ಪ್ರಥಮ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿ

ಪ್ರಥಮ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿ First successful organ donation from a brain-dead person


ವಿಜಯಪುರ 13: ಬಸವ ನಾಡಿನ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ ಇದೆ ಪ್ರಥಮ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ವಿಜಯಪುರ ನಗರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲಕೋಟ(30) ಫೆಬ್ರುವರಿ 9 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿ.ಎಲ್‌.ಡಿ.ಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು.  ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಯುವಕನ ಸಂಬಂಧಿಕರಿಗೆ ತಿಳಿಸಿದರು. ಅಲ್ಲದೇ, ಅವರ ಸಹೋದರಿಯರಾದ ಶೃತಿ ಹಳ್ಳದಮನಿ, ರೂಪಾ, ಸಹೋದರ ಪರಶುರಾಮ ಕೃಷ್ಣ ಬಾಗಲಕೋಟ, ಮಾವಂದಿರಾದ ಕಾಶೀನಾಥ ಹಾಗೂ ಶ್ರವಣಕುಮಾರ ಅವರಿಗೆ ಅಂಗಾಂಗ ದಾನದ ಮಹತ್ವ ವುವರಿಸಿದರು.  ಅಲ್ಲದೇ, ಮಾನವೀಯತೆ ಆಧಾರದ ಮೇಲೆ ಬಲರಾಮ ಬಾಗಲಕೋಟ ಅವರ ಅಂಗಾಂಗಗಳನ್ನು ದಾನ ಮಾಡುವುದರಿಂದ ಈ ಅಂಗಾಂಗಗಳು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲು ಸಹಕರಿಸಲು ಮನವರಿಕೆ ಮಾಡಿಕೊಟ್ಟರು. 

ಇದಕ್ಕೆ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದರು. ಆಗ ವಿಜಯಪುರ ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ ಜೀವ ಸಾರ್ಥಕತೆ ಅಡಿಯಲ್ಲಿ ನೋಂದಣಿ ಮಾಡಿದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗೆ ಬಲರಾಮ ಕೃಷ್ಣ ಬಾಗಲಕೋಟ ಅವರ ಒಂದು ಕಿಡ್ನಿ ಕಸಿ ಮಾಡಲು ನಿರ್ಧರಿಸಿದರು. ಮತ್ತೊಂದು ಕಿಡ್ನಿಯನ್ನು ಕಲಬುರಗಿಯ ರೋಗಿಯೊಬ್ಬರಿಗೆ ಕಸಿ ಮಾಡಲು ಕಳುಹಿಸಿಕೊಡಲು ನಿರ್ಧರಿಸಲಾಯಿತು.  ಅದರಂತೆ ಗುರುವಾರ ಬಲರಾಮ ಕೃಷ್ಣ ಬಾಗಲಕೋಟ ಅವರ ಅಂಗಾಂಗಳನ್ನು ಕಸಿಗಾಗಿ ತೆಗೆಯಲಾಯಿತು. ಒಂದು ಕಿಡ್ನಿಯನ್ನು ವಿಜಯಪುರದಿಂದ ಕಲಬುರಗಿ ವರೆಗೆ ಝೀರೋ ಟ್ರಾಫಿಕ್ನಲ್ಲಿ ಕಳುಹಿಸಿ ಕೊಡಲಾಯಿತು. ಅಲ್ಲದೇ, ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ಬೆಳಗಿನ ಜಾವದವರೆಗೆ ಶಸ್ತೊಚಿಕಿತ್ಸೆ ನಡೆಸಿ ರೋಗಿಗೆ ಮತ್ತೊಂದು ಕಿಡ್ನಿಯನ್ನು ಕಸಿ ಮಾಡಲಾಯಿತು. ಅಂಗಾಂಗಗಳನ್ನು ಬೇರಿ​‍್ಡಸಿದ ಬಳಿಕ ಬಲರಾಮ ಕೃಷ್ಣ ಬಾಗಲಕೋಟ ಅವರ ಸಹೋದರಿಯರಾದ ಶೃತಿ ಹಳ್ಳದಮನಿ, ರೂಪಾ, ಸಹೋದರ ಪರಶುರಾಮ ಕೃಷ್ಣ ಬಾಗಲಕೋಟ, ಮಾವಂದಿರಾದ ಕಾಶೀನಾಥ ಹಾಗೂ ಶ್ರವಣಕುಮಾರ ಅವರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪುಗೊಳ, ರಾಜ್ಯದಲ್ಲಿ ಪ್ರಸ್ತುತ ಮೂತ್ರಪಿಂಡ ಕಸಿಗಾಗಿ 579 ರೋಗಿಗಳು, ಯಕೃತ ಚಿಕಿತ್ಸೆಗಾಗಿ 50, ಹೃದಯ ಕಸಿ ಚಿಕಿತ್ಸೆಗಾಗಿ ನೂರಾರು ರೋಗಿಗಳು, ಶ್ವಾಸಕೋಶ ಕಸಿ ಚಿಕಿತ್ಸೆಗಾಗಿ 43 ರೋಗಿಗಳು ಇತರ ಸಂಯೋಜಿತ ಕಸಿಗಾಗಿ 50 ಜನ ಸೇರಿದಂತೆ ಒಟ್ಟು 5905 ರೋಗಿಗಳು ನಾನಾ ಅಂಗಾಂಗ ಕಸಿಗಾಗಿ ನೀರೀಕ್ಷೆಯಲ್ಲಿದ್ದಾರೆ. ಬಲರಾಮ ಕೃಷ್ಣ ಬಾಗಲಕೋಟ ಅವರ ಎರಡು ಕಿಡ್ನಿಗಳು ಮತ್ತು ಎರಡು ಕಣ್ಣಿನ ಕಾರ್ನಿಯಾಗಳನ್ನು ಸಂಗ್ರಹಿಸಲಾಗಿದೆ.  ಅವುಗಳಲ್ಲಿ ಒಂದು ಕಿಡ್ನಿಯನ್ನು ಕಲಬುರಗಿಯ ರೋಗಿಗೆ ಮತ್ತು ಇನ್ನೊಂದು ಕಿಡ್ನಿಯನ್ನು ಬಿ.ಎಲ್‌.ಡಿ.ಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.  ಎರಡು ಕಾರ್ನಿಯಾಗಳನ್ನು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗುವುದು ಎಂದು ತಿಳಿಸಿದರು

Brain Death Organ Donation Kidney Transplant Organ Donation Process