ಸದೃಡ ಆರೋಗ್ಯ ಹೊಂದಲು ಕ್ರೀಡೆಗಳಲ್ಲಿ ತೊಡಗಿಕೊಳ್ಳಿ : ಕೇಂದ್ರ ಸಚಿವ ಜೋಶಿ

ಸದೃಡ ಆರೋಗ್ಯ ಹೊಂದಲು ಕ್ರೀಡೆಗಳಲ್ಲಿ ತೊಡಗಿಕೊಳ್ಳಿ : ಕೇಂದ್ರ ಸಚಿವ ಜೋಶಿ Engage in sports to maintain good health: Union Minister Joshi

              ಶಿಗ್ಗಾವಿ 01  : ನಮ್ಮ ನೆಚ್ಚಿನ ಪ್ರಧಾನಿಯವರ ಕರೆಯ ಮೇರೆಗೆ ಆಯೋಜಿಸಲಾಗಿರುವ ದೊಡ್ಡಮಟ್ಟದ ಸಂಸದರ ಕ್ರೀಡಾಮಹೋತ್ಸವದಲ್ಲಿ ಇಲ್ಲಿಯವರೆಗೆ 27 ಸಾವಿರ ಯುವಕರು ಭಾಗವಹಿಸಿದ್ದಾರೆ. ಶಿಗ್ಗಾವಿ ಸವಣೂರ ಕ್ಷೇತ್ರದ ಕ್ರೀಡಾಮಹೋತ್ಸವವನ್ನು ಬಹಳ ಅದ್ಧೂರಿಯಾಗಿ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.  ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಸದರ ಕ್ರೀಡಾಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಯುವಕರು ಮೊಬೈಲಿನಲ್ಲಿ ಆಟಗಳನ್ನು ಆಡುತ್ತಿದ್ದು ಅವರನ್ನು ಭಾರತ ಮಾತೆಯ ಮಣ್ಣಿನ ಕಣಗಳಲ್ಲಿ ಆಡುವಂತೆ ಪ್ರೋತ್ಸಾಹಿಸುವ ಮೂಲಕ ದೇಶದ ಯುವ ಸಮುದಾಯವನ್ನು ದೈಹಿಕವಾಗಿ ಗಟ್ಟಿಗೊಳಿಸಿ, ಸದೃಢ ಭಾರತವನ್ನು ನಿರ್ಮಾಣ ಮಾಡಿ ಜಗತ್ತಿನ ನಂ1 ದೇಶವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿಯವರು ಹೊಂದಿದ್ದಾರೆ ಎಂದರು.  ನಾವೆಲ್ಲ ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರೀಡೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.

             ಈ ಕ್ರೀಡಾಮಹೋತ್ಸವ ಪಕ್ಷಾತೀತವಾಗಿದ್ದು, ಇದರ ಯಶಸ್ಸಿನಲ್ಲಿ ಜಿಲ್ಲಾಡಳಿತ ಮತ್ತು ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಶ್ರಮವಿದ್ದು, ಭರತ ಬೊಮ್ಮಾಯಿ, ನರಹರಿ ಕಟ್ಟಿ ಸೇರಿದಂತೆಹಲವರು ಹಗಲಿರುಳು ಶ್ರಮಿಸಿದ್ದಾರೆ ಎಂದರು.  ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇಡೀ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ಕ್ರೀಡಾ ಮಹೋತ್ಸವವನ್ನು ಆಯೋಜನೆ ಮಾಡಿದ್ದಾರೆ. ಆದರೆ ಶಿಗ್ಗಾವಿ ನಂಬರ್‌ಒನ್ ಅಂತ ಹೇಳಿದ್ದಾರೆ. ಕ್ರೀಡೆಗಳಿಗೆ ಅತಿ ಹೆಚ್ಚಿನ ಒತ್ತುಕೊಟ್ಟು ಜೀತೋ ಇಂಡಿಯಾ ಅಂತ ಹೇಳಿರುವ ಏಕೈಕ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ. ಟೊಕಿಯೋದಲ್ಲಿ, ದಿವ್ಯಾಂಗರ ಓಲಿಂಪಿಕ್ಸನಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ ರಾಷ್ಟ್ರ ಭಾರತ.

             ಒಂದು ನಾಯಕತ್ವ ಪ್ರಬಲವಾಗಿದ್ದು, ಸ್ಪಷ್ಟವಾದ ಗುರಿ ಮುಟ್ಟುವ ಛಲ ಇದ್ದರೆ ಏನಾಗುತ್ತದೆ ಎನ್ನುವುದಕ್ಕೆ ವಿಕಸಿತ ಭಾರತವೇ ಸಾಕ್ಷಿಯಾಗಿದೆ ಎಂದರು. ವೈಯಕ್ತಿಕ ಕ್ರೀಡೆಗಳಲ್ಲಿ ವಿಜೇತರಾದ ಮತ್ತು ಗುಂಪು ಆಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಕಬಡ್ಡಿ, ಖೋಖೋ, ವಾಲಿಬಾಲ್ ಕ್ರೀಡೆಗಳ ಅಂತಿಮ ಪಂದ್ಯಗಳಿಗೆ ಸಂಸದರಿಬ್ಬರು ಚಾಲನೆ ನೀಡಿ, ಟಾಸ್ ಮಾಡಿ ಪಂದ್ಯಗಳನ್ನು ವೀಕ್ಷಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಬಡ್ಡಿ ಪಂದ್ಯಾವಳಿಯಲ್ಲಿ ಎರಡೂ ತಂಡಗಳಿಗೆ ರೈಡ್ ಮಾಡುವ ಮೂಲಕ ಕ್ರೀಡಾಪ್ರೇಮಿಗಳಲ್ಲಿ ಉತ್ಸಾಹ ತುಂಬಿದರು.