ರೈತರ ಅಗತ್ಯದ ಗೊಬ್ಬರ ಮಾತ್ರ ಪೂರೈಸಲು ಆಗ್ರಹ

ರೈತರ ಅಗತ್ಯದ ಗೊಬ್ಬರ ಮಾತ್ರ ಪೂರೈಸಲು ಆಗ್ರಹ Demand to supply only the fertilizer required by farmers

       ಸಂಬರಗಿ, 08 : ಗ್ರಾಮೀಣ ಪ್ರದೇಶದಲ್ಲಿ ರೈತರು ಒಳ್ಳೆಯ ಬೆಳೆ ಉತ್ಪಾದನೆ ಮಾಡಲು ವಿವಿಧ ಜಾತಿಯ ಗೊಬ್ಬರ ಬಳಸುತ್ತಾರೆ. ಆದರೆ ಗೊಬ್ಬರದ ದರ ಗಗನಕ್ಕೆ ಏರಿದ್ದು, ರೈತರಿಗೆ ಗೊಬ್ಬರ ಖರೀದಿಯ ಅವಧಿಯಲ್ಲಿ ಒಂದು ಗೊಬ್ಬರ ಚೀಲದ ಜೊತೆಗೆ ಬೇರೆ ಗೊಬ್ಬರವನ್ನು ಲಿಂಕ್‌ಗೊಬ್ಬರ ಅಂತಾ ಹೇಳಿ ಅಂಗಡಿ ಮಾಲಿಕರು ಕೊಡುತ್ತಿದ್ದಾರೆ. ಆದ ಕಾರಣ ರೈತರಿಗೆ ದುಬಾರಿ ಖರ್ಚು ಆಗುತ್ತಿದೆ. ರೈತರು ಬೇಡಿರುವ ಗೊಬ್ಬರವನ್ನು ಮಾತ್ರ ನೀಡಬೇಕೆಂದು ರೈತರು ಅಗ್ರಹಿಸಿದ್ದಾರೆ.  

ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ಗ್ರಾಮದಲ್ಲಿ ಕನಿಷ್ಠವಾಗಿ 5 ಗೊಬ್ಬರ ಅಂಗಡಿ ಇದ್ದು, ರೈತರು ತಮ್ಮ ಬೆಳೆಗೆ ಬೇಕಾದ ಗೊಬ್ಬರ ಖರೀದಿ ಮಾಡುವ ಸಮಯದಲ್ಲಿ ಅಂಗಡಿ ಮಾಲಿಕರು ಪ್ರತಿಯೊಂದು ಗೊಬ್ಬರಕ್ಕೆ ಲಿಂಕ್ ಗೊಬ್ಬರ ನೀಡುತ್ತಿದ್ದಾರೆ. ರೈತರಿಗೆ ಭಾರಿ ತೊಂದರೆ ಆಗಿದೆ. ಯೂರಿಯಾ ಪಡೆದುಕೊಳ್ಳಬೇಕಾದರೆ ಅದರ ಜೊತೆಗೆ ಬೆಳೆಗೆ ಹೊಡೆಯುವ ದ್ರವರೂಪದ ಓಷಧಿಯನ್ನು ಅವಶ್ಯಕತೆ ಇಲ್ಲದಿದ್ದರೂ ಸಹ ಕಡ್ಡಾಯ ಮಾಡಿ ರೈತರಿಗೆ ಯೂರಿಯಾ ನೀಡುತ್ತಿದ್ದಾರೆ. ಲಿಂಕ್ ಗೊಬ್ಬರ ಪಡೆದರೆ ಯೂರಿಯಾ ಕೊಡುತ್ತಾರೆ. ಯಾವುದೇ ಪ್ರಕಾರದ ರಶೀದಿಯನ್ನು ನೀಡುತ್ತಿಲ್ಲ. ರಶೀದಿ ಕೇಳಿದರೆ ಬಿಳಿ ಹಾಳೆಯ ಮೇಲೆ ಲೆಕ್ಕ ಬರೆದು ರೈತರಿಗೆ ನೀಡುತ್ತಿದ್ದಾರೆ. ಆದ ಕಾರಣ ರೈತರಿಗೆ ಭಾರಿ ತೊಂದರೆ ಆಗಿದೆ.  

