ಡಾ.ಪುನೀತ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ನೇತ್ರದಾನ ಅರಿವು ಕಾರ್ಯಕ್ರಮ

ಡಾ.ಪುನೀತ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ನೇತ್ರದಾನ ಅರಿವು ಕಾರ್ಯಕ್ರಮ  Eye donation awareness program as part of Dr. Puneetha Rajkumar's birthday celebration

ಬೆಳಗಾವಿ 20: ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ್ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿರುವ ನೇತ್ರ ದರ್ಶನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಯೂನಿಟ್ ಆಫ್ ಅಗರವಾಲಸ್ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರದಾನ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಆಕಾಶ ಹಲಗೇಕರ್, ಉದಯ ಕೋಲಕಾರ ವಿಷ್ಣು ಇಂಗಳಿ, ಲಕ್ಷ್ಮೀಇಂಗಳಿ, ಶ್ವೇತಾ ಕೋಟ್ಯಾನ್, ಗಜಾನನ ಮೇತ್ರಿ, ಭಾವಕನ್ನಾ ಪಿರಗಾನೆ ಹಾಗೂ ಅವರ ಸ್ನೇಹಿತರು ಭಾಗವಹಿಸಿ ರೋಟರಿ ನೇತ್ರದರ್ಶನ ಕಣ್ಣಿನ ಬ್ಯಾಂಕ್‌ಗೆ ತಮ್ಮ ಕಣ್ಣುಗಳನ್ನು ದಾನಮಾಡುವದರ ಮೂಲಕ, ಪುನೀತ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.  ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.  

ಪುನೀತ ರಾಜಕುಮಾರ್ ಅವರು ತಮ್ಮ ಜೀವನ ಕಾಲದಲ್ಲಿಯೇ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಗೋ ಶಾಲೆಗಳಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅದೇ ರೀತಿ ಅವರು ತೀರಿಕೊಂಡ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ನಾಲ್ಕು ಅಂಧರಿಗೆ ಬೆಳಕಾಗಿ ಮಾನವೀಯತೆ ಮತ್ತು ಸೇವೆಯ ಆದರ್ಶವನ್ನು ತೋರಿಸಿದರು.  ಅವರ ಈ ಪ್ರೇರಣೆಯಿಂದ ಅನೇಕರು ನೇತ್ರದಾನದ ಮಹತ್ವವನ್ನು ಅರಿತು, ಸಮಾಜ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಪುನೀತ ರಾಜಕುಮಾರ್ ಅವರ 51ನೇ ಜನ್ಮದಿನದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಸ್ಮರಣೆಯನ್ನು ಗೌರವಿಸುವ ಪ್ರಯತ್ನಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿವೆ.  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜ ಸೇವಕರು ಮತ್ತು ಯುವಕರು ನೇತ್ರದಾನ ಮಾನವೀಯತೆಯ ಮಹತ್ವದ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದ ಬಳಿಕವೂ ಇನ್ನೊಬ್ಬರ ಬದುಕಿಗೆ ಬೆಳಕು ನೀಡುವ ಸಂಕಲ್ಪವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ವೇಳೆ ಹಲವರು ನೇತ್ರದಾನ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಿ ತಮ್ಮ ಕಣ್ಣುಗಳನ್ನು ದಾನಮಾಡುವ ಸಂಕಲ್ಪ ವ್ಯಕ್ತಪಡಿಸಿದರು.  

ಸಮಾಜ ಸೇವಕರಾದ ಆಕಾಶ ಹಲಗೇಕರ್, ಉದಯ ಕೋಲಕಾರ್, ಭಾವಕನ್ನಾಪಿರಗಾನೆ, ವಿಷ್ಣುಇಂಗಳಿ, ಲಕ್ಷೀಇಂಗಳಿ, ಗಜಾನನ ಮೇತ್ರಿ, ಶ್ವೇತಾ ಕೋಟ್ಯಾನ ಹಾಗೂ ಅವರ ಸ್ನೇಹಿತರು ಮಾತನಾಡಿ, ಪುನೀತ ರಾಜಕುಮಾರ್‌ಅವರ ಜೀವನವೇ ಸಮಾಜ ಸೇವೆಗೆ ಒಂದು ಪ್ರೇರಣೆಯಾಗಿದೆ ಎಂದು ಹೇಳಿದರು. ಅವರು ಬದುಕಿದಾಗ ಅನೇಕ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ, ಆರೋಗ್ಯ ಮತ್ತು ಅನಾಥರ ಸಹಾಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಅವರ ಆ ದಯಾಮಯ ವ್ಯಕ್ತಿತ್ವ ಮತ್ತು ಮಾನವೀಯತೆ ಇಂದು ಸಾವಿರಾರು ಜನರಿಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.  ನೇತ್ರದಾನ ಕುರಿತು ಮಾತನಾಡಿದ ಡಾ. ಸಚಿನ ಮಾಹುಲಿ, ಡಾ.ಅವಧೂತ ವಾಗ್ಲೆ, ಡಾ.ಅಲ್ಪೇಶ ಟೊಪರಾನಿ ಹಾಗೂ ವ್ಯವಸ್ಥಾಪಕರಾದ ಸೇತು ರಾಮಸ್ವಾಮಿ ಅವರು ಮಾತನಾಡಿ ಮರಣಾ ನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಹಲವಾರು ದೃಷ್ಟಿಹೀನರಿಗೆ ಹೊಸ ಜೀವನ ನೀಡಬಹುದಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಇನ್ನೂ ನೇತ್ರದಾನದ ಬಗ್ಗೆ ಅರಿವು ಕಡಿಮೆ ಇರುವುದರಿಂದ ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳ ಅಗತ್ಯವಾಗಿವೆ ಎಂದು ಅವರು ಹೇಳಿದರು.  

ಕಾರ್ಯಕ್ರಮದ ಅಂತ್ಯದಲ್ಲಿ ಪುನೀತ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಸಮಾಜ ಸೇವೆಯ ಪ್ರತಿಜ್ಞೆ ಕೈಗೊಳ್ಳಲಾಯಿತು.ಅವರ ಆದರ್ಶಗಳು ಮತ್ತು ಮಾನವೀಯ ಮೌಲ್ಯಗಳು ಮುಂದಿನ ಪೀಳಿಗೆಗೂ ದಾರೀದೀಪವಾಗಲಿ ಎಂಬ ಆಶಯವನ್ನು ಎಲ್ಲರೂ ವ್ಯಕ್ತಪಡಿಸಿದರು. ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ನೇತ್ರದಾನದ ಮಹತ್ವವನ್ನು ಜನರಿಗೆ ತಿಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಆಯೋಜಕರು ಹೇಳಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು, ಸಮಾಜ ಸೇವಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.