ಸೇತುವೆಯ ಮೇಲೆ ದೊಡ್ಡ ದೊಡ್ಡ ಕಂದಕಗಳ ನಿರ್ಮಾಣ: ಕಣ್ಣು ತೆರೆಯದ ಅಧಿಕಾರಿಗಳು

ಸೇತುವೆಯ ಮೇಲೆ ದೊಡ್ಡ ದೊಡ್ಡ ಕಂದಕಗಳ ನಿರ್ಮಾಣ: ಕಣ್ಣು ತೆರೆಯದ ಅಧಿಕಾರಿಗಳು   Construction of large trenches on the bridge: Officials who turn a blind eye

ಸೇತುವೆಯ ಮೇಲೆ ದೊಡ್ಡ ದೊಡ್ಡ ಕಂದಕಗಳ ನಿರ್ಮಾಣ: ಕಣ್ಣು ತೆರೆಯದ ಅಧಿಕಾರಿಗಳು   

ಆಲಮೇಲ : ವಿಜಯಪುರ - ಕಲಬುರಗಿ ಜಿಲ್ಲೆಗಳ ಒಂದು ಗೂಡಿಸುವ, ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಗಡಿಯನ್ನು ಸಂಪರ್ಕ ಕೊಂಡಿಯಾಗಿರುವ , ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಹಾಗೂ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಗ್ರಾಮಗಳ ಮಧ್ಯೆ ನಿರ್ಮಿಸಿರುವ ದೇವಣಗಾಂವ ಸೇತುವೆ ಅಪಾಯದ ಅಂಚಿನಲ್ಲಿದೆ, ಸೇತುವೆ ಕುಸಿಯುವ ಸಾಧ್ಯತೆ ಇದೆ ಆದರೂ ಅಧಿಕಾರಿಗಳು ಇತ್ತ ಕಣ್ಣು ತೆರೆಯುತ್ತಿಲ್ಲ.  

ಓರಾದ - ಸದಾಶಿವಘಢ ರಾಜ್ಯ ಹೆದ್ದಾರಿ (34) ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಕೂಗು ಅನೇಕ ವರ್ಷಗಳಿಂದ ಈ ಭಾಗದ ಜನರಲ್ಲಿ ಕೇಳಿ ಬರುತ್ತಿದೆ ಆದರೆ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.  

  ಕಳೆದ 2-3 ವರ್ಷಗಳಿಂದ ದುರಸ್ತಿಯಾಗದೆ ಇರುವುದರಿಂದ ಸೇತುವೆ ಮೇಲ್ಭಾಗದಲ್ಲಿ ಮಳೆಯ ನೀರು ನಿಂತು ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ಪ್ರತಿನಿತ್ಯ 20,000ಕ್ಕೂ ಹೆಚ್ಚು ವಾಹನಗಳು ಈ ಸೇತುವೆಯ ಮೂಲಕ ಸಂಚರಿಸುತ್ತವೆ ಆದರೆ ದೊಡ್ಡ ಕಂದಕಗಳು ನೀರು ನಿಂತು ಸೇತುವೆಯ ಮೇಲ್ಭಾಗವು ಸಂಪೂರ್ಣ ಕಿತ್ತುಕೊಂಡು ಹೋಗಿ ಆಳವಾದ ಗುಂಡಿಗಳು ಬಿದ್ದಿವೆ.  

     ಸೇತುವೆಯಯೂ ದೊಡ್ಡ ದೊಡ್ದ ಕಮಾನುಗಳನ್ನು ಹೊಂದಿದ್ದು ಆ ಕಮಾನುಗಳ ರೀತಿಯಲ್ಲಿ ಸೇತುವೆ ಮೇಲ್ಭಾಗದಲ್ಲಿ ಉಬ್ಬು ಮತ್ತು ತಗ್ಗುನಿರ್ಮಾಣಗೊಂಡಿವೆ. ಸೇತುವೆಯ ಮೇಲೆ ಸಂಚರಿಸುವ ವಾಹನ ಸವಾರರು ಗುಂಡಿಯನ್ನು ತಪ್ಪಿಸುವುದಕ್ಕಾಗಿ ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಇದೆ, ಗುಂಡಿಗಳಲ್ಲಿ ಚಕ್ರಗಳು ಸಿಲುಕಿ ಬಿದ್ದು ಅಪಘಾತ ಸಂಭವಿಸಿದ ಅನೇಕ ಉದಾಹರಣೆಗಳು ಇವೆ.ಇದು ಕಳೆದ ಮೂರು ವರ್ಷಗಳಿಂದ ಇದೇ ರೀತಿಯಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.   

