ವಿಧಾನಮಂಡಲದ ಎಸ್ಸಿ-ಎಸ್ಟಿ ಸಮಿತಿಯಿಂದ ಜಿಲ್ಲೆಯ ಪ್ರಗತಿ ಪರೀಶೀಲನೆ

ವಿಧಾನಮಂಡಲದ ಎಸ್ಸಿ-ಎಸ್ಟಿ ಸಮಿತಿಯಿಂದ ಜಿಲ್ಲೆಯ ಪ್ರಗತಿ ಪರೀಶೀಲನೆ

ವಿಜಯಪುರ 06: ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ನ.15ರಂದು ಬಾಗಲಕೋಟೆ ಜಿಲ್ಲೆಗೆ ಆಗಮಿಸಿ, ಅಂದು ಬೆಳಿಗ್ಗೆ ವಿಜಯಪುರ ಜಿಲ್ಲೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯದವರ ಅಭಿವೃದ್ದಿಗಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆ-ಕಾರ್ಯಕ್ರಮಗಳ ಪ್ರಗತಿ ಪರೀಶೀಲನೆ ನಡೆಸಲಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮ-ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಮೂರು ದಿನಗಳೊಳಗಾಗಿ ಸಲ್ಲಿಸಬೇಕು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.  

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿಧಾನಮಂಡಲ ಸಮಿತಿಯು ಬೆಳಗಾವಿ ವಿಭಾಗದಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಬಾಗಲಕೋಟೆಯಲ್ಲಿ ವಿಜಯಪುರ ಜಿಲ್ಲೆಯ ಪ್ರಗತಿ ಪರೀಶೀಲನೆ ನಡೆಸಲಿದೆ. ಈ ಸಭೆಯಲ್ಲಿ ಇಲಾಖೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಮಾನ್ಯ ಕಾರ್ಯಕ್ರಮಗಳು ಮತ್ತು ಎಸ್‌ಸಿಪಿ-ಟಿಎಸ್‌ಪಿ ಯೋಜನೆಗಳಡಿಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮುದಾಯವರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿರುವುದರಿಂದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯೋಜನೆ-ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಲೋಪವಾಗದಂತೆ ಸಮಗ್ರ ಮಾಹಿತಿ ಒದಗಿಸಬೇಕು. ಒಂದು ವೇಳೆ ತಪ್ಪು ಮಾಹಿತಿ ಒದಗಿಸಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.  

ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಂಖ್ಯೆ, ಈ ಪೈಕಿ ಮಹಿಳೆಯರು ಹಾಗೂ ಪುರುಷರ ಸಂಖ್ಯೆ. ಇಲಾಖೆಯಿಂದ ಕಳೆದ 2021-2024ನೇ ಸಾಲಿನವರೆಗೆ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಗಗೆ ಹಂಚಿಕೆ-ಬಿಡುಗಡೆಯಾದ ಹಾಗೂ ಖರ್ಚಾದ ಅನುದಾನ, ವಿದ್ಯಾರ್ಥಿನಿಲಯ, ವಸತಿ ಶಾಲೆ, ನಿರ್ಮಾಣಕ್ಕೆ ಕಂದಾಯ-ಅರಣ್ಯ ಇಲಾಖೆ ಮತ್ತು ಇತರೆ ಇಲಾಖೆಗಳು ಹಸ್ತಾಂತರಿಸಬೇಕಾಗಿರುವ ತಾಲೂಕಾವಾರು ನಿವೇಶನಗಳ ಸಂಖ್ಯೆ, ವಿದ್ಯಾರ್ಥಿನಿಲಯ, ವಸತಿ ನಿಲಯ ಕಾಮಗಾರಿಗಳ ಪ್ರಗತಿ ವಿವರ, ಇಲಾಖೆಯಿಂದ ಸಮುದಾಯದ ಏಳಿಗೆಗಾಗಿ ಕಾರ್ಯಕ್ರಮಗಳ ಪ್ರಗತಿ ವಿವರ, ಎಸ್ಸಿ-ಎಸ್ಟಿ ಸಮಸ್ಯೆಗಳಿಗೆ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕ್ರಮಗಳ ವಿವರ, ದೌರ್ಜನ್ಯ, ಕೋಮುಗಲಭೆ, ಅಂತರ್‌ಜಾತಿ ವಿವಾಹ ಹಾಗೂ ಇತರೆ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರಕ್ಕಾಗಿ ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಸೂಚಿಸಲಾಯಿತು.  

ವಿದ್ಯಾರ್ಥಿನಿಲಯಗಳಿಗೆ ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯ, ವಿದ್ಯಾರ್ಥಿನಿಲಯಗಳ ಕಟ್ಟಡಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣದ ತಾಲೂಕಾವಾರು ಪ್ರಗತಿ ವಿವರ, ವಿವಿಧ ನಿಗಮಗಳಡಿಯಲ್ಲಿ ಸಾಧಿಸಿರುವ ಪ್ರಗತಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಡಿ ವಸತಿ ಶಾಲೆಗಳ ವಿವರ ಸಲ್ಲಿಸುವಂತೆ ಸೂಚಿಸಲಾಯಿತು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿಯ ನಗರ ಪ್ರದೇಶ-ಗ್ರಾಮೀಣ ಪ್ರದೇಶದ ಅಂಗನವಾಡಿಗಳ ವಿವರ, ವಿವಿಧ ಯೋಜನೆಗಳ ಪ್ರಗತಿ ವಿವರ, ಸಮಾಜಕ್ಕೆ ಮಾರಕವಾಗಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕೈಗೊಂಡ ಕ್ರಮಗಳ ವಿವರ, ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ ಪ್ರಕರಣ, ಪತ್ತೆ ಹಚ್ಚಿರುವ ಪ್ರಕರಣಗಳು ಸೇರಿದಂತೆ ಈ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವ ವಿವರ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಹಿಳೆ ಹಾಗೂ ಮಕ್ಕಳ ವಿವರ ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕೈಗೊಂಡ ಕ್ರಮಗಳ ವಿವರ, ವಿಶೇಷ ಚೇತನರು ಮತ್ತು ಹಿರಿಯರ ನಾಗರಿಕರ ಸಂಖ್ಯೆ, ಇವರಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ, ಇದರಲ್ಲಿ ಎಸ್ಟಿ-ಎಸ್ಟಿ ಪಂಗಡಗಳಿಗೆ ತಾಲೂಕವಾರು ಒದಗಿಸಿರುವ ಸೌಲಭ್ಯಗಳ ವಿವರವನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.  

ಕಂದಾಯ ಇಲಾಖೆ, ಅರಣ್ಯ ಇಲಾಖೆ, ಒಳಾಡಳಿತ ಇಲಾಖೆ, ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಇಂಧನ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ, ಅಬಕಾರಿ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ದಿ ಇಲಾಖೆ, ಸಹಕಾರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳು-ಕಾರ್ಯಕ್ರಮಗಳು ಹಾಗೂ ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ದಿಗಾಗಿ ಕೈಗೊಂಡಿರುವ ವಿವಿಧ ಯೋಜನೆ, ಕಾರ್ಯಕ್ರಮ, ಕಾಮಗಾರಿಗಳ ವಿವರವನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಡಿಎಸ್‌ಪಿ ಸುನೀಲ ಕಾಂಬಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್‌ಕುಮಾರ ಗುಣಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.