ಸಚಿವ ಸಂಪುಟದ ಖಾಲಿ ಸ್ಥಾನಕ್ಕೆ ಬ್ರಾಹ್ಮಣರಿಗೆ ಆದ್ಯತೆ ನೀಡಲು ಆಗ್ರಹ

ಸಚಿವ ಸಂಪುಟದ ಖಾಲಿ ಸ್ಥಾನಕ್ಕೆ ಬ್ರಾಹ್ಮಣರಿಗೆ ಆದ್ಯತೆ ನೀಡಲು ಆಗ್ರಹ  Demand to prioritize Brahmins for the vacant Cabinet post

ಅಥಣಿ 04 : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಅವಕಾಶ ನೀಡದಿರುವುದನ್ನು ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಅಧ್ಯಕ್ಷ ಹಿರಿಯ ನ್ಯಾಯವಾದಿ ಎನ್‌.ಕೆ. ಪಾಟೀಲ ಖಂಡಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬ್ರಾಹ್ಮಣ ಸಮುದಾಯದ ಪ್ರತಿನಿಧಿತ್ವವಿಲ್ಲದೆ ಸಚಿವ ಸಂಪುಟ ರಚನೆಯಾಗಿದೆ ಎಂದು ಹೇಳಿದ್ದಾರೆ. ಖಾಲಿ ಇರುವ ಒಂದು ಸಚಿವ ಸ್ಥಾನವನ್ನು ಬ್ರಾಹ್ಮಣ ಸಮಾಜದ ಶಾಸಕರಿಗೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ.  ಬ್ರಾಹ್ಮಣ ಸಮುದಾಯವು ರಾಜ್ಯದ ರಾಜಕೀಯ, ಧಾರ್ಮಿಕ, ಆಡಳಿತಾತ್ಮಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ತಂತ್ರಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಇಂತಹ ಸಮುದಾಯವನ್ನು ಸಚಿವ ಸಂಪುಟದಲ್ಲಿ ಕಡೆಗಣಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.  ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಆದಿತ್ಯ ಮಾಶಾಳ ಹಾಗೂ ಉಪಾಧ್ಯಕ್ಷ ಸುಧೀಂದ್ರ ಬಾದರಾಯಣಿ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಬ್ರಾಹ್ಮಣ ಸಮಾಜವನ್ನು ಕಡೆಗಣಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.