ಹಾರ್ನ್‌ ಬಿಲ್ ಪಕ್ಷಿಗಳ ಆವಾಸ ಸ್ಥಾನ ನದಿ ದಂಡೆ ಮರ ನಾಶ : ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ

 ಹಾರ್ನ್‌ ಬಿಲ್ ಪಕ್ಷಿಗಳ ಆವಾಸ ಸ್ಥಾನ ನದಿ ದಂಡೆ ಮರ ನಾಶ : ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ Destruction of riverbank trees, habitat of hornbill birds: Demand for action against officials

ಕಾರವಾರ  03:   ದಾಂಡೇಲಿಯಲ್ಲಿ ಕಾಳಿ ತೀರದ  ಲೋಕೋಯೋಗಿ ಇಲಾಖೆ ಆವರಣದ ವೀಕ್ಷಣಾ ಗೋಪುರದ ಕೆಳಗಡೆ ನದಿ ದಂಡೆಯಲ್ಲಿ ಗಿಡಗಂಟಿ, ಮರಗಳನ್ನೆಲ್ಲ ಕಡಿದು ಹಾಕಲಾಗಿದ್ದು, ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.  ದಾಂಡೇಲಿ  ಹಾರ್ನ್‌ ಬಿಲ್ ಕಾಯ್ದಿಟ್ಟ ಪ್ರದೇಶವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಹಾರ್ನಬಿಲ್ ಹಬ್ಬ ಸಮೀಪಿಸುತ್ತಿದೆ. ಹಬ್ಬದ ನಡುವೆ ವಿಷಾದದ ಘಟನೆ ಬೆಳಕಿಗೆ ಬಂದಿದೆ.  ದಾಂಡೇಲಿಯ ಕಾಳಿ ನದಿ ದಂಡೆಗೆ   ಇರುವ ಗಿಡ, ಮರಗಳಲ್ಲಿ ಹಾರ್ನ್‌ ಬಿಲ್ ಗಳು ವಾಸವಿದ್ದು,  ಅವುಗಳಿಗೆ ಬೇಕಾದ ಆಹಾರ, ನೀರು, ಪೂರಕವಾದ ಎಲ್ಲ ವಾತಾವರಣ ಇರುವುದರಿಂದ ಅವು ಇಲ್ಲಿ ಹಾರಾಡುತ್ತಾ ಪಕ್ಷಿವೀಕ್ಷಕರಿಗೆ ಮುದ ನೀಡುತ್ತದೆ. 

