ಧಾರವಾಡ 09: ಜೋಗುರ ಅವರ ನೇರನುಡಿ, ನುಡಿದಂತೆ ನಡೆದ ಜೀವನ ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಕಷ್ಟಕರವಾದದ್ದು. ಅದಕ್ಕಾಗಿ ಜೋಗುರ ಎತ್ತರದಲ್ಲಿ ನಿಲ್ಲುತ್ತಾರೆ. ಅವರ ಜೀವನದಲ್ಲಿ ಅನುಭವಿಸಿದ ನೋವು-ನಲಿವುಗಳನ್ನೇ ಅವರ ಕಥೆಗಳ, ಬರಹಗಳ ರೂಪದಲ್ಲಿ ಕಾಣಬಹುದು. ಜೀವನವನ್ನು ಲೇಖನಗಳಿಗೆ ಇಳಿಸಿದ ಅವರ ಬರಹಗಳು ಅನನ್ಯವಾದವುಗಳು. ಅವರ ಅಪೂರ್ಣಗೊಂಡ ಲೇಖನಗಳನ್ನು ಪೂರ್ಣಗೊಳಿಸುವುದು ಮತ್ತು ಅವರು ಎತ್ತಿ ಹಿಡಿದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸಿದಂತಾಗುತ್ತದೆ ಎಂದು ಹಿರಿಯ ಸಾಹಿತಿಗಳಾದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿ. 8ರಂದು ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ಶಿಕ್ಷಕರು, ಸಾಹಿತಿಗಳು, ಪ್ರಗತಿಪರ ಚಿಂತಕರಾಗಿದ್ದ ಡಾ.ಎಸ್.ಬಿ. ಜೋಗುರ ಅವರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿಗಳಾದ ಡಾ.ಶ್ಯಾಮಸುಂದರ ಬಿದರಕುಂದಿಯವರು ಮಾತನಾಡಿ ಜೋಗುರ ಅವರಂತ ಸಾಹಿತಿಗಳು ಕೇವಲ ಪುಸ್ತಕದಲ್ಲಿ ಮಾತ್ರವಲ್ಲ ಬದುಕಿನಲ್ಲಿ ಜೀವಂತವಾಗಿರುತ್ತಾರೆ. ಜೋಗುರ ಅವರ ಶಕ್ತಿ, ವಿಶಿಷ್ಟತೆಯನ್ನು ಪ್ರಚುರಪಡಿಸುವ ಕೆಲಸವನ್ನು ಮುಂದೆಯೂ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಬರುವ ಅಕ್ಟೋಬರ್ನಲ್ಲಿ ವಿಶ್ವ ಶಿಕ್ಷಕರ ದಿನದ ಸಂದರ್ಭದಲ್ಲಿ ಅವರ ಕೃತಿಗಳು, ಬದುಕು, ಸಾಮಾಜಿಕ ಬದ್ಧತೆ, ಒಟ್ಟು ಅವರ ವ್ಯಕ್ತಿತ್ವದ ಕುರಿತು ಒಂದು ದಿನದ ವಿಚಾರ ಸಂಕಿರಣ ಗೆಳೆಯರ ಬಳಗದಿಂದ ಆಯೋಜಿಸುವ ಚಿಂತನೆಯಿದೆ ಎಂದರು. ಇದಕ್ಕೆ ಎಲ್ಲರ ಸಹಕಾರ ಕೋರಿದರು.
ಹಿರಿಯ ಸಾಹಿತಿಗಳಾದ ಶಂಕರ ಹಲಗತ್ತಿಯವರು ಮಾತನಾಡಿ ಜೋಗುರ ಅವರು ಯಾವುದೇ ಉಪನ್ಯಾಸವಿರಲಿ ಆಳವಾಗಿ ಅಭ್ಯಾಸ ಮಾಡಿ ಅದಕ್ಕೆ ನ್ಯಾಯ ಒದಗಿಸುತ್ತಿದ್ದರು. ಬರವಣಿಗೆಯಂತೆಯೇ ಬದುಕಿದ್ದ ವಿರಳ ವ್ಯಕ್ತಿತ್ವ ಅವರದ್ದು. ನೇರ ನಿಷ್ಠೂರದ ವ್ಯಕ್ತಿತ್ವ ಅವರದ್ದು. ಇನ್ನೊಬ್ಬರಿಗೆ ಸ್ಪೂತರ್ಿ ನೀಡುತ್ತಿದ್ದರೇ ಹೊರತು ಜೋಗುರ ತಮ್ಮ ನೋವುಗಳನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುತ್ತಿರಲಿಲ್ಲ. ಧಾರವಾಡದ ಯಾವುದೇ ಪ್ರಗತಿಪರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದರು. ಅವರ ಸಾಹಿತ್ಯ, ಬದುಕು ನಿರಂತರವಾಗಿ ಚಚರ್ೆಯಾಗಬೇಕು. ಆ ಮೂಲಕ ಈ ಪೀಳಿಗೆಗೆ ಅವರ ವಿಚಾರಗಳನ್ನು ಕೊಂಡೊಯ್ಯೋಣ ಎಂದರು.
