ಹೊಸಪೇಟೆ: ಜನನ-ಮರಣ ತಿದ್ದುಪಡಿ ಕಾಯ್ದೆ ಹಾಗೂ ವಿಕಸಿತ ಭಾರತ ಶಿಕ್ಷಣ ಕಾಯ್ದೆ ವಿರೋಧಿಸಿ ಸಿಪಿಎಂ ಪ್ರತಿಭಟನೆ

ಹೊಸಪೇಟೆ: ಜನನ-ಮರಣ ತಿದ್ದುಪಡಿ ಕಾಯ್ದೆ ಹಾಗೂ ವಿಕಸಿತ ಭಾರತ ಶಿಕ್ಷಣ ಕಾಯ್ದೆ ವಿರೋಧಿಸಿ ಸಿಪಿಎಂ ಪ್ರತಿಭಟನೆ  Hosapete: CPM protests against the Birth and Death Amendment Act and the Viksit Bharat Education Act

ಹೊಸಪೇಟೆ, 04: ಸಂಸತ್ನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ ಜನನ ಮತ್ತು ಮರಣ ಕಾಯ್ದೆ ತಿದ್ದುಪಡಿ-2026 ಹಾಗೂ ವಿಕಸಿತ ಭಾರತ ಶಿಕ್ಷಣ ಅಧಿನಿಯಮ-2026 ಅನ್ನು ಸಿಪಿಎಂ ವಿರೋಧಿಸಿದೆ. ಅಲ್ಲದೇ, ವಂದೇ ಮಾತರಂ ಗೀತೆಯನ್ನು ಕಾನೂನು ಬದ್ಧಗೊಳಿಸಿರುವ ಕ್ರಮವನ್ನು ಖಂಡಿಸಿರುವುದಾಗಿ ಪಕ್ಷದ ಜಿಲ್ಲಾ ಮುಖಂಡ ಎ. ಕರುಣಾನಿಧಿ ತಿಳಿಸಿದ್ದಾರೆ.  ಜನನ ಮತ್ತು ಮರಣ ತಿದ್ದುಪಡಿ ಕಾಯ್ದೆಯಲ್ಲಿ ಪ್ರಮಾಣಪತ್ರಗಳನ್ನು ಮತದಾರರ ಪಟ್ಟಿ, ಪಾಸ್ಪೋರ್ಟ್‌ ಹಾಗೂ ಸರ್ಕಾರಿ ಸೌಲಭ್ಯಗಳಿಗೆ ಕಡ್ಡಾಯಗೊಳಿಸಿರುವುದು ಜನರ ಸಾಂವಿಧಾನಿಕ ಹಕ್ಕುಗಳ ನಿರಾಕರಣೆಯಾಗಿದೆ ಎಂದು ಅವರು ಆರೋಪಿಸಿದರು.  

ವಿಕಸಿತ ಭಾರತ ಶಿಕ್ಷಣ ಅಧಿನಿಯಮದ ಮೂಲಕ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇದರ ಪರಿಣಾಮವಾಗಿ ಯುಜಿಸಿ ಹಾಗೂ ಎನ್ಸಿಇಆರ್ಟಿ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗಲಿದೆ. ಉನ್ನತ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಹಾಗೂ ಕೋಮುವಾದೀಕರಣ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಅವರು ದೂರಿದರು.  

ವಂದೇ ಮಾತರಂ ಗೀತೆಯನ್ನು ಕಾನೂನುಬದ್ಧಗೊಳಿಸುವುದು ಸರಿಯಲ್ಲ. ದೇಶಪ್ರೇಮವನ್ನು ಕಾನೂನಿನ ಮೂಲಕ ಹೇರಲು ಸಾಧ್ಯವಿಲ್ಲ ಎಂದು ಎ. ಕರುಣಾನಿಧಿ ಹೇಳಿದರು.  ಇದೇ ವೇಳೆ ಪಕ್ಷದ ಮುಖಂಡ ವಿ. ಸ್ವಾಮಿ ಮಾತನಾಡಿ, ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಪೊಲೀಸ್ ಲಾಕಪ್ ಡೆತ್ ಪ್ರಕರಣವನ್ನು ಖಂಡಿಸಿದರು. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಹಾಗೂ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.  ಈ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ರಮೇಶ್, ಉಮಾಮಹೇಶ್ವರ ಸೇರಿದಂತೆ ಹಲವರು ಭಾಗವಹಿಸಿದ್ದರು.