ಬಸಾಪುರ ಕೆರೆಗೆ ನೀರು ಬಿಡುಗಡೆ ಆಗ್ರಹ: 242ನೇ ದಿನದ ಧರಣಿ

ಬಸಾಪುರ ಕೆರೆಗೆ ನೀರು ಬಿಡುಗಡೆ ಆಗ್ರಹ: 242ನೇ ದಿನದ ಧರಣಿ   Demand for release of water to Basapura Lake: 242nd day of sit-in

ಕೊಪ್ಪಳ 29 : ಈ ವರ್ಷ ಬರದ ಛಾಯೆ ಆವರಿಸಿ ರೈತರ ಕೃಷಿ ಬದುಕು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ, ಬಸಾಪುರ ಕೆರೆಗೆ ನೀರು ಬಿಡುಗಡೆ ಮಾಡಬೇಕೆಂಬ ಆಗ್ರಹ ತೀವ್ರಗೊಂಡಿದೆ.  ನಗರಸಭೆ ಆವರಣದಲ್ಲಿನ “ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ” ಹೋರಾಟವು 242ನೇ ದಿನವನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಧರಣಿ ನಡೆಯಿತು. ಧರಣಿ ಹೋರಾಟದ ರೈತರನ್ನು ಉದ್ದೇಶಿಸಿ ಭಾಗ್ಯನಗರದ ಮಹಿಳಾ ಹಿತಚಿಂತಕಿ ಸರೋಜಾ ಬಾಕಳೆ ಮಾತನಾಡಿದರು.  

ಹೈಕೋರ್ಟ್‌ ಆದೇಶವಿದ್ದರೂ ಹಾಗೂ ಬರಗಾಲದ ಪರಿಸ್ಥಿತಿ ತೀವ್ರವಾಗಿದ್ದರೂ ಬಸಾಪುರ ಕೆರೆಯನ್ನು ಜಾನುವಾರುಗಳಿಗೆ ನೀರು ಕುಡಿಯಲು ತೆರೆಯದಿರುವುದು ಖಂಡನೀಯ ಎಂದು ಅವರು ಹೇಳಿದರು. ಬರಗಾಲದ ಸಂದರ್ಭದಲ್ಲಿ ಜನರು ಎಲ್ಲಿಂದಲಾದರೂ ನೀರು, ಆಹಾರ ತರಿಸಿಕೊಳ್ಳಬಹುದು. ಆದರೆ ಹಸು, ಎಮ್ಮೆ, ಎತ್ತು, ಕುರಿ, ಮೇಕೆ ಸೇರಿದಂತೆ ಸಾವಿರಾರು ಜಾನುವಾರುಗಳಿಗೆ ನೀರು ಹಾಗೂ ಮೇವು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಒತ್ತಾಯಿಸಿದರು.  

ತುಂಗಭದ್ರಾ ನದಿಯ ಮಾಲಿನ್ಯಗೊಂಡ ನೀರು ಹಾಗೂ ಪರಿಸರ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರುವುದನ್ನು ಗಮನಿಸಬೇಕಾಗಿದೆ ಎಂದರು.  

ಅಗತ್ಯವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ಕೆರೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಅವರು ಕರೆ ನೀಡಿದರು. ಜುಲೈ 7ರಂದು ನಡೆಯಲಿರುವ 250ನೇ ದಿನದ “ಕೊಪ್ಪಳ ಸಪ್ಪಳ” ಆಂದೋಲನವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.  

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಶಂಭುಲಿಂಗಪ್ಪ ಹರಗೇರಿ, ಡಿ.ಎಂ. ಬಡಿಗೇರ, ಕಾವ್ಯಾ ಗಡಾದ, ಮಹಾಂತೇಶ ಕೊತಬಾಳ, ಮಲ್ಲಿಕಾರ್ಜುನ ಬಿ. ಗೋನಾಳ, ಶಿವಪ್ಪ ಜಲ್ಲಿ ಸೇರಿದಂತೆ ಹಲವರು ಭಾಗವಹಿಸಿದ್ದರು.