ದಲಿತರ ಅಭಿವೃದ್ದಿ ಬಜೆಟ್ ಬೇಕೆಂದು ವಿವಿಧ ಬೇಡಿಕೆಗಳಿಗಾಗಿ ರಾಜ್ಯಾದ್ಯಂತ ದಲಿತರ ಪ್ರತಿಭಟನಾ ಧರಣಿ ಸತ್ಯಾಗ್ರಹ

ದಲಿತರ ಅಭಿವೃದ್ದಿ ಬಜೆಟ್ ಬೇಕೆಂದು ವಿವಿಧ ಬೇಡಿಕೆಗಳಿಗಾಗಿ ರಾಜ್ಯಾದ್ಯಂತ ದಲಿತರ ಪ್ರತಿಭಟನಾ ಧರಣಿ ಸತ್ಯಾಗ್ರಹ Dalits protest and sit-in across the state for various demands, demanding a Dalit development budge


  ಹೊಸಪೇಟೆ 05: ರಾಜ್ಯದ 2026ರ ಬಜೆಟ್ ನಾಳೆ 06.03.2026 ರಂದು ತಾವು ಎಂದಿನಂತೆ ಮಂಡಿಸುವುದಾಗಿ ಹೇಳಿದ್ದೀರಿ. ಈ ಬಜೆಟ್ ದಲಿತರ, ಬಡವರ ಮನೆಗಳಿಗೆ ತಲುಪುವಂತಾಗಬೇಕು ಎಂದು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.  ರಾಜ್ಯದ ದಲಿತರ ಒಟ್ಟು ಜನಸಂಖ್ಯೆ ಶೇಕಡ 24.17ಅ ಅಂದರೆ ರಾಜ್ಯದ ಕಾಲುಭಾಗ ದಲಿತರಿದ್ದಾರೆ. ಪ್ರತಿ ವರ್ಷದ ದಲಿತ ಜನಸಂಖ್ಯೆಗೆ ಅನುಗುಣವಾಗಿ 37-ಇಲಾಖೆಗಳಿಗೆ ಎಸ್‌.ಸಿ., ಎಸ್‌.ಟಿ. ಉಪಯೋಜನೆ ಹಣವನ್ನು ಸರ್ಕಾರ ಹಂಚಿಕೆ ಮಾಡುತ್ತದೆ. 13-ವರ್ಷಗಳಿಂದ 3ಲಕ್ಷ 46ಸಾವಿರ ಕೊಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ. ಆದರೆ ಈ ಹಣ ನಿಜವಾಗಿ ದಲಿತರ ಕುಟುಂಬಗಳ ಅಭಿವೃದ್ದಿಗೆ ತಲುಪಿಲ್ಲ ಎಂಬುದು ವಾಸ್ತವ ಸತ್ಯ. ಇದಕ್ಕಾಗಿ ರಾಜ್ಯ ವಿಧಾನಸಭೆಯ ಉಭಯ ಸದನಗಳಲ್ಲಿ ಇದರ ಸಾದಕ-ಬಾದಕಗಳ ಕುರಿತು ಚರ್ಚೆಯಾಗಬೇಕು ಎಂದು ಒತ್ತಾಯಿಸುತ್ತೇವೆ.  

