ವಿಕಲಚೇತನತೆ ದೌರ್ಬಲ್ಯವಲ್ಲ: ಕಮಲಾ ಬೈಲೂರ

ವಿಕಲಚೇತನತೆ ದೌರ್ಬಲ್ಯವಲ್ಲ: ಕಮಲಾ ಬೈಲೂರ Disability is not a weakness: Kamala Bailur


ಧಾರವಾಡ 27: ವಿಕಲಚೇತನ ಎಂಬುದು ದೌರ್ಬಲ್ಯವಲ್ಲ; ಅವರಲ್ಲಿ ವಿಶೇಷ ಚೈತನ್ಯ, ಕೌಶಲ್ಯ ಇರುತ್ತದೆ ಆತ್ಮ ಸ್ಥೈರ್ಯ ದಿಂದ  ಸಾಧನೆಗೆ ಮುಂದಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ಅವರು ಹೇಳಿದರು. 

ಅವರು ಇಂದು (ನ.27) ಬೆಳಿಗ್ಗೆ ನಗರದ ಆರ್‌.ಎನ್‌. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹು-ಧಾ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ  ಆಯೋಜಿಸಿದ್ದ ವಿಕಲಚೇತನರ ಕ್ರೀಡಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ವಿಕಲಚೇತನರಿಗೆ ಅಗತ್ಯವಾದ ಸಹಾಯ, ಪ್ರೋತ್ಸಾಹ, ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಕೇವಲ ದಯೆ ಅಥವಾ ಕರುಣೆಯ ದೃಷ್ಟಿಯಿಂದ ನೋಡದೇ, ಅವರಲ್ಲಿರುವ ಕೌಶಲ್ಯ, ಪ್ರತಿಭೆ, ಹಾಗೂ ಸಾಮಥ್ರ್ಯಗಳನ್ನು ಗುರುತಿಸಿ, ವೇದಿಕೆ ಕಲ್ಪಿಸುವುದು ಮುಖ್ಯ ಎಂದು ಅವರು ಹೇಳಿದರು. 

ಅತಿಥಿಗಳಾಗಿದ್ದ ಬಸೀರ್ ಅಹಮ್ಮದ ಜಮಾದಾರ ಅವರು ಮಾತನಾಡಿ, ವಿಕಲಚೇತನರ ಸಾಮಥ್ರ್ಯಕ್ಕೆ ವೇದಿಕೆ ಕಲ್ಪಿಸುವುದು ಸಮಾಜದ ಎಲ್ಲರ ಕರ್ತವ್ಯ. ಅವರನ್ನು ಪ್ರೋತ್ಸಾಹಿಸುವ ಮನೋಭಾವ ಎಲ್ಲರಿಗೂ ಸ್ಫೂರ್ತಿದಾಯಕವಾದದ್ದು ಎಂದು ಹೇಳಿದರು. 

ಕ್ರೀಡಾಂಗಣದಲ್ಲಿನ ಸ್ಪರ್ಧೆಗಳು ಅವರಿಗೆ ಆತ್ಮವಿಶ್ವಾಸ ಹೆಚ್ಚಿಸಲು, ಪ್ರತಿಭೆ ಪ್ರದರ್ಶಿಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ನೆರವಾಗುತ್ತವೆ ಎಂದು ಅವರು ಹೇಳಿದರು. 

ವೇದಿಕೆಯಲ್ಲಿ ಮಜೇಥಿಯಾ ಪೌಂಡೇಶನ ಸಿಇಓ ಡಾ. ಸುನೀಲಕುಮಾರ ಕುಕನೂರ, ವಿಶ್ವಧರ್ಮ ಸಮೂಹ ಸಂಸ್ಥೆಯ ಕಾರ್ಯದರ್ಶಿ ಐ.ಕೆ.ಲಕ್ಕುಂಡಿ, ಪ್ರಿಯದರ್ಶಿನಿ ಶ್ರವಣ ನ್ಯೂನತೆವುಳ್ಳ ಮಕ್ಕಳ ಶಾಲೆಯ ಅಧ್ಯಕ್ಷ ಡಿ.ಡಿ.ಮೆಚ್ಚಣ್ಣವರ. ವಿಶ್ವಧರ್ಮ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧೀಕ್ಷಕ ಗುರು ಲಕ್ಕುಂಡಿ ಹಾಗೂ ಸರ್ಕಾರಿ ಅಂಧ ಮಕ್ಕಳ ಶಾಲೆಯ ಅಧೀಕ್ಷಕ ಎಮ್‌.ಆರ್‌. ಸಾಬೋಜಿ ಅವರು ಇದ್ದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿ ಸರಕಾರಿ ಅಂದ ಬಾಲಕರ ಶಾಲೆಯ ಶಿಕ್ಷಕ ಅಣ್ಣಪ್ಪ ಕೋಳಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ವಿಕಲಚೇತನ ಮಕ್ಕಳು, ಪುನರ್ವಸತಿ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.