ವ್ಯವಸ್ಥಿತ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಸೂಚನೆ :ಜಿಲ್ಲಾಧಿಕಾರಿ

ವ್ಯವಸ್ಥಿತ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಸೂಚನೆ :ಜಿಲ್ಲಾಧಿಕಾರಿ District Magistrate issues instructions to conduct systematic and transparent examinations

        ಹಾವೇರಿ 25 : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ  ಮಾರ್ಚ್‌ 1 ರಂದು ಜಿಲ್ಲೆಯ 39 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಯಾವುದೇ ಲೋಪದೋಷವಾಗದಂತೆ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌.ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ  ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಈವರೆಗೆ ಜಿಲ್ಲೆಯಲ್ಲಿ ಎಲ್ಲ ಪರೀಕ್ಷೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ  ಮಾಡಲಾಗಿದೆ.  ಜಿಲ್ಲೆಗೆ ಕಪ್ಪು ಚುಕ್ಕೆಬರದಂತೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.  

ಈ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ  ವಿವಿಧ ಇಲಾಖೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ  ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು  ಎಂದು  ಸೂಚಿಸಿದರು. 

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಉಪನ್ಯಾಸಕರು ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದ ಹೊರ ವಲಯ ಹಾಗೂ ಕೊಠಡಿಯ ಒಳಗೆ ಶಿಸ್ತುಬದ್ಧವಾಗಿ ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸಬೇಕು ಎಂದು ನಿರ್ದೇಶನ ನೀಡಿದರು. 

12 ತಂಡ ರಚನೆ: ಪ್ರಶ್ನೆ  ಪತ್ರಿಕೆ ಬಂಡಲ್ ತೆಗೆದುಕೊಂಡುಹೋಗಲು  ಪ್ರತಿ ತಾಲೂಕಿಗೂ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಿನ್ಸಿಪಾಲ್ ಒಳಗೊಂಡ ತ್ರಿ ಸದಸ್ಯ ಸಮಿತಿಯ  12 ತಂಡಗಳನ್ನು ನೇಮಕ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕಿಗೆ ನಿಗದಿಪಡಿಸಿದ ಸಮಯಕ್ಕೆ ಅನುಗುಣವಾಗಿ ತೆಗೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು. 

ಧೂಳುರಹಿತವಾಗಿರಬೇಕು: ಪರೀಕ್ಷಾ ಕೊಠಡಿಗಳಲ್ಲಿ  ಸ್ವಚ್ಛತೆಗೆ ಆದ್ಯತೆ ನೀಡಬೇಕು, ಪರೀಕ್ಷಾ ಕೊಠಡಿಗಳಲ್ಲಿ ಡೆಸ್ಕ್‌ ಧೂಳುರಹಿತವಾಗಿರಬೇಕು, ಗಾಳಿ ಮತ್ತು ಬೆಳಕು, ಕುಡಿಯುವ ನೀರು ಹಾಗೂ ಶೌಚಾಲಯ  ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಜಿಲ್ಲಾ ಖಜಾನೆಗೆ ಸಲ್ಲಿಸಬೇಕು.  ಎಂದು ಸೂಚಿಸಿದರು.   

ಗುರುತು ಪತ್ರ: ಡಿ ಗ್ರೂಪ್ ಸೇರಿದಂತೆ ಪರೀಕ್ಷೆ ಕಾರ್ಯಕ್ಕೆ ನಿಯೋಜಿಸಿದ ಎಲ್ಲರಿಗೂ ಗುರುತುಪತ್ರ ನೀಡಬೇಕು. ಪರೀಕ್ಷೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು  ಬೆಳಿಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.  ಪರೀಕ್ಷಾ ಮಾರ್ಗಸೂಚಿ ಅನ್ವಯ ಓಎಂಆರ್ ಸೀಟ್‌ನಲ್ಲಿ  ವಿದ್ಯಾರ್ಥಿಗಳ  ನೋಂದಣಿ ಸಂಖ್ಯೆಯನ್ನು ಕೊಠಡಿ ಮೇಲ್ವಿಚಾರಕರೇ ಬರೆಯಬೇಕು ಎಂದರು.  

