ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಬಸವನಬಾಗೇವಾಡಿ ತಾಲೂಕಿಗೆ ಭೇಟಿ : ಪರೀಶೀಲನೆ

ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಬಸವನಬಾಗೇವಾಡಿ ತಾಲೂಕಿಗೆ ಭೇಟಿ : ಪರೀಶೀಲನೆ District Collector Dr. Anand K visits Basavanabagewadi taluk: Review


ವಿಜಯಪುರ  19:  ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಬುಧವಾರ  ಬಸವನಬಾಗೇವಾಡಿ ತಾಲೂಕಿಗೆ ಭೇಟಿ ನೀಡಿ,ವಿವಿಧ ಕಚೇರಿ ಭೇಟಿ ನೀಡಿ, ಪರೀಶೀಲನೆ ನಡೆಸಿದರು. ತಾಲೂಕಿನ ಆಡಳಿತ ಸೌಧಕ್ಕೆ ಭೇಟಿ ನೀಡಿ ತಹಶೀಲ್ದಾರ ಕಾರ್ಯಾಲಯದ ಪ್ರಗತಿ ಪರೀಶೀಲನೆ ನಡೆಸಿದ ಅವರು, ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಎಲ್ಲ ಸಿಬ್ಬಂದಿಗಳಿಗೆ ಸೂಕ್ತ  ಸೂಚನೆಗಳನ್ನು ನೀಡಿದರು. ಕಂದಾಯ ಇಲಾಖೆಯ ಭೂ ಸುರಕ್ಷಾ ಕಾರ್ಯದ ಆಧುನಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿ ಕಡತ-ವಹಿಗಳ ಸ್ಕ್ಯಾನಿಂಗ್ ಅಪಲೋಡಿಂಗ್ ಹಾಗೂ ಡಾಟಾ ಎಂಟ್ರಿ ಹಾಗೂ ಶಿರಸ್ತೇದಾರರ ಅನುಮೋದನೆ ಪ್ರಗತಿ ವಿವರ, ಡಿಜಿಟಲ್ ದಾಖಲೆಗಳ ವಿತರಣೆಯ ಕುರಿತು ಪರೀಶೀಲಿಸಿ ಸಾರ್ವಜನಿಕರಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಎಲ್ಲ ಡಾಟಾ ಎಂಟ್ರಿ ಅಪರೇಟರಗಳಿಗೆ ಪ್ರತಿದಿನ  15000-20000 ಪುಟಗಳ ಸ್ಕ್ಯಾನಿಂಗ್ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಸ್ಕ್ಯಾನಿಂಗ್ ಕಾರ್ಯವನ್ನು 31-03-2026 ರೊಳಗಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.  

ಬಸವನಬಾಗೇವಾಡಿ ಪಟ್ಟಣದಲ್ಲಿರುವ ಮೆಗಾ ಮಾರುಕಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮೆಗಾ ಮಾರುಕಟ್ಟೆಯಲ್ಲಿ ಇನ್ನೂ ಖಾಲಿ ಉಳಿದಿರುವ 54 ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯ ತ್ವರಿತವಾಗಿ ಮಾಡಲು ಹಾಗೂ ಸ್ವಚ್ಛತೆಗೆ ಆದ್ಯತೆಯನ್ನು ನೀಡಲು ಸಹ ತಿಳಿಸಿದರು. ಇಂಗಳೇಶ್ವರ ರಸ್ತೆಯ ಮಾರ್ಗವಾಗಿ ನಿರ್ಮಿಸಲಾದ ಗುಂಪು ಮನೆಗಳ ಕಾಮಗಾರಿಯನ್ನು ವೀಕ್ಷಣೆ ಮಾಡಿ ಪುರಸಭೆಯ ಅಧಿಕಾರಿಗಳಿಗೆ ಕೂಡಲೇ ಈ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ 500 ಮನೆಗಳ ಪೈಕಿ 109 ಮನೆಗಳ ಫಲಾನುಭವಿಗಳು ಈಗಾಗಲೇ ಫಲಾನುಭವಿಯ ವಂತಿಕೆಯ ಮೊತ್ತ ಭರಿಸಿರುವುದರಿಂದ ಅವರಿಗೆ  ಮನೆಗಳನ್ನು ಹಸ್ತಾಂತರಿಸಲು ಸೂಚನೆ ನೀಡಿದರು. ನಂತರ ನಂದಿ ಮಾರುಕಟ್ಟೆಗೆ ಭೇಟಿ ನೀಡಿ,ಕಾಮಗಾರಿ ಪೂರ್ಣಗೊಂಡಿರುವುದನ್ನು ಪರೀಶೀಲನೆ ಮಾಡಿ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿರುವ ಮಂಗಲ ಕಾರ್ಯಾಲಯಕ್ಕೆ ಭೇಟಿ ನೀಡಿ,