  ಎಸ್‌.ಸಿ., ಎಸ್‌.ಟಿ. ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ಕಳೆದ 30-ವರ್ಷಗಳಿಂದ ಈ ಸಮುದಾಯಗಳು ಹೋರಾಟ ನಡೆಸಿದ ಫಲವಾಗಿ ಎಸ್‌.ಸಿ. ಮೀಸಲಾತಿಯನ್ನು ಶೇಖಡ 15 ರಿಂದ 17ಕ್ಕೆ ಮತ್ತು ಎಸ್‌.ಟಿ. ಮೀಸಲಾತಿಯನ್ನು ಶೇಖಡ 3 ರಿಂದ 7ಕ್ಕೆ ಹೆಚ್ಚಿಸಿ ರಾಜ್ಯಸರ್ಕಾರಕ್ಕೆ ಹೊರಡಿಸಿತ್ತು ಹಾಗೆಯೇ ಈ ಮೀಸಲಾತಿ ಕಾನೂನು ಮೂಲಕ ರಕ್ಷಣೆ ನೀಡಲು 2023ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂವಿದಾನದ 9ನೇ ಷೆಡ್ಯೂಲ್‌ನಲ್ಲಿ ಸೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಳವನ್ನು 9ನೇ ಷೆಡ್ಯೂಲ್‌ನಲ್ಲಿ ಸೇರಿಸದೇ ವಿಳಂಬ ಮಾಡಿದ ಕಾರಣಕ್ಕಾಗಿ ರಾಜ್ಯದ ಹೈಕೋರ್ಟ್‌ ಮೀಸಲಾತಿ ಹೆಚ್ಚಳವನ್ನು ತಡೆಹಿಡಿದಿದೆ. ಇದರಿಂದಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕಳೆದ 30 ವರ್ಷಗಳಿಂದ ಆಗುತ್ತಿರುವ ಅನ್ಯಾಯ ಮತ್ತೆ ಮುಂದುವರೆದಿದೆ. ದಲಿತರಿಗೆ ಆದ ಈ ವಂಚನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಬಗ್ಗೆ ವಿಧಾನಸಭೆಯ ಉಭಯ ಸದನಗಳಲ್ಲಿ ಸುಧೀರ್ಘ ಚರ್ಚೆ ನಡೆಸಬೇಕು ಎಂದು ನಮ್ಮ ಸಂಘಟನೆ ಆಗ್ರಹಿಸುತ್ತದೆ.  ಒಟ್ಟಾರೆಯಾಗಿ ತಮ್ಮ ನಾಳಿನ 2026ರ ಬಜೆಟ್‌ನಲ್ಲಿ ಈ ರಾಜ್ಯದ ದಲಿತರ ಅಭಿವೃಧ್ದಿಗೆ ಆಧ್ಯತೆ ನೀಡುವಂತೆ ಇರಲಿ ಎಂದು ಈ ಕೆಳಗಿನ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಿಸುತ್ತಿದ್ದೇವೆ.  

1) ಮನೆ-ನಿವೇಶನ-ಭೂಮಿ-ಶಿಕ್ಷಣ-ಉದ್ಯೋಗ-ಆಹಾರ-ಆರೋಗ್ಯದ ಹಕ್ಕು ದಲಿತರಿಗೆ ಸಿಗುವಂತೆ ಬಜೆಟ್ ಮಂಡಿಸಬೇಕು.  

2) ಎಸ್‌.ಸಿ., ಎಸ್‌.ಟಿ., (ಎಸ್‌.ಸಿ.ಎಸ್‌.ಪಿ-ಟಿ.ಎಸ್‌.ಪಿ) ಉಪಯೋಜನೆಗಳ ಸಾಧಕ ಬಾದಕಗಳ ಕುರಿತು ವಿಧಾನಸಭೆಯಲ್ಲಿ ಸಮಗ್ರ ಚರ್ಚೆಯಾಗಬೇಕು.  

3) ಎಸ್‌.ಸಿ., ಎಸ್‌.ಟಿ. ಮೀಸಲಾತಿ ಹೆಚ್ಚಳ ಜಾರಿಯಲ್ಲಿ ಮತ್ತು ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸೇರೆ​‍್ಡ ಮಾಡದೇ ವಂಚಿಸಿದ ಬಗ್ಗೆ ವಿಧಾನಸಭೆಯ ಉಭಯ ಸದನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಬಗ್ಗೆ ಸಮಗ್ರ ಚರ್ಚೆ ಮಾಡಬೇಕು.  

4) ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶೇಷ ಹಣಕಾಸಿನ ನೆರವು ನೀಡಬೇಕು ಮತ್ತು ಅಭಿವೃದ್ದಿಗಾಗಿ ಕಾರ್ಯಯೋಜನೆ ರೂಪಿಸಬೇಕು. ಹಾಗೆಯೇ ಕಳೆದ 24-ವರ್ಷಗಳಿಂದ ದುಡಿಯುತ್ತಿರುವ ಇಲ್ಲಿನ ಹೊರಗುತ್ತಿಗೆ ನೌಕರರ 11-ತಿಂಗಳ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಬೇಕು.  

5) ರಾಜಕೀಯ ಮತ್ತು ಆರ್ಥಿಕ ಸ್ವಾರ್ಥಕ್ಕಾಗಿ ಹೊಸಪೇಟೆಯಲ್ಲಿದ್ದ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆಯನ್ನು ಮುಚ್ಚಿ ರೈತರನ್ನು ಬೀದಿಪಾಲು ಮಾಡಲಾಗಿದೆ. 2023ರಲ್ಲಿ ತಮ್ಮ ಚುನಾವಣೆ ಭರವಸೆಯಂತೆ ಹೊಸಪೇಟೆಯಲ್ಲಿ ಸರ್ಕಾರದ ಸಹಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ತಕ್ಷಣ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು. 

