ರೈತರು ಸಮಗ್ರ ಕೃಷಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಶಾಸಕ ಬಸವರಾಜ ಶಿವಣ್ಣನವರ

ರೈತರು ಸಮಗ್ರ ಕೃಷಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಶಾಸಕ ಬಸವರಾಜ ಶಿವಣ್ಣನವರ Farmers adopt integrated agriculture and become financially strong, says MLA Basavaraja Shivanna

                 ಬ್ಯಾಡಗಿ 23:  ಬ್ಯಾಡಗಿ ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಜನ್ಮದಿನದ ಅಂಗವಾಗಿ ರೈತ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀ ಬಸವರಾಜ್ ನೀಲಪ್ಪ ಶಿವಣ್ಣನವರು ಪೂರ್ವಜರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸಿ, ಮಿಶ್ರ ಬೆಳೆ ಗಳನ್ನು ಬೆಳೆಯುತ್ತಿದ್ದರು. ಒಂದು ಬೆಳೆ ಕೈ ಕೊಟ್ಟರು, ಇನ್ನೊಂದು ಬೆಳೆ ಕೈ ಹಿಡಿಯುತ್ತಿತ್ತು. ಹೊಲಗಳಿಗೆ ತಿಪ್ಪೆ ಗೊಬ್ಬರಗಳನ್ನು ಹಾಕುತ್ತಿದ್ದರು.

                 ಖರ್ಚು ಇಲ್ಲದ ಕೃಷಿ ಮಾಡುತ್ತಿದ್ದರು. ಆದರೆ ಈಗ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿ,ಮಿಶ್ರ ಬೆಳೆ ಬದಲಾಗಿ, ಏಕ ಬೆಳೆ ಬೆಳೆಯುತ್ತಿದ್ದು, ಹೆಚ್ಚು ಇಳುವರಿ ಕೊಡುವ ಬಿತ್ತನೆ ಬೀಜಗಳನ್ನು, ರಾಸಾಯನಿಕ ಗೊಬ್ಬರಗಳನ್ನು, ಕ್ರಿಮಿನಾಶಕಗಳನ್ನು , ಯಂತ್ರೋಪಕರಣಗಳನ್ನು ಹಾಗೂ ನೀರಾವರಿ ಸೌಲಭ್ಯಗಳನ್ನು ಖರೀದಿಸಿ, ಖರ್ಚು ಮಾಡಿ ಬೆಳೆ ಬೆಳೆದು ನಂತರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದಿದ್ದಾಗ, ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.

                     ಆದ್ದರಿಂದ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು ಎಂದರು. ರೈತರ ಜ್ವಲಂತ ಸಮಸ್ಯೆಗಳ ಕುರಿತು ರೈತ ಸಂಘಟನೆಗಳು ರೈತ ಪರವಾಗಿ ಅನೇಕ ಹೋರಾಟಗಳನ್ನು ಮಾಡುತ್ತಿದ್ದು, ರೈತರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ವರದ-ಬೇಡ್ತಿ ನದಿ ಜೋಡಣೆಯಿಂದ ಜಿಲ್ಲೆಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬಹುದಾಗಿದ್ದು, ನದಿ ಜೋಡಣೆಗೆ ಬೆಂಬಲ ನೀಡುತ್ತೇನೆ ಎಂದರು.

                  ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಸಹಾಯಕ ಕೃಷಿ ನಿರ್ದೇಶಕ  ಗಣೇಶ್ ಜೆ ಕಮ್ಮಾರ್ ಮಾತನಾಡಿ ರೈತ ದಿನಾಚರಣೆ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23 ರಂದು ಆಚರಿಸಲಾಗುವ ರಾಷ್ಟ್ರೀಯ ದಿನವಾಗಿದ್ದು, ಭಾರತದ ಮಾಜಿ ಪ್ರಧಾನ ಮಂತ್ರಿ ಮತ್ತು ರೈತ ನಾಯಕ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನದ ಸ್ಮರಣಾರ್ಥ ಆಚರಿಸಲಾಗುತ್ತಿದೆ. ಭಾರತದ 5ನೇ ಪ್ರಧಾನಿ,ಉಪ ಪ್ರಧಾನಿಯಾಗಿ ಮತ್ತು ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾಗಿ ಬಜೆಟ್ ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು.

                   ರೈತರಿಗಾಗಿ ಕೃಷಿ ಉತ್ಪನ್ನ ವಿಧೇಯಕ ತರುವಲ್ಲಿ ಇವರ ಶ್ರಮ ಸಾಕಷ್ಠಿದೆ.ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾದ ಮಣ್ಣಿನ ಮಗ. ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರದಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಧಿಕಾರದಲ್ಲಿ ಎಷ್ಟು ದಿನ ಇದ್ದರೇನು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರೈತರಿಗೆ ಒಳಿತು ಮಾಡಬೇಕೆನ್ನುವ ಹಂಬಲ ಹೊಂದಿದವರು.

