ಶಾಲೆಗೆ ಬರುವ ಮಕ್ಕಳು ಜಾತಿಯನ್ನು ಬಿಟ್ಟು ಬಂದಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ

ಶಾಲೆಗೆ ಬರುವ ಮಕ್ಕಳು ಜಾತಿಯನ್ನು ಬಿಟ್ಟು ಬಂದಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ  Children who come to school can get a better education if they cross caste

ಹಾವೇರಿ 12 : ಶಾಲೆಗಳು ದೇವಾಲಯವಿದ್ದಂತೆ. ದೇವಾಲಯದ ಒಳಗಡೆ ನಾವು ಚಪ್ಪಲಿಗಳನ್ನು ಬಿಟ್ಟು ಹೇಗೆ ಹೊಗುತ್ತೇವೆಯೋ, ಹಾಗೆಯೇ ಶಾಲೆ ಒಳಗಡೆ ಜನರು ರಾಜಕೀಯ ಮತ್ತು ಜಾತಿಯನ್ನು ಬಿಟ್ಟು ಬರಬೇಕು. ಅಂದಾಗ ಮಾತ್ರ ಶಾಲೆಯಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಎಂ.ಎಫ್‌. ಭಗವಂತಗೌಡ್ರ ಅವರು ಹೇಳಿದರು.  ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಮಕ್ಕಳಲ್ಲಿ ನೆನಪಿನ ಶಕ್ತಿ, ಏಕಾಗ್ರತೆಯ ಮಟ್ಟ ಕಡಿಮೆ ಆಗುತ್ತಿದೆ.

ಅತಿಯಾದ ಮೊಬೈಲ್ ನೋಡುವುದರಿಂದ, ಟಿವಿ ನೋಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ಮಕ್ಕಳಿಗೆ ಪ್ರತಿದಿನ 10 ರಿಂದ 15 ನಿಮಿಷ ಧ್ಯಾನ ಮಾಡಿಸಬೇಕು. ಯೋಗಾಸನ ಮಾಡಿಸಬೇಕು. ತರಕಾರಿಯನ್ನು ಹೆಚ್ಚು ಉಪಯೋಗಿಸಿ ಬಿಸಿ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಬೇಕು ಎಂದು ತಾಯಂದಿರಿಗೆ ಕಿವಿಮಾತು ಹೇಳಿದರು. ಗ್ರಾಮದ ಜನರಿಗೆ ಮತ್ತು ಶಿಕ್ಷಕ-ಶಿಕ್ಷಕಿಯರಿಗೆ ನಾನು ಅಭಾರಿಯಾಗಿರುತ್ತೇನೆ. ಈ ಗ್ರಾಮದಲ್ಲಿ ದಾನಿಗಳು ಹೆಚ್ಚಾಗಿ ಇರುವುದರಿಂದ ಈ ಶಾಲೆಯಲ್ಲಿ ಎಸ್ಡಿಎಂಸಿ ಅವರು ಮತ್ತು ಊರಿನವರು ಸೇರಿಕೊಂಡು ಮುಂದಿನ ವರ್ಷ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ನಂತರ ಸರಕಾರವೇ ಇಂಗ್ಲಿಷ್ ಮೀಡಿಯಂ ಶಾಲೆಯನ್ನಾಗಿ ಮಾಡಬಹುದು. ಹಾಗೆಯೇ ಮುಂದೆ ಕೆಪಿಎಸ್ ಶಾಲೆಯನ್ನಾಗಿ ಮೇಲ್ದರ್ಜೆಗೆ ಪರಿವರ್ತನೆ ಮಾಡುತ್ತದೆ ಎಂದು ಊರಿನ ಜನರಿಗೆ ಕಿವಿಮಾತು ಹೇಳಿದರು.  

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರಿಗೆ ಬೆಳ್ಳಿ ಉಂಗುರವನ್ನು ಕೊಡುವ ಮುಖಾಂತರ ಸನ್ಮಾನಿಸಿ ಗೌರವಿಸಲಾಯಿತು. ಬಹುಮಾನ ವಿತರಣೆ: ಪ್ರಾಥಮಿಕ ಶಾಲೆಯಲ್ಲಿ ಘಟಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಮಕ್ಕಳು ಹಳ್ಳಿ ಸೊಬಗಿನ ಸುಗ್ಗಿ ಹಾಡುಗಳು, ಪೂರ್ವದಲ್ಲಿನ ಹೋರಾಟಗಾರ ಜೀವನದ ರೂಪುರೇಶೆಗಳು ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ವೀರ ಯೋಧರು ಯಾವ ರೀತಿ ಹೋರಾಟ ಮಾಡಿದರು ಹೀಗೆ ಹಲವಾರು ರೀತಿಯ ನೃತ್ಯಗಳನ್ನು ಪ್ರದರ್ಶನ ಮಾಡಿ ಶಾಲಾ ಮಕ್ಕಳು ನೋಡುಗರ ಗಮನ ಸೇಳೆದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿಕ್ಕನಗೌಡ ಪಾಟೀಲ, ಮುಖಂಡರಾದ ಶಿವಪ್ಪ ತಿಮ್ಮಣ್ಣನವರ, ಶಿವಪ್ಪ ಗೋಪಾಳಿ, ಎಸ್ಡಿಎಂಸಿ ಅಧ್ಯಕ್ಷ ಎಂ.ಎಂ.ಅಗಡಿ, ಕಾರ್ಯಕ್ರಮದ ಸಾನಿಧ್ಯವಹಿಸಿದ ಪಕ್ಕಿರಯ್ಯ ಹಿರೇಮಠ, ಸಿ.ಪಿ.ಭಜಂತ್ರಿ, ಶಂಭು ದೇಶಳ್ಳಿ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತಿ ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.