ಮತದಾರರ ಪಟ್ಟಿ ಪ್ರಕಟವಾದ ತಕ್ಷಣ ತಮ್ಮ ಹೆಸರು ಖಾತ್ರಿಪಡಿಸಿಕೊಳ್ಳಿ: ಡಿಸಿ

ಲೋಕದರ್ಶನ ವರದಿ

ಹಾವೇರಿ 12: ಮತದಾರರು ಚುನಾವಣೆಯ ದಿನವೇ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಎಲ್ಲಿದೆ ಎಂದು ಹುಡುಕುವ ಬದಲು, ಕರಡು ಮತದಾರರ ಪಟ್ಟಿ ಪ್ರಕಟವಾದ ತಕ್ಷಣ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿರುವ ಕುರಿತು ಹಾಗೂ ಅಲ್ಲಿ ನಮೂದಾಗಿರುವ ವಿವರಗಳು ಸರಿಯಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ವೆಂಕಟೇಶ್ ಎಂ ವಿ ತಿಳಿಸಿದರು.

                                ಕರಡು ಮತದಾರರ ಪಟ್ಟಿ ಪ್ರಕಟಣೆ, ಹೊಸ ಮತಗಟ್ಟೆಗಳ ರಚನೆ, ಸಂಕ್ಷಿಪ್ತ ಪರಿಷ್ಕರಣೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾದ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ಉದ್ದೇಶಿಸಿ ಮಾತನಾಡಿದರು.

            ಜಿಲ್ಲೆಯ ಮತದಾರರು ಪ್ರಜ್ಞಾವಂತರಿದ್ದು, ಮತದಾನದ ಹಕ್ಕು ಚಲಾಯಿಸುವುದು ಎಷ್ಟು ಮಹತ್ವದ್ದು ಎಂದು ಅರಿತಿದ್ದಾರೆ. ಕಳೆದ ಮೂರು ಚುನಾವಣೆಗಳ ಮತದಾರರ ಅಂಕಿ ಅಂಶಗಳು ಇದಕ್ಕೆ ನಿದರ್ಶನವಾಗಿವೆ. ಕಳೆದ ವಿಧಾನಸಭಾ ಚುನಾವಣೆಗಳ ನಂತರ 5817 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದು ಇದೇ ಅವಧಿಯಲ್ಲಿ ವಿವಿಧ ಕಾರಣಗಳಿಗಾಗಿ ಮತದಾರ ಪಟ್ಟಿಯಿಂದ 9823 ಮತದಾರರನ್ನು ಕೈಬಿಡಲಾಗಿದೆ. ಈಗ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ನಾಗರೀಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು, ನವೆಂಬರ್ 20 ರವರೆಗೆ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

                ಗ್ರಾಮೀಣ ಪ್ರದೇಶದಲ್ಲಿ 1300 ಹಾಗೂ ನಗರ ಪ್ರದೇಶಗಳಲ್ಲಿ 1400 ಕ್ಕಿಂತ ಹೆಚ್ಚಿಗೆ ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಂಗಡಿಸಿ ಹೊಸ ಮತಗಟ್ಟೆಗಳನ್ನು ರಚಿಸಲು ನಿರ್ಧರಿಸಲಾಗಿದ್ದು, ಇದರ ಅಂಗವಾಗಿ ಜಿಲ್ಲೆಯಲ್ಲಿ 7 ಹೊಸ ಮತಗಟ್ಟೆಗಳನ್ನು ರಚಿಸಲಾಗಿದೆ. ಪೈಕಿ ರಾಣೆಬೆನ್ನೂರಿನಲ್ಲಿ 03, ಹಾವೇರಿಯಲ್ಲಿ 02, ಶಿಗ್ಗಾಂವ, ಹಾಗೂ ಹಿರೇಕೆರೂರು ಕ್ಷೇತ್ರದಲ್ಲಿ ತಲಾ 1 ಹೊಸ ಮತಗಟ್ಟೆಗಳನ್ನು ರಚಿಸಿದ ಮಾಹಿತಿ  ನೀಡಿದರು.

                ಮತದಾರರ ಪಟ್ಟಿಗಳ ಪರಿಷ್ಕರಣೆ ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ. ರಾಜಕೀಯ ಪಕ್ಷಗಳು ಹಾಗೂ ಮತದಾರರು ಕೈ ಜೋಡಿಸಿದಾಗ ಮಾತ್ರ ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಸಾಧ್ಯ. ಕಾರಣ ರಾಜಕೀಯ ಪಕ್ಷಗಳು ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರನ್ನು ನಿಯೋಜಿಸುವ ಮೂಲಕ ಅರ್ಹ ಮತದಾರರ ಸೇರ್ಪಡೆ, ಅನರ್ಹ ಮತದಾರರ ತೆಗೆದು ಹಾಕುವಿಕೆಯಲ್ಲಿ ಸಹಕರಿಸಬೇಕು ಎಂದು ಕೋರಿಕೊಂಡರು.

ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಪ್ರಭು ಹಿಟ್ನಳ್ಳಿ ಮಾತನಾಡಿ, ಮತದಾರರು ವಾಸಿಸುವ ಪ್ರದೇಶದಿಂದ ಅವರ ಹೆಸರುಗಳು ಬೇರೆ ಭಾಗದಲ್ಲಿ ಕಂಡು ಬರುತ್ತಿವೆ ಇವನ್ನು ಸರಿಪಡಿಸಬೇಕು ಎಂದು ಕೇಳಿಕೊಂಡರು. ಮಾಕ್ರ್ಸವಾದಿ ಕಮ್ಯುನಿಷ್ಟ ಪಕ್ಷದ ಕಾರ್ಯದಶರ್ಿ ರುದ್ರಪ್ಪ ಜಾಬಿನ್ರವರು'' ಮತದಾರರು ಸಹ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ತಿಳಿಸಿದರು.

                ಸಭೆಯಲ್ಲಿ ರಾಜಕೀಯ ಪಕ್ಷಗಳ ನಾಯಕರಲ್ಲದೆ ಹಾವೇರಿ ಹಾಗೂ ಸವಣೂರು ಉಪವಿಭಾಗಾಧಿಕಾರಿಗಳು ಹಾಗೂ ಚುನಾವಣೆಯ ಶಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.