                  ಬೆವರ ನೆತ್ತರು ಹರಿಸಿ ನಮ್ಮೆಲ್ಲರಿಗೂ ಅನ್ನ ನೀಡುವ ಶ್ರಮ ಜೀವಿ ರೈತ, ಅಪಾರ ರೈತಪರ ಕಳಕಳಿಯನ್ನು ಹೊಂದಿದ ರೈತ ಚಿಂತಕ, ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಶ್ರೀ ಚೌಧರಿ ಚರಣ್ ಸಿಂಗ್ ರ ಜನ್ಮ ದಿನವಾದ ಡಿಸೆಂಬರ್ 23ನ್ನು ಪ್ರತಿ ವರ್ಷ ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ಶಾಸಕರು ವರದ-ಬೇಡ್ತಿ ನದಿ ಜೋಡಣೆ, ಮೆಕ್ಕೆಜೋಳ ಖರೀದಿ ಕೇಂದ್ರ, ಬೆಂಬಲ ಬೆಲೆ ಹಾಗೂ ಇನ್ನಿತರ ರೈತಪರ ವಿಷಯಗಳನ್ನು ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.

                  ಆದರೆ ವಿಷಯಗಳು ಕಾರ್ಯರೂಪಕ್ಕೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು. ರೈತರು ಮಿಶ್ರ ಬೆಳೆಯಿಂದ ಏಕ ಬೆಳೆ ಪದ್ಧತಿಯನ್ನು ಅನುಸರಿಸಿ, ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಹಾಗೂ ಬೆಲೆ ಕೈಗೆ ಸಿಗದಿದ್ದಾಗ ಹೋರಾಟದ ಹಾದಿ ಹಿಡಿಯುವಂತಾಗಿದೆ. ರೈತರು ಪರ್ಯಾಯ ಬೆಳೆ ಹಾಗೂ ಖರ್ಚು ಇಲ್ಲದ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಜನವರಿ 8ರಂದು, ಹಾವೇರಿ ನಗರದ ಅಂಬೇಡ್ಕರ್ ಭವನದಲ್ಲಿ, ಪದ್ಮಶ್ರೀ ಪುರಸ್ಕೃತ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪ್ರತಿಪಾದಕರಾದ ಶ್ರೀ ಸುಭಾಷ್ ಪಾಳೇಕರ್ ರವರ ಉಪಸ್ಥಿತಿಯಲ್ಲಿ ಒಂದು ದಿನದ ಕಾರ್ಯಗಾರವನ್ನು ಏರಿ​‍್ಡಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಗಾರದ ಉಪಯೋಗ ಪಡೆದುಕೊಳ್ಳಲು ತಿಳಿಸಿದರು. 

                ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ, ವಿಜ್ಞಾನಿ ಶ್ರೀ ಕೃಷ್ಣ ನಾಯಕ್ ರವರು ರೈತರಿಗೆ ಹಿಂಗಾರು ಹಂಗಾಮಿನ ಎಣ್ಣೆ ಕಾಳು ಬೆಳೆಗಳ ತಾಂತ್ರಿಕ ಮಾಹಿತಿ ಬಗ್ಗೆ ಉಪನ್ಯಾಸ ನೀಡಿದರು. ರೇಷ್ಮೆ ವಿಸ್ತೀರಣಾ ಅಧಿಕಾರಿಗಳಾದ ಕು. ಭಾರತಿ ನಾಯಕ್, ರೇಷ್ಮೆ ಬೆಳೆಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ  ಮಂಜುನಾಥ ಬೆನಕನಕೊಂಡ, ಉಪಾಧ್ಯಕ್ಷರಾದ  ನಿಂಗನಗೌಡ ತಮ್ಮನಗೌಡ ಪಾಟೀಲ್, ಜಿಲ್ಲಾ ಪ್ರತಿನಿಧಿ ಗಂಗಾಧರ ಕ ಎಲಿ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಕೆ ಡಿ ಪಿ ಸದಸ್ಯರಾದ ಸುರೇಶ್ ಗೌಡ ಪಾಟೀಲ್, ಮಲ್ಲಿಕಾರ್ಜುನ್ ಕರಿ ಲಿಂಗಪ್ಪನವರ್,

               ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ಶಿವಯೋಗಿ ಉಕ್ಕುಂದ. ತಹಸಿಲ್ದಾರಾದ ಚಂದ್ರಶೇಖರ್ ನಾಯಕ್, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಿಂಗಪ್ಪ ಕಾಕೋಳ್, ಕೃಷಿ ಅಧಿಕಾರಿ ನಾಗರಾಜ್ ಬನ್ನಿಹಟ್ಟಿ, ಆತ್ಮ ಯೋಜನೆಯ ಗುಡ್ಡಪ್ಪ, ಅಭಿಲಾಶ್, ಹಿರಿಯ ಸಹಾಯಕ ತೋಟಗಾರಿಕೆ  ನಿರ್ದೇಶಕರಾದ ಅಶೋಕ್ ಕುರುಬರ, ಪಶು ಇಲಾಖೆ ಅಧಿಕಾರಿಗಳಾದ ರಮೇಶ್ ಬ್ಯಾಡಗಿ, ಸ್ವಸಹಾಯ ಸಂಘಗಳ ಸದಸ್ಯರುಗಳು ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.