        ಗಡಿ ಭಾಗದ ಎಲ್ಲಾ ಗ್ರಾಮಗಳಲ್ಲಿ ಇರುವ ಗೊಬ್ಬರ ಅಂಗಡಿಗಳಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಸರಕಾರದ ನಿಯಮದ ಪ್ರಕಾರ ಕೇಳಿದರೆ ನಮ್ಮಲ್ಲಿ ಗೊಬ್ಬರ ಇಲ್ಲ ಎಂದು ಅಂಗಡಿ ಮಾಲಿಕರು ಸ್ಪಷ್ಟವಾಗಿ ಹೇಳುತ್ತಾರೆ. ವಿಶೇಷವಾಗಿ ಅನಂತಪೂರ, ಸಂಬರಗಿ, ಮದಭಾವಿ, ಖಿಳೆಗಾವಿ, ಮಲಾಬಾದ ಇನ್ನೀತರ ಗ್ರಾಮಗಳಲ್ಲಿ ಈ ಸಮಸ್ಯೆ ಎದ್ದು ಕಾಣುತ್ತಿದೆ. ರೈತರಿಗೆ ಗುಣಮಟ್ಟದ ಬೆಳೆ ಬೆಳೆಸಬೇಕಾದರೆ, ಸಾಲ ಪಡೆದು ಗೊಬ್ಬರ ಖರೀದಿಸುತ್ತಿದ್ದಾರೆ.

           ಆದರೆ ಲಿಂಕ್ ಗೊಬ್ಬರ ರೈತರಿಗೆ ತಲೆನೋವಾಗಿದೆ. ಅಂಗಡಿ ಮಾಲಿಕರಿಗೆ ಪ್ರಶ್ನೆ ಮಾಡಿದಾಗ ನಮ್ಮಲ್ಲಿ ಗೊಬ್ಬರ ಇಲ್ಲ, ಖಾಲಿಯಾಗಿದೆ ಎಂದು ಅಸಭ್ಯ ವರ್ತನೆ ಮಾಡುತ್ತಾರೆ. ರೈತರು ಕೆಲವೊಂದು ಗೊಬ್ಬರ ಅಂಗಡಿಯಲ್ಲಿ ರೈತರು ಹಣದ ಸಮಸ್ಯೆಯಿಂದ ವರ್ಷವಿಡಿ ಉದ್ರಿ ಗೊಬ್ಬರ ಖರೀದಿಸಿ ಕಬ್ಬಿನ ಕಟಾವು ಮಾಡಿಸಿ ಬಿಲ್ ಬಂದ ನಂತರ ಗೊಬ್ಬರದ ಉದ್ರಿ ಹಣವನ್ನು ಪಾವತಿಸುವ ಸ್ಥಿತಿ ರೈತರದ್ದಾಗಿದೆ. ಅಧಿಕಾರಿಗಳು ಗಮನ ಹರಿಸಿ ಗೊಬ್ಬರಕ್ಕೆ ಲಿಂಕ್‌ಗೊಬ್ಬರ ಸ್ಥಗಿತಗೊಳಿಸಬೇಕೆಂದು ರೈತರು ಅಗ್ರಹಿಸಿದ್ದಾರೆ.  

           ಈ ಕುರಿತು ರೈತ ಹೋರಾಟಗಾರ ಮಹಾದೇವ ಮಡಿವಾಳ ಇವರನ್ನು ಸಂಪರ್ಕಿಸಿದಾಗ ಯಾವ ಗೊಬ್ಬರದ ಅಂಗಡಿ ಮಾಲಿಕರು ರೈತರಿಗೆ ಲಿಂಕ್‌ಗೊಬ್ಬರ ನೀಡಬಾರದು ಏನೇ ಕೊಟ್ಟರೂ ಅದಕ್ಕೆ ಅಧಿಕೃತ ಪಾವತಿ ನೀಡಬೇಕು. ಹಾಗೇನಾದರೂ ಕಂಡು ಬಂದಲ್ಲಿ ಅವರ ವಿರುದ್ಧ ಹೋರಾಟ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರಾದ ನಿಂಗಣ್ಣ ಬಿರಾದಾರ ಇವರನ್ನು ಸಂಪರ್ಕಿಸಿದಾಗ, ನನ್ನ ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ಬಂದ ನಂತರ ಯಾವುದೇ ಗೊಬ್ಬರ ಅಂಗಡಿ ಇದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.