ಈ ಮಂಗಲ ಕಾರ್ಯಾಲಯದ ಕಾರ್ಯ ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಕ್ರಮ ಜರುಗಿಸಲು ತಿಳಿಸಿದರು. ನಂತರ ಗಾಂಧಿನಗರಕ್ಕೆ ಹೊಂದಿಕೊಂಡಿರುವ ಶಾದಿಮಹಲ್  ಕಾಮಗಾರಿಯನ್ನು ಪರೀಶೀಲನೆ ಮಾಡಿದ ಅವರು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಿ, ಬಸವಭವನಕ್ಕೆ ಭೇಟಿ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಲು ತಿಳಿಸಿದರು. ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಗಣಕೀಕೃತ ಮನೆಯ ಉತಾರೆಗಳನ್ನು ನೀಡಲು ಹಾಗೂ ಪುರಸಭೆಯ ತೆರಿಗೆ ವಸೂಲಿ ಹಾಗೂ ಕಸ ವಿಲೇವಾರಿ ಘಟಕದ ಸ್ವಚ್ಛತೆಗೆ ಆದ್ಯತೆ ನೀಡಲು ಹಾಗೂ ಹಸಿ ಕಸ- ಒಣ ಕಸ ಅಂತಾ ವಿಂಗಡಿಸಿ ವಿಲೆವಾರಿ ಮಾಡಲು ಪುರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. 

ನಂತರ ಮನಗೂಳಿಗೆ ಭೇಟಿ ನೀಡಿ ಮನಗೂಳಿಯ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಕೈಗೊಳ್ಳಲಾದ ಆಟದ ಮೈದಾನದ ಕಾಮಗಾರಿಯನ್ನು ಪರೀಶೀಲಿಸಿ, ಚಿಕ್ಕ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿ ಪಡಿಸುತ್ತಿರುವ ಕಾಮಗಾರಿಯನ್ನು ಕೂಡಲೇ ಮುಗಿಸಲು ಸೂಚನೆ ನೀಡಿದರು. ಹಾಗೂ ಮನಗೂಳಿಯ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಮನಗೂಳಿ ಗ್ರಾಮದಲ್ಲಿನ ಚರಂಡಿಗಳ ಸ್ವಚ್ಛತೆಗೆ ಕ್ರಮಕ್ಕಾಗಿ ನಿರ್ದೇಶನ ನೀಡಿದರು.ಹಾಗೂ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಹಾಗೂ ತೆರಿಗೆ ವಸೂಲಿ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದರು.  ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಹಶೀಲ್ದಾರರಾದ  ವೈ. ಎಸ್‌.ಸೋಮನಕಟ್ಟೆ, ನಗರಾಭಿವೃದ್ಧಿ ಕೋಶದ  ಯೋಜನಾ ನಿರ್ದೇಶಕರಾದ  ಬಿ.ಎ.ಸೌದಾಗರ,ಎಇಇ ವಿಲಾಸ ರಾಠೋಡ, ಪುರಸಭೆಯ ಕಛೇರಿ ವ್ಯವಸ್ಥಾಪಕ ಹಾಗೂ ಪ್ರಭಾರ ಮುಖ್ಯಾಧಿಕಾರಿ ಸುರೇಶ ಬಾಗೇವಾಡಿ, ಪುರಸಭೆಯ ಕಂದಾಯ ಅಧಿಕಾರಿ  ಶಬ್ಬಿರ ರೇವೂರಕರ, ಆರೋಗ್ಯ ನೀರೀಕ್ಷಕ ಮಹೇಶ ಹಿರೇಮಠ, ಕಂದಾಯ ನೀರೀಕ್ಷಕ ಸಿದ್ದು ಶಿರಶ್ಯಾಡ ಇವರು ಉಪಸ್ಥಿತರಿದ್ದರು.