ಧಾರವಾಡ13: ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಹಿಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಡೆಯುತ್ತಿರಲಿಲ್ಲ. ನಮಗೆ ಅವಕಾಶಗಳು ಸಿಗುತ್ತಿರಲಿಲ್ಲ. ಇಂದು ಹಲವಾರು ಅವಕಾಶಗಳು ದೊರೆಯುತ್ತಿದ್ದು, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು 'ಸಾಹಸಿ' ಮಕ್ಕಳ ವೇದಿಕೆಯಿಂದ ನಗರದ ಟಿ.ಸಿ.ಡಬ್ಲ್ಯು ಆವರಣದಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನಿವೃತ್ತ ಶಿಕ್ಷಕಿ ಹಾಗೂ ಮಕ್ಕಳ ಸಾಹಿತಿ ದಮಯಂತಿ ನರೇಗಲ್ರವರು ಹೇಳಿದರು.
ಶಿಬಿರವನ್ನು ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಇಂತಹ ಶಿಬಿರವನ್ನು ಆಯೋಜಿಸಿರುವ ಸಂಘಟಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ ಮುಂದೆಯೂ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಹೇಳಿದರು.
ಬ್ರೆಕ್ಥ್ರೂ ಸೈನ್ಸ್ ಸೊಸೈಟಿಯ ಜಿಲ್ಲಾ ಸಂಚಾಲಕರಾದ ದೀಪಾ ವಿ. ಮಾತನಾಡಿ ಮಕ್ಕಳು ಸಮಾಜದ ಭವಿಷ್ಯವೆನ್ನುತ್ತಾರೆ. ಅವರಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪುಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಅದರಲ್ಲೂ ಕೊಳಗೇರಿಗಳ ಮಕ್ಕಳಿಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಇಂದಿನ ಟಿವಿ ಮಾದ್ಯಮ, ಮೊಬೈಲ್ಗಳ ಅತಿಯಾದ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿದ್ದು. ಉನ್ನತ ಭಾವನೆಗಳು, ಮೌಲ್ಯಗಳು ನಶಿಸಿಹೋಗುತ್ತಿವೆ.
ಧಾರವಾಡ-ಹುಬ್ಬಳ್ಳಿಯ ಹಲವಾರು ಕೊಳಗೇರಿಗಳಲ್ಲಿ ನಮ್ಮ ಸಂಘಟನೆಗಳಿಂದ ಪ್ರತಿ ಭಾನುವಾರ ಮಕ್ಕಳಿಗೆ ಆಟ, ಹಾಡು, ಮೌಲ್ಯಗಳನ್ನು ಬೆಳೆಸುವ ನೀತಿ ಕಥೆಗಳನ್ನು ಹೇಳುತ್ತ ಬಂದಿದ್ದು, ಅದರ ಭಾಗವಾಗಿ ಈ ಶಿಬಿರವನ್ನು ನಡೆಸಲಾಗುತ್ತಿದೆ. ಎಲ್ಲ ಮಕ್ಕಳು ಸಂತೋಷದಿಂದ ಶಿಬಿರದಲ್ಲಿ ಪಾಲ್ಗೊಂಡು ಹೊಸ ವಿಷಯಗಳನ್ನು ಕಲಿಯೋಣ ಎಂದು ಎರಡು ದಿನದ ಶಿಬಿರದ ರೂಪುರೇಷಗಳನ್ನು ವಿವರಿಸಿದರು.
'ಸಾಹಸಿ' ಮಕ್ಕಳ ವೇದಿಕೆಯ ರಮೇಶ ಹೊಸಮನಿ ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಗಂಗಾ ಕೋಕರೆ ಉಪಸ್ಥಿತರಿದ್ದರು. ಧಾರವಾಡದ ವಿವಿಧ ಕೊಳಗೇರಿಗಳು ಹಾಗೂ ಬಡಾವಣೆಗಳ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು, ಎರಡು ದಿನಗಳ ಶಿಬಿರದಲ್ಲಿ ಮಹಾನ್ ವ್ಯಕ್ತಿಗಳ ಪರಿಚಯ, ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಕುಶಲ ಕಲೆಯ ಅನಾವರಣ, ಹಾಡು, ನಾಟಕ, ನೃತ್ಯ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.