ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಚರ್ಚೆ

Discussion on National Education Policy-2020 at Akkamahadevi Women's University

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಚರ್ಚೆ  

ವಿಜಯಪುರ 17: ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡವೊಂದು ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಟಾನ ಕುರಿತು ವಿಸ್ತೃತ ಚರ್ಚೆ ನಡೆಸಿತು.  ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನ್ವಯ ಕೈಕೊಂಡಿರುವ ಕ್ರಮಗಳು, ಅನುಸರಿಸುತ್ತಿರುವ ಬೆಸ್ಟ್‌ ಪ್ರ್ಯಾಕ್ಟೀಸ್‌ಗಳು, ಎದುರಾದ ಸವಾಲುಗಳು ಮತ್ತು ಅವಕಾಶಗಳ ಕುರಿತು ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡ ಪಿಪಿಟಿ ಮೂಲಕ ವಿವರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು, ಮುಂಬರುವ ವರ್ಷಗಳಲ್ಲಿ ಎರಡೂ ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಟಾನದಲ್ಲಿ ಪರಸ್ಪರ ಸಹಾಯ, ಸಹಕಾರದಿಂದ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮತ್ತು ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು. ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡದಲ್ಲಿ ಪ್ರೊ.ಆರ್‌.ಎಂ.ಚನ್ನವೀರ, ಪ್ರೊ.ಜಿ.ಆರ್‌.ಅಂಗಡಿ, ಡಾ.ರವಿ.ಜೆ.ಕೆ., ಡಾ.ಎನ್‌.ಸಂದೀಪ್, ಡಾ.ಬಾಬು ಎನ್ ಮತ್ತು ಡಾ.ಪ್ರಕಾಶ್ ಬಾಳಿಕಾಯಿ ಇದ್ದರು. ಈ ತಂಡದ ಸದಸ್ಯರು ಸಭೆಯ ನಂತರ ಮಹಿಳಾ ವಿವಿಯ ಜ್ಞಾನವಾಹಿನಿ ಮೀಡಿಯಾ ಸ್ಟುಡಿಯೋಗೆ ಭೇಟಿ ನೀಡಿ ಅಲ್ಲಿಯ ಸೌಲಭ್ಯಗಳ ಬಗೆಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು. ತಂಡದ ಸದಸ್ಯರು ಸ್ಟುಡಿಯೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ  ಕಾಕಡೆ ಸ್ಟುಡಿಯೋ ಕಾರ್ಯಚಟುವಟಿಕೆಗಳ ಬಗೆಗೆ ವಿವರಿಸಿದರು. ಐಕ್ಯುಎಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್‌ಇಪಿ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ವಂದಿಸಿದರು.