ಉಲ್ಲಂಘಿಸಿ 44.35 ಎಕರೆಯ ಕೆರೆಯಲ್ಲಿ ಸುಮಾರು 12 ಎಕರೆಯಷ್ಟು ಕೆರೆ ಮುಚ್ಚಿದ್ದಾರೆ. ನೀರಿನ ಮೂಲವನ್ನು ಬಂದ್ ಮಾಡಿದ್ದಾರೆ. ಪಾರದರ್ಶಕತೆ ಇದ್ದರೆ ಈ ಉಲ್ಲಂಘನೆ ಪರಿಗಣಿಸಿ ಷರತ್ತಿನ ಉಲ್ಲಂಘನೆ ಅರಿತು ಕೆರೆ ವಾಪಸ್ ಪಡೆಯಬೇಕಾಗಿತ್ತು. ಅದನ್ನು ಮಾಡದೆ ಸುಪ್ರೀಂ ಕೋರ್ಟ್‌ ಕಡೆ ಕೈಮಾಡಿ ತೋರಿಸುವುದು ಎಷ್ಟರಮಟ್ಟಿಗೆ ಸರಿಯನ್ನುವುದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ಹೇಳಿಕೆ ನೀಡಲಾಗಿದೆ.