ಕಂಪ್ಲಿ ಉತ್ಸವ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
District in-charge Minister B.Z. Zameer Ahmed Khan inaugurates the Kampli festival and promises
ಬಳ್ಳಾರಿ 13: ಕಳೆದ ಸಾಲಿನಲ್ಲಿ ಕಂಪ್ಲಿ ಕ್ಷೇತ್ರಕ್ಕೆ 2 ಸಾವಿರ ಮನೆ ನೀಡಿದ್ದು, ಬರುವ ಆರ್ಥಿಕ ಸಾಲಿಗೆ ಕಂಪ್ಲಿ ಕ್ಷೇತ್ರಕ್ಕೆ 3 ಸಾವಿರ ಮನೆಗಳನ್ನು ನೀಡಲಾಗುವುದು. ಒಟ್ಟಾರೆಯಾಗಿ ಎರಡೂವರೆ ವರ್ಷದಲ್ಲಿ 5 ಸಾವಿರ ಮನೆಗಳನ್ನು ವಿತರಿಸಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಂಪ್ಲಿ ಪಟ್ಟಣದ ಸುಂದರಿ ಸಕ್ಕರೆ ಕಾರ್ಖಾನೆ ಮೈದಾನದ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಗುರುವಾರ ಆಯೋಜಿಸಲಾದ ಕಂಪ್ಲಿ ಉತ್ಸವಕ್ಕೆ ವಿದ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
2013- 2018 ರ ವರೆಗಿನ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ರಾಜ್ಯದಲ್ಲಿ ಸುಮಾರು 14.58 ಲಕ್ಷ ಮನೆಗಳನ್ನು ವಿತರಿಸಿದೆ. 2018-23 ರ ಅವಧಿಯ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಅವಧಿಯಲ್ಲಿ 5 ಲಕ್ಷ ಮನೆ ನೀಡಲಾಗಿದೆ. ಎಲ್ಲಾ ಮನೆಗಳು ಪೂರ್ಣ ಹಂತದಲ್ಲಿದೆ. ಆದರೆ ಪ್ರಸ್ತುತದಲ್ಲಿ ಯಾವುದೇ ಮನೆಗಳನ್ನು ಮಂಜೂರು ಮಾಡಿಲ್ಲ; ಸರ್ಕಾರ ನೀಡುವ ಅನುದಾನ ಸಾಮಾನ್ಯ ಜನರಿಗೆ ಹೊರೆಯಾಗಲಿದ್ದು, ಅನುದಾನ ಪರಿಷ್ಕರಣೆ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ ಎಂದರು. 2024ರಲ್ಲಿ ಮೊದಲ ಹಂತದಲ್ಲಿ 36,779 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮೂರನೇ ಹಂತದಲ್ಲಿ 36 ಸಾವಿರ ಮನೆಗಳನ್ನು ಜೂನ್ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದರು.
ಬಡವರ ಕಾಳಜಿ ಹೊಂದಿದ ಸರ್ಕಾರ ನಮ್ಮದು. ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಜಾರಿಗೊಳಿಸಲಾಗಿದೆ. ಕಳೆದ ಸರ್ಕಾರದಲ್ಲಿ ಈ ಕ್ಷೇತ್ರಕ್ಕೆ 3 ಸಾವಿರ ಕೋಟಿ ಅನುದಾನ ಲಭಿಸಿದೆ. ನಮ್ಮ ಸರ್ಕಾರ ಬಂದ ಮೇಲೆ ಈ ಭಾಗಕ್ಕೆ ಎರಡೂವರೆ ವರ್ಷದಲ್ಲಿ ಸುಮಾರು 2,500 ಸಾವಿರ ಕೋಟಿ ರೂ. ಅನುದಾನ ನೀಡಿದೆ. ತಾಲ್ಲೂಕು ಮಟ್ಟದ ಉತ್ಸವವನ್ನು ಸರ್ಕಾರದ 70 ಲಕ್ಷ ರೂ. ವೆಚ್ಚದಲ್ಲಿ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಈ ಜನಸ್ತೋಮವೇ ಸಾಕ್ಷಿಯಾಗಿದೆ. ಕಂಪ್ಲಿ ಕ್ಷೇತ್ರದ ಮೇಲೆ ಶಾಸಕ ಗಣೇಶ್ ಅವರು ಇಟ್ಟಿರುವ ಪ್ರೀತಿ ಅಂತಹದ್ದು. ಮುಂಬರುವ ಉತ್ಸವಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗುವುದು ಎಂದರು.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ, ಈ ಭಾಗದ ರೈತರ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಮತ್ತು ಜನಸಾಮಾನ್ಯರ ಕಷ್ಟ- ಕಾರ್ಪಣಯಗಳಿಗೆ ತ್ವರಿತ ಸ್ಪಂದಿಸುವ ಭಗೀರಥ, ಸಹೃದಯಿ ಶಾಸಕ ಜೆ.ಎನ್ ಗಣೇಶ್ ಎಂದು ಹೇಳಿದರು. ಶಾಸಕ ಗಣೇಶ್, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನಕ್ಕಾಗಿ ಎಲ್ಲಾ ಸಚಿವರ ಕಚೇರಿಗಳಿಗೆ ಸಾಕಷ್ಟು ಅಲೆದಾಡುತ್ತಿದ್ದರು. ಈ ಉತ್ಸವದ ಅನುದಾನಕ್ಕಾಗಿ ಸಾಕಷ್ಟು ಅವಿರತರಾಗಿ ಶ್ರಮಿಸಿದ್ದಾರೆ. ಮುಂಬರುವ ಎಲ್ಲಾ ಕಂಪ್ಲಿ ಉತ್ಸವಗಳಿಗೆ ಜಿಲ್ಲೆಯ ಎಲ್ಲಾ ಶಾಸಕರ ಸಾಥ್ ಇರಲಿದೆ ಎಂದು ಹೇಳಿದರು.