ಬಂದೋಬಸ್ತ್‌: ಪರೀಕ್ಷೆ ನಡೆಯುವ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್‌  ಒದಗಿಸಲು ಹಾಗೂ ಓರ್ವ ಶುಶ್ರೂಷಕಿಯನ್ನು ನಿಯೋಜನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಮಾಹಿತಿ ನೀಡಿ: ಆಕಸ್ಮಿಕವಾಗಿ ಬೇರೆ ಕೇಂದ್ರದ ವಿದ್ಯಾರ್ಥಿಗಳು ನಿಮ್ಮ ಕೇಂದ್ರಕ್ಕೆ ಬಂದರೆ, ವಿದ್ಯಾರ್ಥಿಗಳಿಗೆ ಪಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.  

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮುಂಜಾಗ್ರತೆ ವಹಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. 

ಇಲೆಕ್ಟ್ರಾನಿಕ್ ಉಪಕರಣಗಳ ನಿಷೇಧ: ಪರೀಕ್ಷಾರ್ಥಿಗಳು ಅಥವಾ ಕೊಠಡಿಯ ಮೇಲ್ವಿಚಾರಕರಾಗಲಿ ಪರೀಕ್ಷಾ ಕೇಂದ್ರದೊಳಗೆ  ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್, ಲಾಗ್ ಟೇಬಲ್, ಕ್ಯಾಲ್ಕುಲೇಟರ್ ಹಾಗೂ ರಿಸ್ಟ್‌ ವಾಚ್‌ಗಳನ್ನು ನಿಷೇಧಿಸಿದೆ. ಈ ಕುರಿತಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದರು. 

200 ಮೀಟರ್ ಪ್ರದೇಶ ನಿಷೇಧ: ಪರೀಕ್ಷಾ ಕೇಂದ್ರಗಳ ಸುತ್ತಲೂ 200  ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಝರಾಕ್ಸ್‌ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ತಿಳಿಸಿದರು. 

11,908 ವಿದ್ಯಾರ್ಥಿಗಳು: ಪದವಿ ಪೂರ್ವ ಶಿಕ್ಷಣ ಇಲಾಖೆ  ಪ್ರಭಾರ ಉಪನಿರ್ದೇಶಕ ಬಸವರಾಜ ಇಟ್ಟಿಗುಡಿ ಅವರು ಮಾತನಾಡಿ, ಪರೀಕ್ಷಾ ರೂಪರೇಷೆಗಳ ಮಾಹಿತಿ ನೀಡಿದರು ಹಾಗೂ  ಜಿಲ್ಲೆಯಲ್ಲಿ 11,908 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ  ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ಜರುಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.  

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಅವರು ಮಾತನಾಡಿ,  ಇಲಾಖೆಯಿಂದ ಪರೀಕ್ಷೆ ಅಗತ್ಯ ಪೊಲೀಸ್ ಬಂದೋಬಸ್ತ್‌  ಒದಗಿಸಲಾಗುವುದು. ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ,  ಯಾವ ಕ್ರಮಸಂಖ್ಯೆಯಿಂದ ಯಾವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿಯನ್ನು  ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು. 