6) ವಿದ್ಯಾವಂತ ಎಲ್ಲಾ ಎಸ್‌.ಸಿ., ಎಸ್‌.ಟಿ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬೇಕು. ಇಲ್ಲವೇ ನಿರುದ್ಯೋಗ ಭತ್ಯೆ ತಿಂಗಳಿಗೆ ರೂ.10,000/- ಕೊಡಬೇಕು.  

7) ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಬರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾನೂನು ರೂಪಿಸಿ ಜಾರಿಗೆ ತರಬೇಕು.  

8) ಹೊಸಪೇಟೆ ನಗರಕ್ಕೆ ಹೊಂದಿಕೊಂಡಿರುವ ಜಂಬುನಾಥನಹಳ್ಳಿ ಮತ್ತು ಸಂಕ್ಲಾಪುರ ಗ್ರಾಮ ಸರ್ವೆ ನಂಬರಿನ ರಾಜ್ಯ ಸರ್ಕಾರದ 366ಎಕರೆ ಜಮೀನನ್ನು ಖಾಸಗಿ ಉದ್ಯಮಗಳಿಗೆ, ಸಂಘ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಮಾರಾಟ ಮತ್ತು ಗುತ್ತಿಗೆ ನೀಡಬಾರದು. ಈ ಜಮೀನನ್ನು ದಲಿತರಿಗೆ, ಬಡವರ ನಿವೇಶನಕ್ಕಾಗಿ ಮತ್ತು ಸರ್ಕಾರದ ಇಲಾಖೆಗಳಿಗಾಗಿ ಮೀಸಲಿಡಬೇಕು.  

9) ರಾಜ್ಯ ಸರ್ಕಾರ ತಕ್ಷಣ ಕನಿಷ್ಠ ವೇತನವನ್ನು ಜಾರಿ ಮಾಡಬೇಕು. ಮತ್ತು ತಿಂಗಳಿಗೆ ರೂ.36,000/- ನಿಗದಿ ಮಾಡಬೇಕು.  

10) ಹೊಸಪೇಟೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಪ್ರಾರಂಭಿಸಬೇಕು.  

11) ಪ್ರಿಯಾಂಕ ಜೈನ್ ಮತ್ತು ಇವರ ತಂಡದಿಂದ ನಡೆದಿರುವ ಬಹುಕೋಟಿ ರೂಪಾಯಿಗಳ ಹಗರಣವನ್ನು ಸರ್ಕಾರ ವಿಶೇಷ ತನಿಖಾ ದಳಕ್ಕೆ ಒಪ್ಪಿಸಬೇಕು. ಮತ್ತು ವಂಚನೆಗೆ ಒಳಗಾದ ಅಮಾಯಕ ಮಹಿಳೆಯರಿಗೆ ಬಡ ರೈತರಿಗೆ ವಾಪಸ್ಸು ಕೊಡಿಸಬೇಕು.  

12) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೆಯನ್ನು ಮುಂದುವರೆಸಬೇಕು.  

13) ದಲಿತರಿಗೆ, ಬಡವರಿಗೆ, ಮಸಣ ಕಾರ್ಮಿಕರಿಗೆ, ಮಾಜಿ ದೇವದಾಸಿ ಮಹಿಳೆಯರಿಗೆ, ಕೃಷಿ ಕೂಲಿಕಾರರಿಗೆ, ಭೂ ಒಡೆತನ ಹಕ್ಕು ಸಿಗುವಂತೆ ಕಾಯ್ದೆ ರೂಪಿಸಬೇಕು. ಮತ್ತು ಸರ್ಕಾರದ ಎಲ್ಲಾ ಜಮೀನುಗಳು ಇಂತಹ ಅರ್ಹರಿಗೆ ಸಿಗುವಂತೆ ಸಮಗ್ರ ಯೋಜನೆ ರೂಪಿಸಬೇಕು.  

14) ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಪಂಗಡ (ಎಸ್‌.ಟಿ), ಬಡ ರೈತರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ತಕ್ಷಣ ಹಕ್ಕು ಪತ್ರ ವಿತರಣೆ ಮಾಡಬೇಕು.  

ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಗೊಳಿಸಬೇಕೆಂದು ಕೋರುತ್ತೇವೆ.