ದಾಸರ ಕೀರ್ತನೆಯ ಪ್ರತಿಯೊಂದು ಪದಕ್ಕೂ ಒಂದು ಮೌಲ್ಯವಿದೆ: ಶಾಸಕ ನಾರಾ ಭರತ್ ರೆಡ್ಡಿ
Every word of Dasara's Kirtan has a value: MLA Nara Bharat Reddy
ಬಳ್ಳಾರಿ 08: ಭಕ್ತಶ್ರೇಷ್ಠ ಕನಕದಾಸರ ಕೀರ್ತನೆಗಳಲ್ಲಿ ಪ್ರತಿಯೊಂದು ಪದಕ್ಕೂ ಜೀವನಾಂಶದ ಮೌಲ್ಯವಿದೆ. ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಆಯೋಸಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು. ಹಾಲುಮತ ಸಮಾಜದವರು ಹಾಲಿನಂತೆ ಶುಭ್ರತೆವುಳ್ಳ, ಮೃದು ಸ್ವಭಾವ ಹಾಗೂ ಕನಕ ದಾಸರರಂತೆ ಪವಿತ್ರ ಮನಸ್ಸು ಹೊಂದಿದವರು. ಅದೇರೀತಿಯಾಗಿ ಸಂಗೋಳ್ಳಿ ರಾಯಣ್ಣನವರ ಧೈರ್ಯ, ಶೌರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ನಗರದಲ್ಲಿ ರಾಯಣ್ಣನವರ ಪುತ್ಥಳಿ ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ನಗರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಬಳ್ಳಾರಿ ನಗರ ಅಭಿವೃದ್ಧಿಯತ್ತ ಸಾಗಲಿದೆ ಎಂದರು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ ಕನಕದಾಸರು ಭಕ್ತ ಶ್ರೇಷ್ಠರು ಸಾಮಾಜಿಕ ಚಿಂತನೆಗೆ ಒಳ್ಳೆಯ ಸಂದೇಶ ಮೌಲ್ಯಗಳನ್ನು ನೀಡಿದವರು. ಕುಲ, ಗೋತ್ರ, ಜಾತಿ ಧರ್ಮ ಎನ್ನದೇ ಸಮಾನತೆಯನ್ನು ಸಾರಿದವರು. ಯುವಕರು ದಾಸರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಪಿ.ಎಲ್ ಗಾದಿಲಿಂಗನ ಗೌಡ ಮಾತನಾಡಿ ಇಂದು ಕನಕದಾಸರ 538 ನೇ ಜಯಂತಿ. ಕನಕದಾಸರು ವ್ಯಕ್ತಿಯಲ್ಲ ಶೋಷಿತರ ದೊಡ್ಡ ಧ್ವನಿಯಾಗುವ ಮೂಲಕ ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾನತೆಯನ್ನು ಸಾರಿದವರು. 16 ನೇ ಶತಮಾನದಲ್ಲಿ ಅವರ ಕೀರ್ತನೆಗಳಿಂದ ಸಮಾಜ ಸುಧಾರಣೆಯನ್ನು ಮಾಡಿದವರು ಎಂದು ಹೇಳಿದರು. ವೀರಶೈವ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ನೀಲಮ್ಮ.ಕೆ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ದಾಸಶ್ರೇಷ್ಠ ಕನಕದಾಸ ಎಂದೂ ಕರೆಯಲ್ಪಡುವ ಇವರು, ಭಾರತದ ಕರ್ನಾಟಕದ ಹರಿದಾಸ ಸಂತ ಮತ್ತು ದ್ವೈತ ವೇದಾಂತದ ತತ್ವಜ್ಞಾನಿಯಾಗಿದ್ದರು ಎಂದು ತಿಳಿಸಿದರು. ಕನಕದಾಸರು ಕ್ರಿ.ಶ. 1509 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬೀರ್ಪ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಹರಿದಾಸ ಸಂತ, ದಾರ್ಶನಿಕ ಮತ್ತು ಕವಿಯಾದ ಕನಕದಾಸ ಮೂಲ ಹೆಸರು ತಿಮ್ಮಪ್ಪ ನಾಯಕ. ಇವರು ಯುದ್ಧದಲ್ಲಿ ಗಾಯಗೊಂಡ ನಂತರ ಸೈನಿಕ ವೃತ್ತಿಯನ್ನು ತ್ಯಜಿಸಿ ಶ್ರೀಕೃಷ್ಣನ ಭಕ್ತರಾದರು. ನಂತರ ’ಕನಕದಾಸರು’ ಎಂಬ ಹೆಸರನ್ನು ಪಡೆದು, ತಮ್ಮ ಕೀರ್ತನೆಗಳ ಮೂಲಕ ಸಿರಿ ಮತ್ತು ಸಂಪತ್ತು ಶ್ರೇಷ್ಠವಲ್ಲ ಎಂದು ಒತ್ತಿ ಹೇಳಿದರು ಎಂದರು. ಇದೇ ವೇಳೆ ಗಣ್ಯರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಭಕ್ತ ಕನಕದಾಸರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕವಿತಾ ಗಂಗೂರು ತಂಡದ ದಾಸರ ಪದಗಳು ಕೇಳುಗರಿಗೆ ಇಂಪು ನೀಡಿತು.
ಅದ್ದೂರಿ ಮೆರವಣಿಗೆ: ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆ ಬಳ್ಳಾರಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳು ಹಾಗೂ ವಾದ್ಯಗಳೊಂದಿಗೆ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಯು-ಗಡಿಗಿ ಚೆನ್ನಪ್ಪ ವೃತ್ತ-ಬೆಂಗಳೂರು ರಸ್ತೆ-ಬ್ರೂಸ್ಪೇಟೆ ಪೊಲೀಸ್ ಠಾಣೆ ಮುಂಭಾಗ ತೇರು ಬೀದಿ-ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆವರೆಗೆ ತಲುಪಿ ಸಂಪನ್ನಗೊಂಡಿತು. ಈ ವೇಳೆ ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಪಿ.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಡಿಪಿಐ ಉಮಾದೇವಿ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಹಾಗು ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 