ಸಹಾನುಭೂತಿಯೇ ಜೀವನ ಚೈತನ್ಯದ ಸ್ಪೂರ್ತಿ- ಹೇಮಗಿರಿಮಠ

ಸಹಾನುಭೂತಿಯೇ ಜೀವನ ಚೈತನ್ಯದ ಸ್ಪೂರ್ತಿ- ಹೇಮಗಿರಿಮಠ Compassion is the inspiration of life - Hemagiri Math

            ಆಲಮಟ್ಟಿ 22 : ಪರಹಿತಕ್ಕಾಗಿ ತೋರುವ ಸಹಾನುಭೂತಿಯೇ ನಮ್ಮ ಜೀವನ ಚೈತ್ರ ಪಯಣದ ಸ್ಪೂರ್ತಿ. ಆದರ್ಶತನದಿಂದ ಕೂಡಿದ ವ್ಯಕ್ತಿತ್ವ ಸಮಾಜದ ಬಹುದೊಡ್ಡ ಅಸ್ತಿ ಎಂದು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಅಭಿಪ್ರಾಯಿಸಿದರು. ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಕರುನಾಡು ಗಾಂಧಿ ಮಂಜಪ್ಪ ಹರ್ಡೇಕರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಯುವಜನತೆ ಪ್ರೀತಿಪೂರ್ವಕ ಸಹಾನುಭೂತಿವುಳ್ಳ ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. 

     ವಿದ್ಯಾರ್ಥಿಗಳ ಕಲಿಕಾ ಜೀವನವೆಂಬುಂದು ಕಠಿಣ ಸತ್ಯ. ಪಕ್ವತೆಯ ಶುದ್ಧ ಚಲನ ವಲನಗಳೊಂದಿಗೆ ಶೈಕ್ಷಣಿಕ ವಲಯದ ಸವಾಲುಗಳನ್ನು ಎದುರಿಸಿ ಧೈರ್ಯದಿಂದ ಆತ್ಮಬಲ ತುಂಬಿಕೊಳ್ಳಬೇಕು. ಅನಗತ್ಯ ಚಿಂತನೆಗಳನ್ನು ತೆಲೆಯಿಂದ ಹೊರಹಾಕಬೇಕು. ಶುದ್ಧಚಾರಿತ್ರ್ಯ ಪವಿತ್ರತೆಯ ಕಣಜಗಳಾಗಿದ್ದು ಮನಸ್ಸುನ್ನು ಅದು ಜ್ಞಾನದ ಮೌಲ್ಯದೆಡೆಗೆ ಕೊಂಡೊಯ್ಯುತ್ತದೆ. ಆ ದಿಸೆಯಲ್ಲಿ ದುಶ್ಚಟಗಳ ಮೋಹ ಕಿತ್ತಾಕಿ ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಓದಾಭ್ಯಾಸದ ಕಾರ್ಯವ್ಯಾಪ್ತಿ ನಿರಂತರ ಹಾಗೂ ವ್ಯಾಪಕ ವಿಸ್ತಾರಗೊಳಿಸಿಕೊಳ್ಳಬೇಕು ಎಂದರು. 

    ಕಲಿಕಾವಧಿಯಲ್ಲಿ ಪ್ರಾಪಂಚಿಕ ವಿಷಯಗಳಿಗೆ ಮಹತ್ವ ನೀಡಬೇಡಿ. ಮೊಬೈಲ್ ಭೂತದಿಂದ ದೂರಿದ್ದು ಓದಿಗಾಗಿ ಮನಸ್ಸು ಸ್ಥಿರವಾಗಿರಿಸಿಕೊಳ್ಳಿ. ಮನಭಾವದ ಅಂತರಂಗ ಪಠ್ಯ ಪುಸ್ತಕಕ್ಕೆ ಮುಡುಪಾಗಿಡಿಸಿಕೊಂಡರೆ ಭವಿಷ್ಯದಲ್ಲಿ ಉದ್ಭವಿಸಬಹುದಾದ ಕಷ್ಟದ ಪರಂಪರೆಗಳನ್ನು ಸಲೀಸಾಗಿ ದಾಟಬಹುದು. ಆ ಹಿನ್ನೆಲೆಯಲ್ಲಿ ಕಷ್ಟಪಟ್ಟು, ಇಷ್ಟಪಟ್ಟು ಓದಿ ಸರ್ವಸ್ವ ತಮ್ಮದಾಗಿಸಿಕೊಳ್ಳಬೇಕು   ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

