ಸಂವಿಧಾನವು ವಿಶ್ವಕುಟುಂಬದ ಪರಿಕಲ್ಪನೆಯ ಪ್ರತೀಕ: ಡಾ. ರಾಘವೇಂದ್ರ ಪಾಟೀಲ

ಸಂವಿಧಾನವು ವಿಶ್ವಕುಟುಂಬದ ಪರಿಕಲ್ಪನೆಯ ಪ್ರತೀಕ: ಡಾ. ರಾಘವೇಂದ್ರ ಪಾಟೀಲ  Constitution symbolizes the concept of world family: Dr. Raghavendra Patil

ಲೋಕದರ್ಶನ ವರದಿ  

ಧಾರವಾಡ, ಸೆ.26: ಭಾರತದ ಸಂವಿಧಾನವು ನಮ್ಮ ಸಂಸ್ಕೃತಿಯ ಸಾರವಾದ ವಿಶ್ವಕುಟುಂಬದ ಪರಿಕಲ್ಪನೆಯ ಪ್ರತೀಕವಾಗಿದೆ. ಸಂವಿಧಾನ ರಚನಾ ಸಮಿತಿಯು ಜನಸಮುದಾಯದ ಬದುಕಿನ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಚರ್ಚಿಸಿ ಸಂವಿಧಾನಕ್ಕೆ ಅಂತಿಮ ರೂಪ ನೀಡಿದೆ ಎಂದು ಸಾಹಿತಿ ಡಾ. ರಾಘವೇಂದ್ರ ಪಾಟೀಲ ಹೇಳಿದರು.  ಕವಿಗಳ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸಂತೋಷ ಹಾನಗಲ್ ರಚಿಸಿರುವ ‘ಸಂವಿಧಾನ ನುಡಿ ಸಂಹಿತೆ’ ಕೃತಿಯನ್ನು ಲೋಕಾರೆ​‍್ಣ ಮಾಡಿ ಅವರು ಮಾತನಾಡಿದರು.  

ಭಾರತದ ಸಂವಿಧಾನವು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಮಹತ್ವದ ದಾಖಲೆಯಾಗಿದೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾಷೆಗೆ ಸಂಬಂಧಿಸಿದ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದ್ದು, ದೇಶದ ಏಕತೆ ಮತ್ತು ಸಮಗ್ರತೆಯನ್ನು ಗೌರವಿಸುವ ರೀತಿಯಲ್ಲಿ ಭಾಷಾ ನೀತಿಯನ್ನು ರೂಪಿಸಲಾಗಿದೆ ಎಂದು ಹೇಳಿದರು.  

ಮಕ್ಕಳು ಒಂದೇ ಭಾಷೆಗೆ ಸೀಮಿತವಾಗದೆ ಬಹುಭಾಷೆಗಳನ್ನು ಕಲಿಯಬೇಕು. ಇದರಿಂದ ನಮ್ಮ ಸಂಸ್ಕೃತಿ ಮತ್ತಷ್ಟು ವಿಸ್ತಾರವಾಗುತ್ತದೆ. ‘ಸಂವಿಧಾನ ನುಡಿ ಸಂಹಿತೆ’ ಕೃತಿಯು ಭಾಷಾಭಿಮಾನಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.  

ಡಾ. ಪ್ರಜ್ಞಾ ಮತ್ತಿಹಳ್ಳಿ ಕೃತಿ ಪರಿಚಯಿಸಿ ಮಾತನಾಡಿ, ಭಾರತದ ಸಂವಿಧಾನವು ಸಮಗ್ರ ದಾಖಲೆಯಾಗಿದೆ. ಸಂವಿಧಾನ ರಚನಾಕಾರರು ವಿವಿಧ ಭಾಷೆಗಳ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡದೆ, ವೈವಿಧ್ಯತೆಯಲ್ಲಿ ಏಕತೆ ಮತ್ತು ಸೌಹಾರ್ದತೆಯೊಂದಿಗೆ ಬದುಕುವ ಆಶಯದೊಂದಿಗೆ ಸಂವಿಧಾನ ರೂಪಿಸಿದ್ದಾರೆ ಎಂದರು.  

ಕೃತಿಯು ಸಮಷ್ಟಿ ಪ್ರಜ್ಞೆಯಿಂದ ರಚಿತವಾಗಿದ್ದು, ಮುಂದಿನ ಪೀಳಿಗೆಗೆ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.  

ಕೃತಿಯ ಲೇಖಕ ಡಾ. ಸಂತೋಷ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಕೃತಿ ಜನಸಾಮಾನ್ಯರ ಬದುಕಿನೊಂದಿಗೆ ಭಾಷೆಯ ಸಂಬಂಧವನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಭಾಷೆಯ ಕುರಿತ ಸವಾಲುಗಳು ಇಂದು ಇನ್ನಷ್ಟು ಮುನ್ನೆಲೆಗೆ ಬಂದಿವೆ. ಈ ಕೃತಿ ನೀತಿ ನಿರ್ಧಾರಕರು ಹಾಗೂ ಸಂಶೋಧಕರಿಗೆ ಉಪಯುಕ್ತವಾಗಲಿದೆ,” ಎಂದರು.  

ಪ್ರಾಧ್ಯಾಪಕ ಡಾ. ಸಣ್ಣವೀರಣ್ಣ ದೊಡಮನಿ ಮಾತನಾಡಿ, ಡಾ. ಸಂತೋಷ ಹಾನಗಲ್ ಅವರು ಸೃಜನಶೀಲ ಬರಹಗಾರ ಹಾಗೂ ಉತ್ತಮ ಸಂಶೋಧಕರಾಗಿದ್ದಾರೆ. ‘ಸಂವಿಧಾನ ನುಡಿ ಸಂಹಿತೆ’ ಕೃತಿ ಮನೋಜ್ಞವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕವನ ವಾಚಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಡಾ. ಲೋಹಿತ್ ನಾಯ್ಕ ಮಾತನಾಡಿ, ಜಗತ್ತಿನಲ್ಲಿ ಭಾಷೆಗಾಗಿ ನಡೆಯುವ ಹೋರಾಟಗಳ ಕುರಿತು ಪ್ರಸ್ತಾಪಿಸಿದರು. ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆ ಮುಖ್ಯವಾಗಿದ್ದು, ಭಾಷೆಯ ಮೂಲಕ ಏಕತೆ ಸಾಧಿಸುವುದು ಸವಾಲಿನ ಕೆಲಸವಾಗಿದೆ ಎಂದರು.  

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನಮಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಸಿ.ಕೆ. ನಾವದಗಿ, ಶ್ರೀಕಾಂತ ದಳವಾಯಿ, ಎಸ್‌.ಜಿ. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.