‘ಬೇಟಿ ಬಚಾವೋ-ಬೇಟಿ ಪಡಾವೋ’ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾ.ರಾಜೇಶ್.ಎನ್ ಹೊಸಮನಿ
ಬಳ್ಳಾರಿ 22 :ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯವಾಗಿದ್ದು, ಲಿಂಗಾನುಪಾತದ ಅಂತರ ಕಡಿಮೆ ಮಾಡಿ, ಮಹಿಳಾ ಸಬಲೀಕರಣಕ್ಕೆ ಉತ್ತೇಜಿಸುವುದು ನಮ್ಮೆಲ್ಲರ ಆದ್ಯತೆಯಾಗಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್.ಎನ್ ಹೊಸಮನೆ ಅವರು ಹೇಳಿದರು.
‘ಬೇಟಿ ಬಚಾವೋ-ಬೇಟಿ ಪಡಾವೋ’ ಅಭಿಯಾನ 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು. ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸರ್ಕಾರದಲ್ಲಿ ಹಲವಾರು ಯೋಜನೆಗಳು ಜಾರಿಯಾಗಿವೆ. ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ-ಬೇಟಿ ಪಡಾವೋ’ ಯೋಜನೆಯು 2015ರ ಜನವರಿ 22ರಂದು ಪ್ರಾರಂಭಿಸಲಾಯಿತು. ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ತೊಡೆದುಹಾಕುವುದು. ಅದರ ಬಗ್ಗೆ ಜನರಲ್ಲಿರುವ ನಕಾರಾತ್ಮಕ ಮನೋಭಾವ ಬದಲಾಯಿಸುವುದು. ಹೆಚ್ಚಾಗಿ ನಡೆಯುತ್ತಿರುವ ಬಾಲ್ಯ ವಿವಾಹವನ್ನು ತಡೆಗಟ್ಟಿ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್.ಕೆ.ಹೆಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಬದುಕುವ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ. ಪ್ರತಿಯೊಬ್ಬ ಹೆಣ್ಣುಮಗುವು ಶಾಲೆಯಿಂದ ಹೊರಗುಳಿಯದೇ ಶಿಕ್ಷಣ ಪಡೆಯಬೇಕು. ಕ್ಷೀಣಿಸುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಇನ್ನಿತರ ಸಮಸ್ಯೆಗಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಿ ತಿಳಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಲಾಲಪ್ಪ ಎ.ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಎ.ಭೈರ್ಪ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಿಗುರು ಕಲಾ ತಂಡದ ಹುಲುಗಪ್ಪ ಅವರ ತಂಡದಿಂದ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ ಕುರಿತ ಜಾಗೃತಿ ನಾಟಕ ಪ್ರದರ್ಶಿಸಿದರು.
*ಸೈಕಲ್ ಜಾಥಾ*
‘ಬೇಟಿ ಬಚಾವೋ ಬೇಟಿ ಪಡಾವೋ’ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು. ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಸೈಕಲ್ ಜಾಥಾಗೆ ಚಾಲನೆ ನೀಡಿದರು.
ಜಾಥಾವು ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಆವರಣದಿಂದ ಆರಂಭವಾಗಿ ಹೆಚ್.ಆರ್.ಗವಿಯಪ್ಪ ವೃತ್ತ (ಮೋತಿ ಸರ್ಕಲ್), ಗಡಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಮರಳಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಆವರಣಕ್ಕೆ ಬಂದು ಸಮಾರೋಪಗೊಂಡಿತು.