   ಒಳಿತಿನ ಸದ್ವಿಚಾರಗಳು ನಿಮ್ಮಲ್ಲಿ ದೃಢನಂಬಿಕೆ ಸೃಜೀಸುತ್ತವೆ. ಶಿಕ್ಷಣ ಜೀವನ ವಿಕಾಸಕ್ಕೆ ಕಾರಣವಾಗಿದೆ. ನೀತಿವಂತರಾಗಿ ಕಲಿಕಾ ಹಂತ ಜಯಸಿ ಜೀವನದಲ್ಲಿ ಏನನ್ನಾದರೂ ಹೊಸತನವನ್ನು ಸಾಧಿಸಿ ಎಂದು ಯುವ ಮನಗಳಿಗೆ ಅವರು ಸಲಹೆಯಿತ್ತರು. 

   ನಾಡಿನ ಹಿತಕ್ಕಾಗಿ ಹಗಲಿರುಳು ಶ್ರಮಿಸಿರುವ ತಪಸ್ವಿ ಶರಣ ಮಂಜಪ್ಪ ಹರ್ಡೇಕರ ಅವರ ವಿಶಾಲ ತತ್ವಗಳು,ಚಿಂತನೆಗಳು, ಮಹತ್ಕಾರ್ಯಗಳು ವಿದ್ಯಾರ್ಥಿಗಳು ಅರಿಯಬೇಕು. ಮಂಜಪ್ಪನವರ ಬದುಕು ಸೃಜನಶೀಲ, ಚರಿತ್ರೆ ಅದಮ್ಯಶೀಲ.ಸಾಮಾಜಿಕ ದೃಷ್ಟಿಕೋನ ಅದ್ಭುತಶೀಲ ಅಗಿವೆ ಎಂದು ಪ್ರಭುಸ್ವಾಮಿ ಹೇಮಗಿರಿಮಠ ಬಣ್ಣಿಸಿದರು. ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳು ಎದುರುಗೊಳ್ಳುತ್ತಿವೆ. ಸಿಸಿ ಕ್ಯಾಮರಾಗಳ ಕಣ್ಗಾವಲಿನ ವೆಬ್ ಕಾಸ್ಟಿಂಗ್ ವ್ಯವಸ್ಥೆಯಲ್ಲಿ ಜರುಗಲಿವೆ. ಪರೀಕ್ಷೆಗೆ ಸಿದ್ದರಾಗಿ. ಭಯ ತೊರೆದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆಯನ್ನು ಹಬ್ಬದಂತೆ ಪರಿಗಣಿಸಿ ಯಶಸ್ಸು ಕಾಣಿಬೇಕೆಂದು ಶುಭ ಹಾರೈಸಿದರು. 