ಈ ಸೇತುವೆಯ ಮೇಲೆ ನಿತ್ಯ 10 ಸಾವಿರ ದ್ವಿಚಕ್ರ, ನೂರಾರು ತ್ರಿಚಕ್ರ , ಸಾವಿರಾರು ಕಾರು ಜೀಪ್, 200 ಕ್ಕೂ ಹೆಚ್ಚು ಸಾರಿಗೆ ಸಂಸ್ಥೆ ಬಸ್, 50ಕ್ಕೂ ಹೆಚ್ಚು ಶಾಲಾ ವಾಹನಗಳು, 300 ಕ್ಕೂ ಹೆಚ್ಚು ಸಣ್ಣ ಮತ್ತು ಬೃಹತ್ ಪ್ರಮಾಣದ ಲಾರಿಗಳು, ಈ ಸೇತುವೆ ಮೂಲಕ ಸಂಚರಿಸುತ್ತವೆ, ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮಟ್ಟದ ಅಪಾಯ ಆಗುವ ಮುಂಚೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ ಒಂದು ವೇಳೆ ರಿಪೇರಿ ಮಾಡಲು ಆಗದೆ ಇದ್ದರೆ ಇರಲಿ ಕನಿಷ್ಠ ಪಕ್ಷ ಗುಂಡಿಗಳ ಮುಚ್ಚುವುದೂ ಆಗುವುದಿಲ್ಲವೇ ಎನ್ನುತ್ತಾರೆ ಸಾರ್ವಜನಿಕರು.  

ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ಎದುರಾಗಿದ್ದು ವಾಹನ ಸವಾರರು ಸಂಕಟಪಡುತ್ತಿದ್ದಾರೆ ಅನೇಕ ಜನರು ಬಿದ್ದು ಕೈಕಾಲುಗಳಿಗೆ ಗಾಯಗಳನ್ನು ಮಾಡಿಕೊಂಡಿದ್ದಾರೆ. ಕಳೆದ ವರ್ಷ ದೇವಣಗಾಂವ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿಕೊಂಡು ಸೇತುವೆ ಉಳಿಸಿ ಎಂಬ ಬೃಹತ್ ಪ್ರಮಾಣದ ರಸ್ತೆ ತಡೆದು ಪ್ರತಿಭಟನೆಯನ್ನು ಮಾಡಿ ಸೇತುವೆ ರಿಪೇರಿ ಮಾಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು ಆದರೆ ಕೆಲವೇ ದಿನಗಳಲ್ಲಿ ರಿಪೇರಿ ಮಾಡುತ್ತೇವೆ ಎಂದು ಹೇಳಿ ಹೋದ ಅಧಿಕಾರಿಗಳು ಮತ್ತೆ ಸೇತುವೆಯ ಕಡೆಗೆ ಮುಖ ಮಾಡಿಲ್ಲ. ಸೇತುವೆಯ ಎರಡು ಮಗ್ಗುಲಗಳಲ್ಲಿ ಸಸಿಗಳು ಹುಟ್ಟಿಕೊಂಡು ಮರಗಳಾಗಿ ಬೆಳೆದು ನಿಂತಿವೆ ಇವುಗಳು ಸೇತುವೆಯ ತಳವನ್ನೇ ಅಲುಗಾಡಿಸುತ್ತಿವೆ ಅವುಗಳ ನಿರ್ವಹಣೆ ಕೂಡ ಮಾಡುತ್ತಿಲ್ಲ.  

ಸೇತುವೆಯ ಇತಿಹಾಸ : ಸುಮಾರು ಅರ್ಧ ಕಿ.ಮೀ ಉದ್ದವಿರುವ ಈ ಸೇತುವೆಯು 1960 ರಿಂದ 1963 ರವರೆಗೆ ನಿರ್ಮಿಸಲ್ಪಟ್ಟಿದ್ದು ಗಟ್ಟಿ ಮುಟ್ಟಾದ ಉದ್ದನೆಯ ಬಾಲ ಹೊಂದಿರುವ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದ್ದು ಕಲ್ಲಿನ ಕಂಬಗಳು, ದೊಡ್ಡ ಕಮಾನುಗಳನ್ನು ಹೊಂದಿದೆ ಈ ಕಂಬಗಳು ಹಾಗೂ ಪಕ್ಕದಲ್ಲಿನ ತಡೆಗೋಡೆ ಇನ್ನೂ ಕೂಡ ಗಟ್ಟಿಮುಟ್ಟಾಗಿ ಇದೆ. ಆದರೆ 2002ರಲ್ಲಿ ಸೇತುವೆ ಮೇಲ್ಭಾಗ ಹಾಳಾಗಿದ್ದ ಪರಿಣಾಮ ಮೇಲ್ಭಾಗವನ್ನು ಮರು ನಿರ್ಮಿಸಲಾಗಿದೆ ಆದರೆ ಸದ್ಯ ಇದೇ ಮೇಲ್ಭಾಗ ಮತ್ತೆ ಕುಸಿಯುತ್ತಿದ್ದು ಸೇತುವೆ ಅಡಿಪಾಯ ಅಲುಗಾಡುವ ಸಾಧ್ಯತೆ ಹೆಚ್ಚಾಗಿದೆ.