39 ಪರೀಕ್ಷಾ ಕೇಂದ್ರಗಳು:  ಶಿಗ್ಗಾಂವಿಯ ಸರ್ಕಾರಿ ಪಿಯು ಕಾಲೇಜು, ಎಸ್ ಬಿ ಬಿ ಎಮ್ ಡಿ ಪಿಯು ಕಾಲೇಜು, ಎಸ್ ಆರ್ ಜೆ ವಿ ಪಿಯು ಕಾಲೇಜು, ಜೆ ಎಂ ಜೆ ಪಿಯು ಕಾಲೇಜು, ಸವಣೂರಿನ ಸರ್ಕಾರಿ ಮಜೀದ ಪಿಯು ಕಾಲೇಜು, ವಿದ್ಯಾಭಾರತಿ ಎಜುಕೇಷನ್ ಸೊಸೈಟಿ ಪಿಯು ಕಾಲೇಜು, ಮಹಿಳಾ ಸರ್ಕಾರಿ ಪಿಯು ಕಾಲೇಜು, ಸರ್ಕಾರಿ ಮಜೀದ ಪ್ರೌಡ ಶಾಲೆ, ಹಾನಗಲ್‌ನ ನವೀನ ಹಿರಿಯ ಪ್ರಾಥಮಿಕ ಶಾಲೆ, ಹಜರತ್ ಮಕ್ಬೂಲಿಯ ಉರ್ದು ಪ್ರೌಡ ಶಾಲೆ, ಜನತಾ ಮಹಿಳಾ ಪ್ರೌಡ ಶಾಲೆ,  ಕುಮಾರೇಶ್ವರ ಪ್ರೌಡ ಶಾಲೆ,  ಕುಮಾರೇಶ್ವರ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜು, ಕೆ ಎಲ್ ಇ ಸೊಸೈಟಿ ಪಿಯು ಕಾಲೇಜು, ನ್ಯೂ ಕಾಂಪೋಸಿಟ್ ಪ್ರಿ ಯೂನಿವರ್ಸಿಟಿ ಕಾಲೇಜು, ಅಂಜುಮನ್ ಕಾಂಪೋಸಿಟ್ ಪ್ರಿ ಯುನಿವರ್ಸಿಟಿ ಕಾಲೇಜ್‌ನಲ್ಲಿ  ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  

  ಹಾವೇರಿಯ ಎಸ್ ಎಂ ಎಸ್ ಪಿಯು ಕಾಲೇಜು, ಲಯನ್ಸ್‌ ಪಿಯು ಕಾಲೇಜು, ಎಸ್ ಎಸ್ ಮಹಿಳಾ ಪಿಯು ಕಾಲೇಜು, ಸರಕಾರಿ ಮಹಿಳಾ ಪಿಯು ಕಾಲೇಜು,  ಶಿವಲಿಂಗೇಶ್ವರ ಮಹಿಳಾ ಪದವಿ ಕಾಲೇಜು, ರಾಚೋಟೇಶ್ವರ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜು, ಬ್ಯಾಡಗಿಯ ಸರ್ಕಾರಿ ಎಸ್ ಜೆ ಜೆ ಎಮ್ ಪಿಯು ಕಾಲೇಜು, ನೂತನ ಎಜುಕೇಷನ್ ಸೊಸೈಟಿ, ಆದರ್ಶ ಕೇಂದ್ರೀಯ ಶಾಲೆ, ಹಿರೇಕೆರೂರಿನ ತರಳಬಾಳು ಶಾಲೆ, ಡಿ ಅರ್ ತಂಬಾಕದ ಬಾಯ್ಸ್‌ ಶಾಲೆ, ಕೆ ಎಚ್ ಪಾಟೀಲ್ ಪಿಯು ಕಾಲೇಜು, ಸರಕಾರಿ ಪಿಯು ಕಾಲೇಜು, ರಾಣೇಬೆನ್ನೂರಿನನ ಕೆ ಎಲ್ ಇ ರಾಜರಾಜೇಶ್ವರಿ ಪಿಯು ಕಾಲೇಜು, ರೋಟರಿ ಪಿಯು ಕಾಲೇಜು, ಬಿ ಎ ಜೆ ಎಸ್ ಎಸ್ ಪಿಯು ಕಾಲೇಜು, ದೇವಿಕಾ ಪಿಯು ಕಾಲೇಜು, ಎಚ್ ಎಸ್ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜು ಹಾಗೂ ರಟ್ಟಿಹಳ್ಳಿಯ ಎಸ್ ಕೆ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜ್‌ನಲ್ಲಿ  ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  

ಸಭೆಯಲ್ಲಿ ಹಾವೇರಿ ತಹಶೀಲ್ದಾರ ಶರಣಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್‌.ಪಾಟೀಲ, ಎಂ.ಬಿ.ಅಂಬಿಗೇರ, ಶ್ರೀಧರ, ಶ್ಯಾಮಸುಂದರ ಅಡಿಗ, ಆರ.ವಿ.ಚಿನ್ನಿಕಟ್ಟಿ, ಕೋಟಿ, ವಿವಿಧ ತಾಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.