   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಸುರೇಶಗೌಡ ಪಾಟೀಲ, ಮಂಜಪ್ಪನವರ ಕಾಯಕ ಚಾರಿತ್ರ್ಯಿಕವಾಗಿವೆ. ಸಮಾಜ ಸೇವಕರಾಗಿ ಜನ ಹಿತಕ್ಕೆ ತಮ್ಮ ಜೀವಮಾನ ಸವೆದಿದ್ದಾರೆ. ಅವರ ವಿಚಾರಧಾರೆಗಳು ಸತ್ವಾದಿ ಸಿರಿವಂತಿಕೆಯಿಂದ ಕೂಡಿವೆ. ಪರಹಿತದ ಕರುಣಾರಸ ಸದಾಚಾರದ ತೃಷೆಯಲ್ಲಿ ಮಿಂದಿವೆ. ಮಂಜಪ್ಪನವರ ಜನ್ಯ ನಿಜಕ್ಕೂ ಕರುನಾಡಿಗೆ ಧನ್ಯತೆಯ ಅಮೃತರೂಪ ಲೇಪಿಸಿದೆ. ಸಮಾಜಕ್ಕೆ ಅವರು ಅತ್ಯಂತ ಪೂಜ್ಯರಾಗಿದ್ದಾರೆ. ಸಮಾಜಗೊಸ್ಕರ ಸರ್ವಸ್ವವನ್ನೂ ಕಳೆದುಕೊಂಡಿರುವ ನಿಷ್ಕಲ್ಮಶ ಆಜ್ಞಾತ ಮಹಾತ್ಮ ಮಂಜಪ್ಪ ಎಂದರು. 

      ಸಮಾಜದ ಒಳಿತು ಜಾಗೃತಿಗಾಗಿ  ಪ್ರಾಧಾನ್ಯತೆ ನೀಡಿ ಹರ್ಡೇಕರ ಮಂಜಪ್ಪ ಅವರು ಗೈದಿರುವ ಸಮಾಜಮುಖಿ ಕಾರ್ಯಗಳು ಆವಣೀರ್ಯವಾಗಿವೆ.ರಾಷ್ಟ್ರ ಧರ್ಮನಿಷ್ಠಗೆ ಜೀವ ಮಿಡಿದಿದೆ, ನಿರಪೇಕ್ಷಿತ ಕಾಯಕ ಕೈಂಕರ್ಯಗಳು ವಿಶಿಷ್ಟವಾಗಿದೆ. ಸಾಮಾಜಿಕ, ನೈತಿಕ ವಿಚಾರವುಳ್ಳ ಧಾರ್ಮಿಕ, ಶೈಕ್ಷಣಿಕ ವಿಭೂತಿ ತತ್ವ ಸಿದ್ದಾಂತಗಳು ಮಂಜಪ್ಪನವರ ಮೇರು ವ್ಯಕ್ತಿತ್ವ ದೃಢೀಕರಿಸುತ್ತವೆ. ಮಂಜಪ್ಪನವರ ಹುಟ್ಟು ಬನವಾಸಿಯಾದರೂ ಕಾಯಕದ ಕರ್ಮಭೂಮಿ ಆಲಮಟ್ಟಿಯಿಂದಲೇ ಸೇವಾ ಕಾವ್ಯದ ಕಾರ್ಯಗಳು ವೈವಿಧ್ಯತೆಯಿಂದ ನಡೆದಿವೆ. ಅವರ ಹುಟ್ಟು ಕಾಯಕ ನಿರ್ಮಲೋದಕದ ಸಾರ್ಥಕ ಭಾಷ್ಪ ನವೀಕರಿಸುತ್ತದೆ. ಸಾಫಲ್ಯದ ವಿಶೇಷರೂಪ ಪಡೆದಿದೆ. ಅವರ ವೈಶಿಷ್ಟ್ಯಗುಣ ಸ್ವಭಾವ ಸಮಾಜಕ್ಕೆ ಬೆರಗು ಮೆರಗು ತಂದಿದೆ ಎಂದರು. 

     ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಮಂಜಪ್ಪನವರ ಬಗ್ಗೆ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಇರಿಸಿದ ಪ್ರೀತಿ,ಅಭಿಮಾನ,ಗೌರವ ಬಿಚ್ಚಿಟ್ಟರು. ಕೃಷ್ಣಾ ನದಿಯ ಹಿನ್ನೀರಿನಲ್ಲಿ ಅವಸಾನದಂಚಿನಲ್ಲಿ ಮರೆಯಾಗುತ್ತಿದ್ದ ಮಂಜಪ್ಪನವರ ಸಮಾಧಿ ಸ್ಥಳಾಂತರಕ್ಕೆ ಸಿದ್ದಲಿಂಗ ಶ್ರೀಗಳವರ ಪ್ರೇರಣೆಯಾಗಿತ್ತು. ಆ ಐತಿಹ್ಯ ನೋಟ ಎಂದು ಮರೆಯಲಾಗದು ಎಂದರು. 

   ಮುಖ್ಯ ಶಿಕ್ಷಕ ಎಸ್‌.ಆಯ್‌.ಗಿಡ್ಡಪ್ಪಗೋಳ, ಹಿರಿಯ ವರ್ತಕೆ ಗಂಗಮ್ಮ ಮುಚ್ಚಂಡಿ, ಸಮಾಜ ಸೇವಕ ಎ.ಎಂ.ಲಷ್ಕರಿ, ಪಪಂ ಸದಸ್ಯ ಈರಣ್ಣ ಗೋನಾಳ,ನಿಡಗುಂದಿಯ ಲೋಕಪ್ಪ ಕುಚಬಾಳ, ವಿಜಯಪುರ ವಕೀಲ ಸುರೇಶ ಕಟ್ಟಿಮನಿ, ಪತ್ರಕರ್ತ ಗಂಗಾಧರ ಹಿರೇಮಠ,  ವರ್ತಕ ರಾಜು ಮುಚ್ಚಂಡಿ, ಹಣಮಂತ ಬೇವಿನಕಟ್ಟಿ, ಬಸು, ವಾಹನ ಚಾಲಕ ಜಹೀರ ಖಾಜಿ, ಶಾಮಿಯಾನ ಮುಖ್ಯಸ್ಥ ಸುನೀಲ ಮೊದಲಾದವರಿಗೆ ಸನ್ಮಾನಿಸಲಾಯಿತು. 

 ನಗದು ಪುರಸ್ಕಾರ :   ಮಂಜಪ್ಪ ಹರ್ಡೇಕರ ಅವರ ಮೊಮ್ಮಗ ಬೆಂಗಳೂರಿನ ಜಗದೀಶ ಹರ್ಡೇಕರ ಅವರು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ  ಕಾಲೇಜಿಗೆ ಪ್ರಥಮ ಬರುವ ಮಕ್ಕಳಿಗೆ ಕೊಡಮಾಡಿದ ನಗದು ಪುರಸ್ಕಾರವನ್ನು ಕಳೆದ ಬಾರಿಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ  ಪ್ರತಿಭಾವಂತೆ ಬಾಲೆಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜು ಪರವಾಗಿ ಯೋಗ ಗುರು, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ, ಪತ್ರಕರ್ತ ಗಂಗಾಧರ ಹಿರೇಮಠ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ, ಕ್ರೀಡಾ ಸಾಧಕರಿಗೆ, ತಾಲೂಕು ಮಟ್ಟದ ಪ್ರಬಂಧ, ಚಿತ್ರಕಲಾ, ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧಾ ವಿಜೇತರಿಗೆ  ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು. ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ರೂಪಾ ಮುತ್ಕಗಿ, ಶೋಭಾ ಆಕಳವಾಡಿ, ಕಾವೇರಿ ಅಕ್ಕೋಜಿ ಇತರರು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಣ ಪ್ರೇಮಿ ಬಸಯ್ಯ ಶಿವಯೋಗಿಮಠ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ, ಕಾಲೇಜು ಪ್ರಧಾನ ಕಾರ್ಯದರ್ಶಿ ಆಫ್ರಿನ್ ದಾಲರೊಟ್ಟಿ ಇತರರು ವೇದಿಕೆಯಲ್ಲಿದ್ದರು.