ಚಾಲಕರ ಅಭಿವೃದ್ಧಿ ಸಂಘದವರಿಗೆ ಐಡಿ ಕಾರ್ಡ್‌ ವಿತರಣೆ

ಚಾಲಕರ ಅಭಿವೃದ್ಧಿ ಸಂಘದವರಿಗೆ ಐಡಿ ಕಾರ್ಡ್‌ ವಿತರಣೆ  Distribution of ID cards to Drivers Development Association

ಕಂಪ್ಲಿ 02: ಚಾಲಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದಾದರೆ ಚಾಲಕರ ಬದುಕು ಉತ್ತಮವಾಗಿರುತ್ತದೆ ಎಂದು ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಮತ್ತು ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸ್ಲಾಂ ಭಾಷಾ ಹೇಳಿದರು. ಪಟ್ಟಣದ ಗೂಡ್ಸ್‌ ಆಟೋ ಸ್ಟ್ಯಾಂಡ್ ಬಳಿಯಲ್ಲಿ ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ಕಂಪ್ಲಿ ತಾಲೂಕು ಘಟಕದಿಂದ ಆಯೋಜಿಸಿದ್ದ ಚಾಲಕರ ಜಾಗೃತಿ ಸಭೆ ಹಾಗೂ ಐಡಿ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಗಲು ರಾತ್ರಿ ಎನ್ನದೆ ದುಡಿದರೂ ಜೀವನ ನಿರ್ವಹಣೆ ದುಸ್ತರವಾಗಿದೆ. ದಿನದ ದುಡಿಮೆಯಿಂದ ಕುಟುಂಬ ನಿರ್ವಹಣೆ ಕಷ್ಟ. ಸರಕಾರದ ಸೌಲಭ್ಯಗಳು ಗಗನ ಕುಸುಮವಾಗಿದ್ದು, ಕೂಡಲೇ ಸರ್ಕಾರ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ನಂತರ ಕಂಪ್ಲಿ ತಾಲೂಕು ಅಧ್ಯಕ್ಷ ಬಿ.ಆನಂದಪ್ಪ ಮಾತನಾಡಿ, ಚಾಲಕರ ಬದುಕು ಇಂದಿನ ದಿನಮಾನದಲ್ಲಿ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಚಾಲಕರ ಸಂಕಷ್ಟವನ್ನು ಆಲಿಸಿ ಸೌಲಭ್ಯಗಳನ್ನು ಒದಗಿಸಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಪೋಷಕರು ಹಾಗೂ ವಾಹನ ಮಾಲೀಕರು  ಅಪ್ರಾಪ್ತರಿಗೆ ವಾಹನ ನೀಡಬಾರದು. ಚಾಲಕರಿಗೆ ನಿವೇಶನ ಸಹಿತವಾಗಿ ಮನೆ ನೀಡಬೇಕು. ಮತ್ತು ತಾಲೂಕು ಸಂಘದ ಕಛೇರಿಗಾಗಿ ನಿವೇಶನ ಗುರುತಿಸಿ ಒದಗಿಸುವ ಜೊತೆಗೆ ಕಟ್ಟಡಕ್ಕಾಗಿ ಅನುದಾನ ಕಲ್ಪಿಸಬೇಕೆಂದು ಒತ್ತಾಯಿಸಿದರು.ತದನಂತರ ಚಾಲಕರಿಗೆ ಐಡಿ ಕಾರ್ಡ್‌ ವಿತರಿಸಲಾಯಿತು. ಮತ್ತು ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ಸಂಘಟನಾ ಕಾರ್ಯದರ್ಶಿ ಅಲ್ತಾಫ್ ಹುಸೇನ್, ಹಾಗೂ ಗಂಗಾವತಿ ತಾಲೂಕು ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಗೋಪಾಲ್, ಕಾರ್ಮಿಕ ಇಲಾಖೆಯ ಕಂಪ್ಯೂಟರ್ ಆಪರೇಟರ್ ವಿಜ್ಞೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಚಾಲಕರು ಇದ್ದರು.