ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ತಪ್ಪದೇ ಸಮೀಕ್ಷೆಯಲ್ಲಿ ಭಾಗವಹಿಸಿ
Former Devadasis, gender minorities participated in the survey
ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ತಪ್ಪದೇ ಸಮೀಕ್ಷೆಯಲ್ಲಿ ಭಾಗವಹಿಸಿ
ಬಳ್ಳಾರಿ 16: ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಮಾಜಿ ದೇವದಾಸಿಯರ ಮರುಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯದಲ್ಲಿ ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ತಪ್ಪದೇ ಭಾಗವಹಿಸಿ ಮಾಹಿತಿ ನೋಂದಾಯಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪದ್ಮಾವತಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ 1994-95 ಮತ್ತು 2007-08 ರಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಪ್ರಸ್ತುತದಲ್ಲಿ ಧ್ವನಿ ಇಲ್ಲದವರ ಕಾಳಜಿ ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಮಾಜಿ ದೇವದಾಸಿಯರ ಮಕ್ಕಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಎಲ್ಲಾ ಆಯಾಮಗಳಲ್ಲಿ ಮುನ್ನೆಲೆಗೆ ತರುವ ಆಶಾಭಾವನೆ ಹೊಂದಿದೆ. ಅವರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಅನುಷ್ಠಾನಕ್ಕಾಗಿ ಸಮೀಕ್ಷೆ ನಡೆಸುತ್ತಿದೆ. ತಪ್ಪದೇ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕೋರಿದರು.
150 ಪ್ರಶ್ನಾವಳಿಗಳ ಈ ಸಮೀಕ್ಷಾ ಕಾರ್ಯವು 45 ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಮೀಕ್ಷೆಯಲ್ಲಿ ಸಮೀಕ್ಷಾದಾರರು ಯಾವುದೇ ಕಾರಣಕ್ಕೂ ರಜೆ ಹಾಕುವಂತಿಲ್ಲ ಎಂದರು.
ದಮನಿತರು, ಧ್ವನಿ ಇಲ್ಲದವರು, ಬಡವರು, ಮಹಿಳೆಯರು, ಹೆಚ್‌ಐವಿ ಸೋಂಕಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಯೋಜನೆಗಳು ತಲುಪುವಂತಾಗಬೇಕು. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಅಧಿಕಾರಿಗಳು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಹಾರ ಪಡಿತರ ಚೀಟಿ ವಿತರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಉದ್ಯೋಗಿನಿ, ಸಂಜೀವಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಅಮೃತ ಯೋಜನೆ, ಸಮೃದ್ಧಿ ಯೋಜನೆಗಳಡಿ ಸಾಲ ಸೌಲಭ್ಯ, ಸಹಾಯಧನ ಸೇರಿದಂತೆ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳು ಇದ್ದು, ಅಧಿಕಾರಿಗಳು ವಿಳಂಬ ತೋರದೇ ಅನುಷ್ಠಾನಗೊಳಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯಿಂದ ಅವರಿಗೆ ನಿವೇಶನ, ವಸತಿ ಸೌಲಭ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗಲಿದೆ. ಉದ್ಯಮ ಆರಂಭಿಸುವವರಿಗೆ ಬ್ಯಾಂಕ್ ಗಳಲ್ಲಿ ಲೋನ್ ವಿತರಣೆ ಕುರಿತಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಮಾಜಿದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ವಿವಿಧ ಬೇಡಿಕಗಳಲ್ಲಿ ಅಧ್ಯಕ್ಷರ ಮುಂದೆ ಪ್ರಸ್ತಾಪಿಸಿದರು.
ಇದೇ ವೇಳೆ ಸಂಗೀತಾ, ಮಾಕಪ್ಪ, ಸುಡುಗಾಡಪ್ಪ, ಪ್ರಕಾಶ್ ಇವರಿಗೆ ಲಿಂಗತ್ವ ಸಂಖ್ಯಾತರ ಗುರುತಿನ ಚೀಟಿ ವಿತರಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡ ಲಿಂಗತ್ವ ಅಲ್ಪಸಂಖ್ಯಾತರಾದ ಸಲ್ಮಾ, ಆಶ್ವಿನಿ, ಗೌಸಿಯಾ ಭಾನು ಇವರಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ಬಳಿಕ ಮಾಜಿದೇವದಾಸಿಯರ ಮರುಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಕುರಿತ ಮಾಹಿತಿ ಭಿತ್ತಿಚಿತ್ರಗಳನ್ನು ಅನಾವರಣಗೊಳಿಸಲಾಯಿತು. ಜಿಲ್ಲೆಯಲ್ಲಿ ಸಮಾಜಸೇವೆ ಸಲ್ಲಿಸಿದ ಲಿಂಗತ್ವ ಅಲ್ಪಸಂಖ್ಯಾತರಾದ ಲಕ್ಷ್ಮಮ್ಮ, ಪರ್ವಿನ್ ಭಾನು, ರಾಜಮ್ಮ, ಸಲ್ಮಾ ಮತ್ತು ಕೆ.ಎನ್.ರೇಣುಕಾ ಪೂಜಾರ್ ಇವರನ್ನು ಗಣ್ಯರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ, ಜಿಲ್ಲಾ ನಿರೂಪಣಾಧಿಕಾರಿ ಸವಿತಾ, ಬಳ್ಳಾರಿ ನಗರ ಮತ್ತು ಗ್ರಾಮಾಂತರ, ಸಂಡೂರು, ಸಿರುಗುಪ್ಪ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಮಾಜಿದೇವದಾಸಿಯರ, ಲಿಂಗತ್ವ ಅಲ್ಪಸಂಖ್ಯಾತರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 