ಕಾನೂನು ಬಾಹಿರ ಕೆಲಸಗಳಿಗೆ ಸುದ್ದಿಯಾದ ದಾಂಡೇಲಿ ನಗರಸಭೆ

  ಕಾನೂನು ಬಾಹಿರ ಕೆಲಸಗಳಿಗೆ ಸುದ್ದಿಯಾದ ದಾಂಡೇಲಿ ನಗರಸಭೆ Dandeli Municipal Council in news for illegal activities

ದಾಂಡೇಲಿ 07: ದಾಂಡೇಲಿ ನಗರಸಭೆಯಲ್ಲಿ ಅಭಿವೃದ್ದಿ ಕೆಲಸಗಳಿಗಿಂತ ಪ್ರತಿಯೊಂದು ಹಂತದಲ್ಲಿಯೂ ಭ್ರಷ್ಟಾಚಾರದ ಹಗರಣ, ಸ್ವ ಹಿತಾಸಕ್ತರ ರಕ್ಷಣೆ, ಲೋಕಾಯುಕ್ತ ತನಿಖೆಯ ಬಿಸಿ, ಸಿಬ್ಬಂದಿಗಳ ಕಾನೂನು ಬಾಹಿರ ಕೆಲಸಗಳೇ ಸುದ್ದಿಯಾಗಿದೆ.  

ನಗರಸಭೆಯ ಆಡಳಿತ ಸ್ಥಳೀಯ ಜನರಿಗೆ ಬೇಸರವನ್ನುಂಟು ಮಾಡಿದ್ದು ನಗರಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸ್ಥಳೀಯ ಶಾಸಕ ಆರ್‌.ವಿ. ದೇಶಪಾಂಡೆ ನಗರಸಭೆಗೆ ಅನೇಕ ರೀತಿಯ ಅಭಿವೃದ್ದಿ ಕೆಲಸಗಳಿಗಾಗಿ ವಿವಿಧ ಯೋಜನೆಯಡಿ, ಮುಖ್ಯ ಮಂತ್ರಿಗಳನ್ನು ಕಾಡಿ ಬೇಡಿ  ಅನುದಾನ ತಂದರೂ ಅವುಗಳ ಪ್ರಾಮಾಣಿಕ ಅನುಷ್ಟಾನದ ಕೊರತೆ ಎದ್ದು ಕಾಣುತ್ತದೆ. ನಗರಸಭೆಯ ಸೈಟ್ ಚೋರಿ ಹಗರಣ ಬರುವ ದಿನಗಳಲ್ಲಿ ಮತ್ತಷ್ಟು ಸದ್ದಾಗಲಿದೆ.  

ರಾಜಕೀಯ ಪಕ್ಷಗಳ ನಿಷ್ಕ್ರೀಯತೆ : ದಾಂಡೇಲಿ ನಗರಸಭೆಗೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಗರಿಗೆದರುತ್ತಿದೆ. ಎಲ್ಲರ ಕಣ್ಣು ಚುನಾವಣೆಯತ್ತ ನೆಟ್ಟಿದೆ. ನಗರಸಭೆ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳಿಗೆ ಯಾವುದೇ ನಿರ್ಧೀಷ್ಟವಾದ ಅಜೆಂಡಾ ಇಲ್ಲ. ಶಾಸಕರು ಸರ್ಕಾರದಿಂದ ತಂದ ಅನುದಾನ , ಅಭಿವೃದ್ದಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಶಾಸಕರ ಹೆಸರು ಹೇಳಿ ಮತ ಕೇಳುವ ದಯನೀಯ ಪರಿಸ್ಥಿತಿಯಿದೆ. ನಗರಸಭೆಯಲ್ಲಿ ವಿರೋಧ ಪಕ್ಷವಾಗಿ ಸಮರ್ಥ ಕಾರ್ಯನಿರ್ವಹಿಸುವಲ್ಲಿ ಒಂದೆರಡು ಭಾ.ಜ.ಪ ನಗರಸಭಾ ಸದಸ್ಯರ ಧ್ವನಿ ಮೊಳಗಿಸಿದ್ದು ಬಿಟ್ಟರೆ, ಉಳಿದ ಬಿ.ಜೆ.ಪಿ ನಗರಸಭಾ ಸದಸ್ಯರು ಮಿಲಾಪಿ ಕುಸ್ತಿಯಲ್ಲೇ ನಿರತರಾದದ್ದು ಸಾಧನೆ. ವಿರೋಧ ಪಕ್ಷದ ಕೆಲಸ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.  

ಇನ್ನೂ ಜೆ.ಡಿ.ಎಸ್‌. ಸ್ಥಳೀಯವಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಜೆ,ಡಿ.ಎಸ್ ಪಕ್ಷದ ಹೆಸರನ್ನು ಎತ್ತದೆ. ಕಾರ್ಯಕರ್ತರಿಗೆ ಬಲ ತುಂಬದೆ ತಮ್ಮದೇ ಆದ ಸಂಘಟನೆಯೊಂದರಿಂದ ದಾಂಡೇಲಿ ಅಭಿವೃದ್ದಿಗೆ ಸಮಗ್ರ ಹೋರಾಟ ನಡೆಸಿ ಸುದ್ದಿಯಲ್ಲಿದ್ದಾರೆ. ಆದರೆ ಪಕ್ಷ ಸಂಘಟನೆ ಮಾತ್ರ  ಶೂನ್ಯವಾಗಿದೆ. ರಾಜಕೀಯ ಪಕ್ಷಗಳ ಪರಿಸ್ಥಿತಿ ಹೀಗಾದರೆ, ನಗರದ ಆಡಳಿತ ವ್ಯವಸ್ಥೆ, ಸಿಬ್ಬಂದಿಗಳ ಅಶಿಸ್ತು , ಪ್ರತಿಯೊಂದು ಕೆಲಸಕ್ಕೂ ತಿಂಗಳುಗಟ್ಟಳೆ ಪರದಾಡುವಂತಹ ಜನರ ಗೋಳಿಗೆ ನಗರಸಭೆಯ ಆಡಳಿತಾಧಿಕಾರಿಗಳ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೌರಾಯುಕ್ತರು ಸೇರ ಉತ್ತಮ ಆಡಳಿತ, ಹೊಸ ಆಯಾಮ ನೀಡುವ ನೀರೀಕ್ಷೆಯಲ್ಲಿ ಜನರಿದ್ದಾರೆ.