ಇಲ್ಲಿಂದ ನದಿಯ ಸುಂದರ ದೃಶ್ಯದೊಂದಿಗೆ ಪ್ರವಾಸಿಗರು  ಹಾರ್ನ್‌ ಬಿಲ್ ಹಕ್ಕಿ ಮತ್ತು ಮೊಸಳೆ  ವೀಕ್ಷಣೆ ಮಾಡುತ್ತಾರೆ. ನದಿ ದಂಡೆಯ ಲೋಕೋಪಯೋಗಿ ಬಂಗಲೆ ಆವರಣದ ವೀಕ್ಷಣಾ ಗೋಪುರದ ಕೆಳಗೆ  ಇದ್ದ ಬಿಳಿ ಮತ್ತಿ, ಬಿದಿರು  ಮತ್ತು ಇನ್ನಿತರೇ ಜಾತಿಯ ಮರಗಳಲ್ಲಿ  ಹಾರ್ನ್‌ ಬಿಲ್ ಪಕ್ಷಿಗಳಿಗೆ ಆಶ್ರಯ ಪಡೆದಿದ್ದವು.  ಇಲ್ಲಿಗೆ ಬಂದ ಹಿರಿಯ ಲೋಕೋಪಯೋಗಿ ಅಧಿಕಾರಿಯೊಬ್ಬರು ,  ಸ್ಥಳೀಯ ಭೌಗೋಳಿಕ ಪರಿಸರದ ಪರಿಜ್ಞಾನವಿಲ್ಲದೇ ವೀಕ್ಷಣಾ ಗೋಪುರದ ಕೆಳಗಡೆ ನದಿ ದಂಡೆಯಲ್ಲಿದ್ದ  ಗಿಡಗಂಟಿ ಮರಗಳನ್ನೆಲ್ಲ ಕಡಿದು ಹಾಕಲು ಆದೇಶಿಸಿದ್ದಾರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಹಿಂದೆ ಮುಂದೆ ಯೋಚಿಸದ ಅಧಿಕಾರಿಗಳು ಗಿಡಗಂಟಿ, ಮರ, ಬಾಂಬುಗಳನ್ನೆಲ್ಲ ಕಡಿದು ಹಾರ್ನ್‌ ಬಿಲ್ ಪಕ್ಷಿಗಳ ಆವಾಸ ಸ್ಥಾನವನ್ನು ನಾಶಪಡಿಸಿದ್ದಾರೆ ಎಂದು ಪರಿಸರವಾದಿ ಯೊಬ್ಬರು ಆರೋಪಿಸಿದ್ದಾರೆ. ಪಿಡಬ್ಲುಡಿ ಬಂಗಲೆ ಪಕ್ಕದಲ್ಲೇ,  ಅರಣ್ಯ ವಿಶ್ರಾಂತಿ ಗೃಹವಿದ್ದು, ಅಲ್ಲಿರುವ ವಲಯ ಅರಣ್ಯಾಧಿಕಾರಿ,ಸಿಬ್ಬಂದಿಗಳು ಇದನ್ನು ಮರ ಕಡಿತ  ತಡೆಯುವ  ಪ್ರಯತ್ನ ಮಾಡಿಲ್ಲ. ನಂತರ ಪಕ್ಷಿವೀಕ್ಷಣೆಗೆ ಹೋದ ಸ್ಥಳೀಯ ನ್ಯಾಚುರಾಲಿಸ್ಟ್‌ ಒಬ್ಬರು ಇದನ್ನು ಪ್ರಶ್ನಿಸಿದಾಗ,  ಎಚ್ಚೆತ್ತ ಅರಣ್ಯಾಧಿಕಾರಿ ,  ಲೋಕೋಪಯೋಗಿ ವಿಶ್ರಾಂತಿಗ್ರಹದ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಯ ಮೇಲೆ ಎಫ್‌ಐಆರ್ ದಾಖಲಿಸದೇ, ಆ ಇಲಾಖೆಯ  ಕೆಳ ಸಿಬ್ಬಂದಿಯಾದ ಅಡಿಗೆಯವನ ಮೇಲೆ ಎಫ್ ಐಆರ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ. 

ಹಾರ್ನಬಿಲ್ ಹಬ್ಬದ ಪೂರ್ವಭಾವಿ ಸಭೆ: ಹಾರ್ನಬಿಲ್ ಪಕ್ಷಿಗಳ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದ ಅರಣ್ಯಾಧಿಕಾರಿಗಳು,  ಶುಕ್ರವಾರ ಸಭೆ ಕರೆದು ಹಾರ್ನಬಿಲ್  ಹಬ್ಬ ಕುರಿತು ಪೂರ್ವಭಾವಿ ಸಭೆ ಕರೆದ್ದರು. ಇದೇ  ಜನವರಿ 16,17ರಂದು ಹಾರ್ನಬಿಲ್ ಹಬ್ಬಕ್ಕೆ  ಸಲಹೆ ಕೇಳಿದರು .  ಹಾರ್ನಬಿಲ್ ಆಚರಿಸಲು ಪರಿಸರಾಸಕ್ತರ ಮತ್ತು ಅಧಿಕಾರಿಗಳನ್ನೊಳಗೊಂಡ ಸಭೆಯನ್ನು ಕರೆದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌಹಾಣ ಸಲಹೆ ಸೂಚನೆಗಳನ್ನು ಕೇಳಿದಾಗ, ಪರಿಸರವಾದಿ  ಮಿಲಿಂದ ಅವರು ಹಾರ್ನ್‌ ಬಿಲ್ ಗಳ ಆವಾಸ ಸ್ಥಾನ  ನದಿ ದಂಡೆಯ ಮರಗಳ ನಾಶದ ಕುರಿತಂತೆ ಪ್ರಶ್ನಿಸಿದರು . ಅಗ ಅರಣ್ಯಾಧಿಕಾರಿ  ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲೆತ್ನಿಸಿದ್ದು ಕಂಡುಬಂತು. ಹಾರ್ನ್‌ ಬಿಲ್ ಗಳ ಆವಾಸ ಸ್ಥಾನ ರಕ್ಷಣೆ ಮಾಡಲಾಗದ ಇಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ  ಮೇಲೆ ಕ್ರಮ ಜರುಗಿಸುವತ್ತ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ. ಈ ಬಗ್ಗೆ ಸಮಗ್ರ ಪರೀಶೀಲನೆಯಾಗಬೇಕು ಎಂದು ಪರಿಸರವಾದಿ ಆಗ್ರಹಿಸಿದರು