ರೈತರ ಅನುಕೂಲಕ್ಕಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ: ಶಾಸಕ ರಾಜುಗೌಡ
ದೇವರಹಿಪ್ಪರಗಿ 05: ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬ್ಯಾರೇಜ್ ನಿರ್ಮಿಸುವುದರಿಂದ ಹಳ್ಳದ ದಡದಲ್ಲಿರುವ ರೈತರ ಭೂಮಿಗೆ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಮಂಗಳವಾರದಂದು ಸುಮಾರು 2ಕೋಟಿ ರೂ ವೆಚ್ಚದ ನಾಲಾಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಹಾಗೂ 45 ಲಕ್ಷ ರೂ ವೆಚ್ಚದ ತಾಂಬಾ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆ ನಿರ್ವಹಣೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ಕ್ಷೇತ್ರದಲ್ಲಿ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಹಳ್ಳಗಳಲ್ಲಿ ಹರಿಯುತ್ತಿರುವ ನೀರು ನಿಂತು ಬೇಸಿಗೆ ಸಮಯದಲ್ಲಿ ನೀರಿನ ಅಂತರ್ಜಲ ಮಟ್ಟ ಸಹ ಹೆಚ್ಚುತ್ತದೆ. ಅಲ್ಲದೆ ರಸ್ತೆ ಸಂಪರ್ಕ ಸಹ ಸುರಕ್ಷಿತವಾಗಿರುತ್ತದೆ ಎಂಬ ಉದ್ದೇಶದಿಂದ ಕ್ಷೇತ್ರದ ಹಲವು ಭಾಗಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೈತರ ಬದುಕು ಹಸನಾಗಲು ಸಣ್ಣ ಸಣ್ಣ ಬ್ಯಾರೇಜ್ ಗಳು ನಿರ್ಮಾಣ ಮಾಡಲಾಗುತ್ತಿದೆ ಹಾಗೂ ತಾಂಬಾ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆ ನಿರ್ವಹಣೆ ಕಾಮಗಾರಿಗೆ ಸುಮಾರು 45 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ನಂತರ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಅವರು ಮಾತನಾಡಿ,ಈ ಭಾಗದಲ್ಲಿ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರ ಸತತ ಪ್ರಯತ್ನದಿಂದ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸುಮಾರು 2ಕೋಟಿ ರೂ ವೆಚ್ಚದ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೇಸಿಗೆ ಸಮಯದಲ್ಲಿ ರೈತರಿಗೆ ಬಾವಿ ಹಾಗೂ ಬೋರ್ವೆಲ್ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಹಾಗೂ ರಸ್ತೆ ಸಂಪರ್ಕದಿಂದ ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ ಎಂದು ಹೇಳಿದರು.
ಸಾನಿಧ್ಯವನ್ನು ಸಂಪಗಾಂವಿ ಪ್ರಭುದೇವರ ಬೆಟ್ಟ ಮಹಾರಾಜರು ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ರತ್ನಾಬಾಯಿ ಮಾದರ, ಮತಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ವೀರೇಶ ಕುದರಿ, ಮುಖಂಡರುಗಳಾದ ಗುರುರಾಜ ಆಕಳವಾಡಿ, ಸಂಗನಗೌಡ ಬಿರಾದಾರ, ಶಂಕ್ರೆಪ್ಪ ದುದ್ದಗಿ, ಬಸವಂತ್ರಾಯ ಈಶ್ವರ್ಪಗೋಳ, ರಮೇಶ ಈಶ್ವರ್ಪಗೋಳ, ದಾದಾಗೌಡ ಬಿರಾದಾರ, ಸದಾಶಿವ ಗುಣದಾಳ, ಗುರುಪಾದ ದುದ್ದಗಿ, ಸದಾಶಿವ ದುದ್ದಗಿ, ಶಿವನಗೌಡ ಬಿರಾದಾರ, ಸಿಂದಗಿ ಜಿ.ಪಂ.ಎಇಇ ಜಿ.ವೈ.ಮುರಾಳ, ಸಣ್ಣ ನೀರಾವರಿ ಇಲಾಖೆ ಎಇಇ ವಿಲಾಸ ರಾಠೋಡ,ಬಾಂದಾರ ಕಾಮಗಾರಿ ಗುತ್ತಿಗೆದಾರರಾದ ವಿ.ಎಸ್.ನಾಡಗೌಡ, ಗಂಗನಳ್ಳಿ ತಾಂಬಾ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರಾದ ಗದ್ದೆಪ್ಪಾ ಜಾಲಹಳ್ಳಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಪಾಲ್ಗೊಂಡಿದ್ದರು. ಜಗದೀಶ ತಳವಾರ ನಿರೂಪಿಸಿ, ಸ್ವಾಗತಿಸಿದರು.