ತಂದೆ ತಾಯಿಯ ಸೇವೆಯಲ್ಲಿ ದೇವರನ್ನು ಕಾಣಿರಿ: ಡಾ. ಮಲ್ಲಿಕಾರ್ಜುನ್ ಮಹಾಸ್ವಾಮಿಗಳು

ತಂದೆ ತಾಯಿಯ ಸೇವೆಯಲ್ಲಿ ದೇವರನ್ನು ಕಾಣಿರಿ:  ಡಾ. ಮಲ್ಲಿಕಾರ್ಜುನ್ ಮಹಾಸ್ವಾಮಿಗಳು  Find God in the service of parents: Dr. Mallikarjuna Mahaswamy

                ಬೆಳಗಾವಿ 23: ಶ್ರೀ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆ ಸೊಸೈಟಿ ನಿಯಮಿತ, ಘಟಪ್ರಭಾ ಸಂಸ್ಥೆ ತನ್ನ 75 ವರ್ಷಗಳ ಸೇವಾ ಪೂರೈಕೆಯ ಸಂಭ್ರಮಾರ್ಥ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಈ ಅಂಗವಾಗಿ ಸಮಾಜಮುಖಿ ಹಾಗೂ ಸೇವಾಮೂಲಕ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಅಮೃತ ಮಹೋತ್ಸವದ 75 ಕಾರ್ಯಕ್ರಮಗಳ ಸರಣಿಯಲ್ಲಿ, ವೃದ್ಧಾಶ್ರಮ ಸೇವಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿಯ ಬಸವನ ಕುಡಚಿಯಲ್ಲಿರುವ ಎನ್‌ಎಸ್‌ಎಸ್ ಟ್ರಸ್ಟ್ನ  ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ, ಹಾಗೂ ಶಕ್ತಿ ಸದನ ಪುನರ್ವಸತಿ ಕೇಂದ್ರ, ಬೆಳಗಾವಿ ಇವರ ಸಹಯೋಗದಲ್ಲಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಯಿತು.

                 ಕಾರ್ಯಕ್ರಮದಲ್ಲಿ ಮಾತನಾಡಿದ  ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಎಂ.ಎಸ್‌. ಚೌಗಲಾ ಹಾಗೂ ಅವರ ಕುಟುಂಬವು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ವೃದ್ಧಾಶ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು. ನಮ್ಮ ಮನೆಯ ಹಿರಿಯರನ್ನೇ ನೋಡಿಕೊಳ್ಳಲು ಕೆಲವೊಮ್ಮೆ ಸಾಧ್ಯವಾಗದ ಇಂದಿನ ಕಾಲಘಟ್ಟದಲ್ಲಿ, ಅನೇಕ ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿರುವುದು ಅತ್ಯಂತ ಮಾನವೀಯ ಕಾರ್ಯ ಎಂದು ಅವರು ಹೇಳಿದರು. ಈ ಸಂದರ್ಭ ಅವರು ಹಾಗೂ  ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಶಿವಯೋಗಿ ಮಠದಲ್ಲಿ ಪ್ರಶಿಕ್ಷಣಾರ್ಥಿಗಳಾಗಿದ್ದ ದಿನಗಳ ಸ್ನೇಹದ ಸವಿ ನೆನಪುಗಳನ್ನು ಹಂಚಿಕೊಂಡರು. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, “ಹಿರಿಯರಲ್ಲಿ ದೇವರನ್ನು ಕಾಣಬೇಕು ಎಂಬ ಮಾತಿದೆ. ದಿನನಿತ್ಯ ಇಂತಹ ದೇವರ ಸೇವೆಯಲ್ಲಿ ತೊಡಗಿರುವ ಎಂ.ಎಸ್‌. ಚೌಗಲಾ ಮತ್ತು ಅವರ ಕುಟುಂಬ ನಿಜಕ್ಕೂ ಧನ್ಯರು.

              ಅವರ ಸೇವೆ ನಿರಂತರವಾಗಿ ಮುಂದುವರಿಯಲಿ” ಎಂದು ಆಶೀರ್ವದಿಸಿದರು. ಎಂ.ಎಸ್‌. ಚೌಗಲಾ ಅವರು ಮಾತನಾಡಿ, ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ವೃದ್ಧಾಶ್ರಮವನ್ನು ನಡೆಸುತ್ತಿದ್ದು, ಅನೇಕ ಹಿರಿಯರ ನೋವು-ನಲಿವುಗಳ ಕಥೆಗಳನ್ನು ಕಣ್ಣಾರೆ ಕಂಡಿರುವುದಾಗಿ ತಿಳಿಸಿದರು. ಯುವಕರಿಗೆ ಮನವಿ ಮಾಡುತ್ತಾ, “ನಿಮ್ಮ ಮನೆಯ ಹಿರಿಯರನ್ನು ಗೌರವದಿಂದ ಹಾಗೂ ಪ್ರೀತಿಯಿಂದ ನೋಡಿಕೊಳ್ಳಿ. ಹಾಗಾದಾಗ ಮಾತ್ರ ಮುಂದಿನ ದಿನಗಳಲ್ಲಿ ವೃದ್ಧಾಶ್ರಮಗಳ ಅವಶ್ಯಕತೆ ಕಡಿಮೆಯಾಗಲಿದೆ” ಎಂದು ಹೇಳಿದರು. ವೃದ್ಧಾಶ್ರಮದ ಹಿರಿಯ ನಾಗರಿಕರನ್ನು ಭೇಟಿಯಾದ ಸಿಇಒ ಡಾ. ಬಿ.ಕೆ.ಹೆಚ್‌. ಪಾಟೀಲ್ ಅವರು ಭಾವಪೂರ್ಣವಾಗಿ ಮಾತನಾಡಿ, ಇಂತಹ ಸೇವಾ ಕಾರ್ಯಗಳು ಸಮಾಜದ ನೈತಿಕ ಬಲವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

            ಈ ಪಾವನ ಕಾರ್ಯಕ್ರಮದ ಸಾನ್ನಿಧ್ಯವನ್ನು  ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು (ನಾಗನೂರು ರುದ್ರಾಕ್ಷಿಮಠ, ಬೆಳಗಾವಿ) ಹಾಗೂ  ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು (ಕೆಂಪಯ್ಯಸ್ವಾಮಿಮಠ, ಗುಬ್ಬಲಗುಡ್ಡ, ಘಟಪ್ರಭಾ) ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆ ಸೊಸೈಟಿಯ ಉಪಾಧ್ಯಕ್ಷ ಅನಿಲ್ ನೇರ್ಲಿ, ಸಿಇಒ ಡಾ. ಬಿ.ಕೆ.ಹೆಚ್‌. ಪಾಟೀಲ್, ಆಸ್ಪತ್ರೆ ಸೊಸೈಟಿಯ ವಿವಿಧ ಅಂಗ ಸಂಸ್ಥೆಗಳ ಸಿಬ್ಬಂದಿವರ್ಗ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್‌. ಚೌಗಲಾ, ವೃದ್ಧಾಶ್ರಮದ ಸಿಬ್ಬಂದಿ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕೆಪಿಎಸ್ ಯರಗಟ್ಟಿ ಕಾಲೇಜಿನ ಪ್ರಾಚಾರ್ಯರಾದ ಕಿರಣ ಚೌಗಲಾರವರು ನೆರವೇರಿಸಿದರು.