ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸೂತ್ರ ಪುಸ್ತಕ ವಿತರಣೆ ಬೆಸ್ಟ ಪಿಯು ಸೈನ್ಸ ಕಾಲೇಜಿನ ಶ್ಲಾಘನೀಯ ಪ್ರಯತ್ನ

ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸೂತ್ರ ಪುಸ್ತಕ ವಿತರಣೆ ಬೆಸ್ಟ ಪಿಯು ಸೈನ್ಸ ಕಾಲೇಜಿನ ಶ್ಲಾಘನೀಯ ಪ್ರಯತ್ನ  Distribution of formula books for the academic progress of class 10 students is a commendable effor


ತಾಳಿಕೋಟಿ 05: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸೇ ಒಂದು ಸಮಾಜದ ಪ್ರಗತಿಯ ಮೂಲಸ್ತಂಭವಾಗಿದೆ. ಈ ಸತ್ಯವನ್ನು ಮನಗಂಡು, ನಮ್ಮ ಘನಮಠೇಶ್ವರ ಶಿಕ್ಷಣ ಸಂಸ್ಥೆಯ  ಬೆಸ್ಟ ಪಿಯು  ಸೈನ್ಸ  ಕಾಲೇಜಿನ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಒಂದು ವಿಶಿಷ್ಟ ಹಾಗೂ ಉಪಯುಕ್ತ ಶೈಕ್ಷಣಿಕ ಕಾರ್ಯವನ್ನು ಕೈಗೊಂಡಿದೆ. ಜಿಲ್ಲೆಯಾದ್ಯಂತ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಸೂತ್ರ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಆರಂಭಿಸಲಾಗಿದೆ.  

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳು ಅತ್ಯಂತ ಪ್ರಮುಖವಾಗಿದ್ದು, ಪರೀಕ್ಷಾ ಫಲಿತಾಂಶಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಅನೇಕ ವಿದ್ಯಾರ್ಥಿಗಳು ಸೂತ್ರಗಳನ್ನು ಸರಿಯಾಗಿ ನೆನಪಿಡಲು ಹಾಗೂ ಅವುಗಳನ್ನು ಪ್ರಶ್ನೆಗಳ ಪರಿಹಾರದಲ್ಲಿ ಅನ್ವಯಿಸಲು ಕಷ್ಟಪಡುತ್ತಾರೆ. ಈ ಸಮಸ್ಯೆಯನ್ನು ಮನಗಂಡು, ಸರಳ ಭಾಷೆಯಲ್ಲಿ, ಪಠ್ಯಕ್ರಮಕ್ಕೆ ಅನುಗುಣವಾಗಿ ಹಾಗೂ ಪರೀಕ್ಷಾಭಿಮುಖವಾಗಿ ರೂಪಿಸಲಾದ ಈ ಸೂತ್ರ ಪುಸ್ತಕಗಳನ್ನು ತಯಾರಿಸಲಾಗಿದೆ.  

ಅಧ್ಯಕ್ಷ ಎಸ್‌. ಎಮ್ ಸಜ್ಜನ ಅವರು ಮಾತನಾಡಿ ಈ ಸೂತ್ರ ಪುಸ್ತಕಗಳಲ್ಲಿ ಪ್ರತಿಯೊಂದು ಅಧ್ಯಾಯಕ್ಕೆ ಸಂಬಂಧಿಸಿದ ಮುಖ್ಯ ಸೂತ್ರಗಳು, ಸಂಕ್ಷಿಪ್ತ ಟಿಪ್ಪಣಿಗಳು ಹಾಗೂ ಅವುಗಳ ಬಳಕೆಯ ಕುರಿತು ಸ್ಪಷ್ಟ ವಿವರಣೆಗಳನ್ನು ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪುನರವಲೋಕನ (ರಿವಿಷನ್) ಮಾಡಲು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಕಾರಿಯಾಗುತ್ತದೆ ಎಂದರು.   

ಸಂಸ್ಥೆಯ ಮುಖ್ಯ ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಪಿ ಯು  ಕಾಲೇಜಿನ ಪ್ರಾಂಶುಪಾಲ ಎಮ್ ಮಾರಣ್ಣ, ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರಾಂಶುಪಾಲ ಬಸವರಾಜ ಸಜ್ಜನ  ಅವರು ಉಪಸ್ಥಿತರಿದ್ದರು.