ಕಂಪ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ದ ಅಧ್ಯಕ್ಷರೂ ಆದ ಜೆ.ಎನ್.ಗಣೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದೆ. ಕಂಪ್ಲಿ-ಕುರುಗೋಡಿನಲ್ಲಿ ಮಿನಿ ವಿಧಾನಸೌಧ, 100 ಹಾಸಿಗೆಯುಳ್ಳ ಆಸ್ಪತ್ರೆ, ಮುಖ್ಯ ರಸ್ತೆಗಳ ನಿರ್ಮಾಣ, ಶಾಲಾ-ಕಾಲೇಜುಗಳು, ಕಂಪ್ಲಿ-ಗಂಗಾವತಿ ಸೇತುವೆ ಸೇರಿದಂತೆ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಮನುಷ್ಯನಿಗೆ ಜೀವನದಲ್ಲಿ ಒಂದು ಅವಕಾಶ ದೊರೆಯಬೇಕು. ಆ ಅವಕಾಶ ಈಗ ನನಗೆ ದೊರೆತಿದ್ದು, ನನ್ನ ಕ್ಷೇತ್ರದ ಜನತೆಯ ಸೇವೆಗೈಯುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ; ಪ್ರೀತಿ ವಿಶ್ವಾಸ ಮುಖ್ಯ. ಎರಡು ಬಾರಿ ನನ್ನನ್ನು ಶಾಸಕನನ್ನಾಗಿಮಾಡಿರುವ ಕಂಪ್ಲಿ- ಕುರುಗೋಡು ಜನತೆಗೆ ನನ್ನ ರಾಜಕೀಯ ನಿವೃತ್ತಿ ನಂತರವೂ ಆಭಾರಿಯಾಗಿರುತ್ತೇನೆ ಎಂದು ನುಡಿದು ಭಾವುಕರಾದರು.
ಈ ಭಾಗದ ರೈತರ ಜೀವನಾಡಿಯಾದ ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಮುಂದಿನ ಭವಿಷ್ಯದ ಸುಭದ್ರ, ಸುರಕ್ಷಿತ ದಿನಗಳಿಗಾಗಿ ರೈತರು ಸಹಕರಿಸಬೇಕಾಗಿದೆ. ಯಾರೂ ನಿರಾಶರಾಗಬಾರದು ಎಂದರಲ್ಲದೇ, ಸತತ ಮೂರು ತಿಂಗಳ ಪ್ರಯತ್ನದಿಂದ ಕಂಪ್ಲಿ- ಕುರುಗೋಡು ಉತ್ಸವ ಆಚರಿಸಲು ಅವಕಾಶ ದೊರೆತಿದೆ ಎಂದರು. ಕಾರ್ಯಕ್ರಮಕ್ಕೂ ಆರಂಭಕ್ಕೂ ಮುನ್ನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ, ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಕರ್ನಾಟಕ ಸ್ಟೇಟ್ ಮಿನಿರಲ್ಸ್ ಕಾರ್ೋರೇಷನ್ ಲಿಮಿಟೆಡ್ ನ ಉಪಾಧ್ಯಕ್ಷ ಹೆಚ್.ಲಕ್ಷಣ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಕಂಪ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸರಾವ್, ಕಂಪ್ಲಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಬೀಬ್ ರೆಹಮಾನ್ ಸೇರಿದಂತೆ ತಾಲ್ಲೂಕು ಆಡಳಿತದ ಅಧಿಕಾರಿಗಳು-ಸಿಬ್ಬಂದಿ ವರ್ಗ, ಸಾರ್ವಜನಿಕರು ಇದ್ದರು. ಬಳಿಕ ಚಂದನ್ ಶೆಟ್ಟಿ ಮತ್ತು ತಂಡದವರಿಂದ ರಸಮಂಜರಿ ಸಂಗೀತ ಕಾರ್ಯಕ್ರಮ ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 