ಯೂರಿಯಾ ಗೊಬ್ಬರ ಸರಬರಾಜು ಮಾಡಲು ಒತ್ತಾಯ

ಯೂರಿಯಾ ಗೊಬ್ಬರ ಸರಬರಾಜು ಮಾಡಲು ಒತ್ತಾಯ Demand for supply of urea fertilizer


ಯೂರಿಯಾ ಗೊಬ್ಬರ ಸರಬರಾಜು ಮಾಡಲು ಒತ್ತಾಯ 

ಧಾರವಾಡ  04: ರಾಜ್ಯದ ರೈತರಿಗೆ ಕೈಗೆಟಕುವ ದರದಲ್ಲಿ  ಈ ಕೂಡಲೇ ಅಗತ್ಯವಿರುವಷ್ಟು ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡಲು ಒತ್ತಾಯಿಸಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿದರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮತ್ತು ಅವರ  ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಪ್ರದಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

       ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ  ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ  ಈ ವರ್ಷದ ಮುಂಗಾರು ಮಳೆ ಬೇಗ ಪ್ರಾರಂಭವಾಗಿ ರೈತರು ಭೂಮಿಯ ಹದ ನೋಡಿಕೊಂಡು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ರೈತರ ಬೆಳೆ ಅತಿವೃಷ್ಟಿ,ಅನಾವೃಷ್ಟಿಯನ್ನು ದಾಟಿ ಕೈಗೆ ಬರಬೇಕೆಂದರೆ ಸಾಹಸವೇ ಸರಿ. ಅದರಲ್ಲೂ ಇಂದಿನ ಪ್ರಸಕ್ತ ವಾತಾವರಣದ ಏರುಪೇರು ರೈತರ ಜೀವನವನ್ನೇ ಬರಡಾಗಿಸಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೇಗೋ ಸಾಲ ಸೋಲ ಮಾಡಿ ಈ ಬಾರಿಯೂ ರಾಜ್ಯದಾದ್ಯಂತ ಕೃಷಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಸರಿಯಾದ ಸಮಯಕ್ಕೆ ಅಗತ್ಯವಿದ್ದಷ್ಟು ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ದುರಂತವೆಂದರೆ ಹೊಲದಲ್ಲಿ ಬೆಳೆಯುತ್ತಿರುವ ಬೆಳೆಗೆ ಯೂರಿಯಾ ಗೊಬ್ಬರ ಸಿಗದೇ ಬೆಳೆ ಕುಂಠಿತವಾಗುತ್ತಿದೆ. ರೈತರ ಬಗ್ಗೆ ಸರ್ಕಾರ ಪ್ರತಿ ವರ್ಷವೂ ಇದೇ ರೀತಿಯ ತಾತ್ಸಾರ ತೋರುತ್ತಿದೆ. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಬೀಜ ಗೊಬ್ಬರಕ್ಕೆ ಸಾಲುಸರತಿ ನಿಲ್ಲಲೇ ಬೇಕು.ಈ ಬಾರಿಯಂತೂ ಚಳಿ, ಮಳೆಯಲ್ಲಿ ಹಗಲು ರಾತ್ರಿ ಒಂದು ಮಾಡಿ ರೈತರು ಗೊಬ್ಬರಕ್ಕಾಗಿ ನಿಂತಿರುವುದು ಅತ್ಯಂತ ನೋವಿನ ವಿಷಯ. ಸಾಮಾಜಿಕ ಉತ್ಪಾದನೆಗಾಗಿ ದುಡಿದು ಎಲ್ಲರಿಗೂ ಉಣ ಬಡಿಸುವ ರೈತನ ಪರಿಸ್ಥಿತಿ ಸರ್ಕಾರದ ಬೀಜವಾಬ್ದಾರಿಯಿಂದ ನರಕ ಸದೃಶವಾಗುತ್ತಿದೆ. ಈ ಸಮಸ್ಯೆ ಏಕಾಏಕಿ ಬಂದಿರುವುದಲ್ಲ, ಆಕಸ್ಮಿಕವಲ್ಲ ಹೀಗಿದ್ದರೂ ಕೇಂದ್ರ  

ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಕೂಡ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುತ್ತಾ ತಂದೆ ತಾಯಿಗಳ ಜಗಳದಲ್ಲಿ ಕೂಸು ಬಡವಾದಂತೆ ರೈತನ ಬದುಕು ಬಡವಾಗುತ್ತಿದೆ. ಇನ್ನೂ 2008ರಲ್ಲಿ ಹಾವೇರಿ ಜಿಲ್ಲೆಯ ಇಬ್ಬರು ರೈತರು ಯೂರಿಯ ಗೊಬ್ಬರವನ್ನು ಕೇಳಲು ಹೋದಾಗ ಅಂದಿನ ಬಿಜೆಪಿ ಸರ್ಕಾರ ಗೊಂಡೆಟನ್ನು ನೀಡಿ ಉತ್ತರಿಸಿತು. ಈಗ ಅವರೇ ರೈತರ ಪರವಾಗಿ ಹೋರಾಟ ಮಾಡುತ್ತಿರುವುದು ನ್ಯಾಯವನ್ನೇ ಅಣಕಿಸಿದಂತಿದೆ ಎಂದರು. 

     ಜಿಲ್ಲಾ ಕಾರ್ಯದರ್ಶಿ ಶರಣು ಗೋನವರ ಮಾತನಾಡಿ ವರ್ಷಕ್ಕೆ ಎಷ್ಟು ಗೊಬ್ಬರ ಬೇಕು ಯಾವ ಸಮಯದಲ್ಲಿ ಬೇಕು ಎಂಬ ಕನಿಷ್ಠ ತಿಳುವಳಿಕೆ ಇಲ್ಲದೆ ಹೋದರೆ ಕೃಷಿ ಇಲಾಖೆ ಇದ್ದರೂ ಏನು ಪ್ರಯೋಜನ.   ಕೊಪ್ಪಳ ಜಿಲ್ಲೆಯ ರೈತನೋರ್ವ ಗೊಬ್ಬರಕ್ಕೆ ಕಾದು ಕಾದು ಸಿಗದಿದ್ದಾಗ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದು ಸಮಸ್ಯೆಯ ಆಳವನ್ನು ತೋರಿಸುತ್ತದೆ. ಎಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ ಅಲ್ಲಿ ತೇಪೆ ಹಚ್ಚುವ ಕೆಲಸ ಮಾಡುವಂತೆ ಸರ್ಕಾರ ಎರಡು ಮೂರು ಚೀಲ ಗೊಬ್ಬರ ನೀಡುತ್ತಿರುವುದು ಸರ್ಕಾರದ ಅಸ್ತವ್ಯಸ್ತವನ್ನು ತೋರಿಸುತ್ತದೆ.ಇನ್ನು ಕೆಲವಡೆ ಅತಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಯೂರಿಯ ಗೊಬ್ಬರ ಸಿಗುತ್ತಿರುವುದು ಕೃತಕ ಅಭಾವ ಸೃಷ್ಟಿಯ ಪರಿಣಾಮ. ಇದನ್ನು ಸರ್ಕಾರ ತಡೆಗಟ್ಟಿ ಕೂಡಲೇ ಗೊಬ್ಬರ ಸರಬರಾಜು ಮಾಡಬೇಕು ಇಲ್ಲದೆ ಹೋದರೆ ತೀವ್ರತರವಾದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು