ಪ್ರತಿಯೊಂದು ಜೀವರಾಶಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕಿದೆ

ಪ್ರತಿಯೊಂದು ಜೀವರಾಶಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕಿದೆ Every living thing has the right to live on earth.

ಪ್ರತಿಯೊಂದು ಜೀವರಾಶಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕಿದೆ 

ಹಾವೇರಿ  11:ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಥವಾ ಯಾವುದೇ ಸೇವೆಗೆ ಸೇರದೆ ಅರಣ್ಯವನ್ನು ಸಂರಕ್ಷಿಸಲು, ಅರಣ್ಯ ಸಂಪತ್ತನ್ನು ಸಂರಕ್ಷಿಸಲು, ವನ್ಯ ಜೀವಿಗಳನ್ನು ಸಂರಕ್ಷಿಸುವುದಕ್ಕಾಗಿಯೇ ತಮ್ಮ ಜೀವವನ್ನು ಮೂಡಿಪಾಗಿಟ್ಟ ಹುತಾತ್ಮರನ್ನು ನೆನೆದು ಅವರಿಗೆ ಗೌರವ ಸಮರೆ​‍್ಣಯನ್ನು  ಮಾಡುತ್ತಿದ್ದೇವೆ ಎಂದು  ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರಾ​‍್ಪ ಎನ್‌. ಅವರು ಹೇಳಿದರು.  

ಕರ್ಜಗಿ ಪ್ರಾದೇಶಿಕ ಅರಣ್ಯ ಕಚೇರಿ ಆವರಣದಲ್ಲಿ ಗುರುವಾರ ಅರಣ್ಯ ಇಲಾಖೆ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿದ ಅವರು,  ಪರಿಸರ ಪ್ರೇಮಿಗಳು, ಅರಣ್ಯ ಪ್ರೇಮಿಗಳು, ವನ್ಯಜೀವಿ ಪ್ರೇಮಿಗಳು ಆದಿ ಅನಾಧಿಕಾಲದಿಂದಲೂ ನಮ್ಮ ದೇಶದಲ್ಲಿದ್ದಾರೆ. ಇವರೆಲ್ಲರೂ ಅರಣ್ಯ ಮೇಲಿನ ಪ್ರೀತಿಯಿಂದ ಅರಣ್ಯ ಸಂಪತ್ತನ್ನು ಸಂರಕ್ಷಣೆ ಮಾಡುತ್ತ ಬಂದಿದ್ದಾರೆ ಎಂದರು.  

ಹುತಾತ್ಮರ ಹಿನ್ನಲೆ ನೋಡುವುದಾದರೆ 295 ವರ್ಷಗಳ ಹಿಂದೆ ಅಂದರೆ 1730 ರಲ್ಲಿ  ಜೋಧಪುರ್‌ನ ಮಹಾರಾಜ ಅಭಯ ಸಿಂಗ್‌ನ ಸೈನಿಕರು ಕೇರ್ಜಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇರ್ಜಲಿ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಹಾಗೂ ಮಕ್ಕಳನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರಕಾರ ಸೆ.11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಆಚರಿಸುತ್ತಿದೆ ಎಂದು ಹೇಳಿದರು.  

ನಮ್ಮ ಪುರಾಣಗಳಲ್ಲಿ ತಿಳಿಸಿರುವಂತೆ, ಭೂಮಿಯ ಮೇಲೆ 83 ಲಕ್ಷ ಜೀವರಾಶಿಗಳಿವೆ, ಅಷ್ಟು ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಇವುಗಳ ರಕ್ಷಣೆಗಾಗಿ  ಸರ್ಕಾರ 19 ನೇ ಶತಮಾನದಿಂದಲೇ ಅರಣ್ಯ ಕಾಯ್ದೆ ಜಾರಿಗೆ ತಂದಿದೆ. ಅದರಂತೆ ವನ್ಯಜೀವಿ ಸಂರಕ್ಷಣೆ ಕಾಯ್ದೆ, ಭೂಸವಕಳಿ ತಡೆಗಟ್ಟುವ ಕಾಯ್ದೆ ಕಾಲ ಕ್ರಮೇಣವಾಗಿ ಜಾರಿಗೆ ಬಂದವು. ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಗಳ ಮುಖ್ಯ ಉದ್ದೇಶ ಅರಣ್ಯನಾಶ  ತಡೆಗಟ್ಟುವಿಕೆಯಾಗಿದೆ ಎಂದರು. 

ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್ ಅವರು ಮಾತನಾಡಿ, ದೇಶದಲ್ಲಿ ಅರಣ್ಯವನ್ನು ಅರಣ್ಯ ಸಂಪತ್ತನ್ನು ಕಾಪಾಡಿ ಮುಂದಿನ ಪೀಳಿಗೆಗೆ ಪರಿಚಯಿಸಿದ ಹುತಾತ್ಮರನ್ನು  ನೆನೆಯುವುದು ನಮ್ಮೇಲರ ಜವಾಬ್ದಾರಿಯಾಗಿದೆ. ಭೂಮಿಯ ಮೇಲೆ ಯಾವುದೇ ಒಂದು ಜೀವಿ ಜೀವಿಸಬೇಕಿದ್ದರೆ ಅವುಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಅವುಗಳು ಜೀವವೈವಿಧ್ಯತೆಯ ಮೇಲೆ ಅವಲಂಬನೆ ಮಾಡಿರುತ್ತವೆ ಜೀವವೈವಿಧ್ಯತೆಯಲ್ಲಿ ವ್ಯತ್ಯಾಸವಾದರೆ ಇಡೀ ಜೀವರಾಶಿಗಳ ಮೇಲೆ ವ್ಯತೀರೀಕ್ತವಾದ ಪರಿಣಾಮ ಬಿರುತ್ತದೆ. ಹೀಗಾಗಿ ಜೀವರಾಶಿಗಳ ಉಳಿವಿಕೆಗೆ ಸೂಕ್ತ ವ್ಯವಸ್ಥೆ ಮಾಡುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು. 

ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಎ. ಶೇಖ್ ಅವರು ಮಾತನಾಡಿ, ಈ ಜಗತ್ತಿನಲ್ಲಿ ಮನುಕುಲ ಅಸ್ತಿತ್ವದಲ್ಲಿ  ಉಳಿಯಬೇಕಿದ್ದರೆ ಎಲ್ಲ ಪ್ರಾಣಿಸಂಕುಲದೊಂದಿಗೆ ಸಮನ್ವಯದೊಂದಿಗೆ ಬಾಳ್ವೆ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ ಇದನ್ನು ನಾವು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಇಲ್ಲಿ ಪ್ರತಿಯೊಂದು ಜೀವಿಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಹೀಗಾಗಿ ಪ್ರತಿ ಜೀವರಾಶಿಯನ್ನು ಗೌರವಿಸುವ ಮನಸ್ಥಿತಿಯನ್ನು ನಾವುಗಳು ಹೊಂದಿರಬೇಕಾಗುತ್ತದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ ಮಾತನಾಡಿ, ಇಂದು ಇಡೀ ಜಗತ್ತು ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನೆಯಿಂದ ಸಾಕಷ್ಟು ಸಮಸ್ಯೆವನ್ನು ಎದುರಿಸುತ್ತಿದೆ.   ಸಾಧ್ಯವಾದಮಟ್ಟಿಗೆ ಉಳಿದಿರುವ  ಅರಣ್ಯ ಸಂಪತ್ತನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅರಣ್ಯ ಸಂಪತ್ತು ಹಾಗೂ ಪರಿಸರ ಉಳಿಯುವಿಕೆಗೆ ನಾವೆಲ್ಲರೂ ಮುಂದಾಗಬೇಕು  ಎಂದರು. 

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್‌.ಹೆಚ್‌.ಜತ್ತಿ ಅವರು ಮಾತನಾಡಿ, ಭೂಮಿಯ ಮೇಲೆ ವಾಸಿಸುವ ಮನುಕುಲ ಹಾಗೂ ಇತರೆ ಜೀವರಾಶಿಗಳ ಸಂರಕ್ಷಣೆಗಾಗಿ ಇಂದು ಸಾಕಷ್ಟು  ಹುತಾತ್ಮರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡಿದರೆ ಮಾತ್ರ ನಾವೆಲ್ಲರೂ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗೆ ಮುಂದಾಗಬೇಕು ಎಂದರು. 

ಕಾರ್ಯಕ್ರಮದ ಅಂಗವಾಗಿ ಅರಣ್ಯ ಭವನದ ಮುಂಭಾಗ ಅರಣ್ಯಧಿಕಾರಿ ಹಾಗೂ ಸಿಬ್ಬಂದಿ ಒಂದು ನಿಮಿಷ ಮೌನಾಚರಣೆ ಮೂಲಕ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿದರು. ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು. 

ಹಾವೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಕೆ. ಹೆಚ್‌. ಮಂಜುನಾಥ ಅವರು ಕರ್ನಾಟಕ ಅರಣ್ಯ ಇಲಾಖೆಯ ಹುತಾತ್ಮರ  ಪಕ್ಷಿ ನೋಟವನ್ನು ಓದಿದರು. ದಸ್ತು ಅರಣ್ಯಪಾಲಕ ಬಸವರಾಜ ಕುಲಕರ್ಣಿ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ  ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವೇಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಹೆಚ್‌. ವಿ., ಸಾಮಾಜಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರಗೌಡ ಸಿ. ಪಾಟೀಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ  ಪಿ. ಎಸ್‌. ಹೆಬ್ಬಾಳ, ಎಲ್ಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.