ಸಾಮಾಜಿಕ ಹೋರಾಟಗಾರ ರಾಮಾಂಜನಪ್ಪ ಆಲ್ದಳ್ಳಿಯವರು ಮಾತನಾಡಿ ಜೋಗುರ ಅವರ ಮನಸ್ಸು ಯಾವಾಗಲೂ ಸಮಾಜದಲ್ಲಿರುವ ಅಸಮಾನತೆ-ಅವ್ಯವಸ್ತೆಗಳ ವಿರುದ್ಧ ಕುದಿಯುತ್ತಿತ್ತು. ಇಂತಹ ಅಸಮಾನತೆ ಹೋಗಬೇಕು ಎಂಬುದು ಅವರ ತುಡಿತವಾಗಿತ್ತು. ಅವರು ಕೇವಲ ಸಾಹಿತಿಯಾಗಿರಲಿಲ್ಲ; ಅವರ ಮನಸ್ಸು ಸಮಾಜಮುಖಿಯಾಗಿತ್ತು. ತಮ್ಮ ವಿದ್ಯಾಥರ್ಿಗಳಿಗೆ ಕೇವಲ ಮೇಷ್ಟ್ರಾಗಿರದೆ ತಂದೆಯಂತೆ ಅವರ ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದರು. ಇಂತಹ ವ್ಯಕ್ತಿತ್ವ ಅತ್ಯಂತ ವಿರಳವಾದದ್ದು. ಅವರನ್ನು ಹತ್ತಿರದಿಂದ ಬಲ್ಲವರೆಲ್ಲರಿಗೂ ಇದು ಅತ್ಯಂತ ನೋವಿನ ಸಂದರ್ಭವಾಗಿದೆ. ಅವರ ಚಿಂತನೆಯ ಮಾದರಿಗಳನ್ನು ನಾವು ಅನುಸರಿಸುವ ಮೂಲಕ ಅವರಿಗೆ ನಿಜವಾದ ಗೌರವವನ್ನು ಸಲ್ಲಿಸೋಣ ಎಂದರು.
ಜೋಗುರ ಅವರ ಪತ್ನಿ ಶೀತಲ ಅವರು ಮಾತನಾಡಿ ಜೋಗುರ ಅವರ ವೈಚಾರಿಕ ಚಿಂತನೆಗಳು, ಆದರ್ಶಗಳು ಮತ್ತು ಅವರ ಆಶಯಗಳನ್ನು ಜೀವಂತವಾಗಿಡುವ ಜೊತೆಗೆ ಅಪೂರ್ಣಗೊಂಡಿರುವ ಅವರ ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ಪೂರ್ಣಗೊಳಿಸುವ ಹೊಣೆ ಈಗ ನನ್ನ ಮೇಲಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಕಾರ್ಯಕ್ರಮ ನಿರ್ವಹಿಸಿದ ಪತ್ರಕರ್ತರಾದ ಡಾ. ವೆಂಕನಗೌಡ ಪಾಟೀಲ ಅವರು ಮಾತನಾಡಿ ಜೋಗುರ ಅವರ ಬದುಕು, ವೈಚಾರಿಕ ಬದ್ಧತೆ, ಶಿಸ್ತು, ವೃತ್ತಿ ಪ್ರೇಮ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಜೋಗುರ ಅವರೊಂದಿಗೆ ಒಡನಾಡಿಗಳಾದ ಧಾರವಾಡದ ಉಪವಿಭಾಗಾಧಿಕಾರಿಗಳಾದ ಮಹಮದ್ ಜುಬೇರ, ಡಾ. ಪ್ರಜ್ಞಾಮತ್ತಿಹಳ್ಳಿ, ವೆಂಕಟೇಶ ಮಾಚಕನೂರ, ರಾಘವೇಂದ್ರ ಪಾಟೀಲ್, ಎಂ.ಬಿ.ಕೊಳವಿ, ಎಸ್.ಎಸ್.ಹಿರೇಮಠ, ಹೇಮಾ ಪಟ್ಟಣಶೆಟ್ಟಿ, ಬಿ.ಐ. ಇಳಿಗೇರ, ಡಾ. ಜಿ.ಕೆ.ಬಡಿಗೇರ, ಡಾ. ತಲ್ಲೂರ, ಎಚ್.ಜಿ.ದೇಸಾಯಿ ಮುಂತಾದವರು ಜೋಗುರ ಅವರೊಂದಿಗಿನ ತಮ್ಮ ಒಡನಾಟಗಳನ್ನು ಹಂಚಿಕೊಂಡರು. ಕಲಾವಿದರಾದ ಬಹುರೂಪಿಯವರು ಚಿತ್ರಿಸಿದ ಜೋಗುರ ಅವರ ಬಾವಚಿತ್ರ ಗಮನ ಸೆಳೆಯಿತು. ಸಂಘಟನಾಕಾರರಾದ ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗಣ್ಣವರ, ಶರಣು ಗೋನವಾರ, ರಮೇಶ ಹೊಸಮನಿ, ಮಧುಲತಾ ಗೌಡರ್, ಭವಾನಿಶಂಕರ್, ಹನುಮೇಶ, ಮಹಾಂತೇಶ, ರಣಜಿತ್ ಮುಂತಾದವರು ಭಾಗವಹಿಸಿದ್ದರು.